ಇದುವರೆಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸುತ್ತಿದ್ದ ಮೋದಿ ಇದೀಗ ಪಂಚ ರಾಜ್ಯಗಳ ಚುನಾವಣೆಯಲ್ಲಿ ಆಶ್ವಾಸನೆ ಕೊಡುತ್ತಿದ್ದಾರೆ : ಬಿಜೆಪಿಗೆ ಕುಟುಕಿದ ಸಿಎಂ ಸಿದ್ದು - Karavali Times ಇದುವರೆಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸುತ್ತಿದ್ದ ಮೋದಿ ಇದೀಗ ಪಂಚ ರಾಜ್ಯಗಳ ಚುನಾವಣೆಯಲ್ಲಿ ಆಶ್ವಾಸನೆ ಕೊಡುತ್ತಿದ್ದಾರೆ : ಬಿಜೆಪಿಗೆ ಕುಟುಕಿದ ಸಿಎಂ ಸಿದ್ದು - Karavali Times

728x90

5 November 2023

ಇದುವರೆಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸುತ್ತಿದ್ದ ಮೋದಿ ಇದೀಗ ಪಂಚ ರಾಜ್ಯಗಳ ಚುನಾವಣೆಯಲ್ಲಿ ಆಶ್ವಾಸನೆ ಕೊಡುತ್ತಿದ್ದಾರೆ : ಬಿಜೆಪಿಗೆ ಕುಟುಕಿದ ಸಿಎಂ ಸಿದ್ದು

ನವೆಂಬರ್ 15ರೊಳಗೆ ಬರ ಪರಿಸ್ಥಿತಿ ಅಧ್ಯಯನ ಹಾಗೂ ಜನರ ಭೇಟಿ ಮಾಡಿ ವರದಿ ನೀಡುವಂತೆ ಉಸ್ತುವಾರಿ ಸಚಿವರುಗಳಿಗೆ ಸೂಚಿಸಿದ ಸಿದ್ದರಾಮಯ್ಯ


ಮೈಸೂರು, ನವೆಂಬರ್ 05, 2023 (ಕರಾವಳಿ ಟೈಮ್ಸ್) : ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ನವೆಂಬರ್ 15ರೊಳಗೆ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯ ಅಧ್ಯಯನ ಹಾಗೂ ಜನರನ್ನು ಭೇಟಿ ಮಾಡಿ ವರದಿ ನೀಡುವಂತೆ ಪತ್ರ ಬರೆಯಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಯಿಸಿದ ಅವರು ಬರ ಪರಿಹಾರ ಕಾರ್ಯಗಳಿಗೆ 900 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದ್ದು, ಪರಿಹಾರ ಕಾರ್ಯಗಳು ಪ್ರಾರಂಭವಾಗಿವೆ. ಕೇಂದ್ರ ಸರಕಾರದಿಂದ ಹಣ ಬಿಡುಗಡೆಯಾಗಿಲ್ಲ ಎಂದು ಯಾವುದೇ ಕೆಲಸ ನಿಲ್ಲಿಸಿಲ್ಲ. ಕುಡಿಯುವ ನೀರು, ಉದ್ಯೋಗ ನೀಡುವುದು ಯಾವುದೂ ನಿಂತಿಲ್ಲ ಎಂದರು. 

ನಾವು ಪತ್ರ ಬರೆದ ಮೇಲೆ 600 ಕೋಟಿ ರೂಪಾಯಿಗಳನ್ನು ಮಹತ್ಮಾ ಗಾಂಧಿ ನರೇಗಾ ಯೋಜನೆಯಡಿ ನಿನ್ನೆ ಹಣ ಬಿಡುಗಡೆ ಮಾಡಿದ್ದಾರೆ. 33,000 ಕೋಟಿ ರೂಪಾಯಿಗಳಷ್ಟು ಹಾನಿಯಾಗಿದ್ದು, ಮಾರ್ಗಸೂಚಿ ಪ್ರಕಾರ 17,900 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಬೇಕೆಂದು ಕೋರಿದ್ದೇವೆ. ಇವತ್ತಿನವರೆಗೆ ನಮ್ಮ ರಾಜ್ಯದ ಮಂತ್ರಿಗಳಿಗೆ ಕೇಂದ್ರ ಸಚಿವರು ಭೇಟಿಗೆ ಅವಕಾಶವನ್ನೇ ನೀಡಿಲ್ಲ. ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಸಚಿವರನ್ನು ದೆಹಲಿಗೆ ಕಳುಹಿಸಲಾಗಿತ್ತು. ಮೂವರಿಗೂ ಭೇಟಿಗೆ ಅವಕಾಶ ನೀಡಿಲ್ಲ. ಪ್ರಧಾನ ಮಂತ್ರಿಗಳೂ ಸಮಯಾವಕಾಶ ನೀಡಿಲ್ಲದ ಕಾರಣ ಕೇಂದ್ರ ಸರಕಾರದ ಕೃಷಿ, ಕಂದಾಯ ಹಾಗೂ ಗೃಹ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಬಂದಿದ್ದಾರೆ ಎಂದ ಸಿಎಂ ಸಿದ್ದು ಭೇಟಿಗೆ ಅವಕಾಶ ನೀಡದಿರುವುದು ಕೇಂದ್ರಕ್ಕೆ ಕರ್ನಾಟಕದ ಬಗ್ಗೆ ಇರುವ ನಿರ್ಲಕ್ಷ್ಯ ಹಾಗೂ ಮಲತಾಯಿ ಧೋರಣೆಗೆ ಸಾಕ್ಷಿ. ನಾವು ಅಧಿಕಾರಕ್ಕೆ ಬಂದಿರುವುದು ಸಹಿಸಲು ಸಾಧ್ಯವಾಗುತ್ತಿಲ್ಲ. ಕರ್ನಾಟಕದಲ್ಲಿ ನಮ್ಮ ಪಕ್ಷ 135 ಸ್ಥಾನ ಗಳಿಸುತ್ತದೆ ಎಂದು ಅವರು ನಿರೀಕ್ಷಿಸಿರಲಿಲ್ಲ. ರಾಜ್ಯ ಬಿಜೆಪಿಯವರು ಕೇಂದ್ರಕ್ಕೆ ತಪ್ಪುಚಿತ್ರಣ ನೀಡಿದ್ದರು. ಅದಕ್ಕಾಗಿ  ನರೇಂದ್ರ ಮೋದಿಯವರು ಕರ್ನಾಟಕದಲ್ಲಿ ಬದಲಾವಣೆ ಮಾಡಿಬಿಡುತ್ತೇವೆ ಎಂದು ಸಾಕಷ್ಟು ಬಾರಿ ಭೇಟಿ ನೀಡಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಪರಿಹಾರಕ್ಕಾಗಿ ಒತ್ತಾಯ ಮಾಡಲು ಪ್ರಧಾನ ಮಂತ್ರಿಗಳಿಗೆ ಹಾಗೂ ಗೃಹ ಸಚಿವರಿಗೆ ಪುನಃ ಪತ್ರ ಬರೆಯಲಾಗಿದೆ.

ಬಿಜೆಪಿ ಅವರು ರಾಜ್ಯದಲ್ಲಿ ಪ್ರವಾಸ ಮಾಡಿ ಏನು ಮಾಡುತ್ತಾರೆ? ಅವರಿಗೆ ಕರ್ನಾಟಕದ ರೈತರ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ ದೆಹಲಿಗೆ ತೆರಳಿ ಹಣ ಬಿಡುಗಡೆ ಮಾಡಿಸಲಿ ಎಂದವರು ಸವಾಲು ಹಾಕಿದರು. 

ಒಬ್ಬಂಟಿಗಳಾಗಿದ್ದ ಗಣಿಗಾರಿಕೆ ಅಧಿಕಾರಿ ಪ್ರತಿಮಾ ಅವರ ಕೊಲೆಯಾಗಿರುವ ವಿಷಯ ಈಗಷ್ಟೇ ಗಮನಕ್ಕೆ ಬಂದಿದೆ. ಕಾರಣ ಏನೆಂದು ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆಯಾಗಿ ಸತ್ಯ ತಿಳಿಯಲಿದೆ ಎಂದ ಸಿಎಂ ಇಲ್ಲಿಯ ತನಕ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸುತ್ತಿದ್ದ ಮೋದಿ ಅವರು ಪಂಚ ರಾಜ್ಯಗಳ ಚುನಾವಣೆಯಲ್ಲಿ ಆಶ್ವಾಸನೆ ಕೊಡುತ್ತಿದ್ದಾರೆ. ನಮಗೆ ರಾಜ್ಯ ದಿವಾಳಿಯಾಗುತ್ತದೆ, ಕೊಡಲಾಗುವುದಿಲ್ಲ ಎಂದು ರಾಜಕೀಯವಾಗಿ ಹೇಳಿದ್ದರು. ಬಡವರಿಗೆ ಗ್ಯಾರಂಟಿ ಯೋಜನೆ ನೀಡುವುದು ಟೀಕಿಸುವ ವಿಚಾರವಲ್ಲ. ಅವರು ಗ್ಯಾರಂಟಿಗಳನ್ನು ಕೊಟ್ಟರೆ ಅದು ಬಡವರ ಕಾರ್ಯಕ್ರಮ. ನಾವು ನೀಡಿದರೆ ರಾಜ್ಯ ದಿವಾಳಿಯಾಗುತ್ತದೆ ಎನ್ನುತ್ತಾರೆ. ಅವರೇನೇ ಹೇಳಿದರೂ ನಾವು ಬಡವರ, ಸಾಮಾನ್ಯ ಜನರ, ಹಳ್ಳಿಗಾಡಿನ, ಎಲ್ಲಾ ಜಾತಿಯ ಬಡವರ ಪರವಾಗಿದ್ದೇವೆ ಎಂದರು. 

ಸಿಎಂ ಕುರ್ಚಿ ಬಗ್ಗೆ ಬಿಜೆಪಿಯವರು ಚರ್ಚೆ ಮಾಡುತ್ತಿದ್ದಾರೆ. ನಮ್ಮ ಶಾಸಕರು ಸಚಿವರು ಈ ಬಗ್ಗೆ ಮಾತನಾಡಕೂಡದು ಎಂದು ತಿಳಿಸಲಾಗಿದೆ. ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ ಮಾಡಲಾಗಿದ್ದು, ಇನ್ನು ಮುಂದೆ ಮುಖ್ಯಮಂತ್ರಿಗಳ ಸ್ಥಾನದ ಬಗ್ಗೆ ಮಾತನಾಡಬಾರದು. ಏನಿದ್ದರೂ ನಿಮ್ಮ ಕ್ಷೇತ್ರಗಳ ಸಾಧನೆಗಳ ಬಗ್ಗೆ ಮಾತನಾಡಿ ಎಂದು ಸೂಚಿಸಲಾಗಿದೆ ಎಂದ ಮುಖ್ಯಮಂತ್ರಿಗಳು ಕಾಂತರಾಜು ವರದಿ ಸುಟ್ಟು ಹಾಕಬೇಕೆಂದು ಮಾಜಿ ಸಚಿವ  ಕೆ.ಎಸ್. ಈಶ್ವರಪ್ಪ ಅವರು ಹೇಳಿದ್ದಾರೆ. ಹಿಂದೆ ಕಾಂತರಾಜು ವರದಿ ಜಾರಿ ಮಾಡಿ ಎಂದು ಈಶ್ವರಪ್ಪ ಭಾಷಣ ಮಾಡಿದ್ದರು. ಅವರ ಮಾತಿಗೆ ಬೆಲೆ ಇದೆಯೇ? ವರದಿ ನೀಡಿದರೆ ಅದನ್ನು ಸ್ವೀಕರಿಸುತ್ತೇವೆ. ವರದಿಯಲ್ಲಿ ಏನಿದೆ ಎಂದು ನಮಗೆ ತಿಳಿದಿಲ್ಲ ಎಂದರು. 

  • Blogger Comments
  • Facebook Comments

0 comments:

Post a Comment

Item Reviewed: ಇದುವರೆಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸುತ್ತಿದ್ದ ಮೋದಿ ಇದೀಗ ಪಂಚ ರಾಜ್ಯಗಳ ಚುನಾವಣೆಯಲ್ಲಿ ಆಶ್ವಾಸನೆ ಕೊಡುತ್ತಿದ್ದಾರೆ : ಬಿಜೆಪಿಗೆ ಕುಟುಕಿದ ಸಿಎಂ ಸಿದ್ದು Rating: 5 Reviewed By: karavali Times
Scroll to Top