ಕೊಪ್ಪಳ, ನವೆಂಬರ್ 02, 2023 (ಕರಾವಳಿ ಟೈಮ್ಸ್) : ಎಲ್ಲಾ ಜಿಲ್ಲಾ ಮಂತ್ರಿಗಳು ತಮ್ಮ ಜಿಲ್ಲೆಗಳಿಗೆ ಭೇಟಿ ನೀಡಿ, ಜನರ ಅಹವಾಲುಗಳನ್ನು ಕೇಳಿ, ಅವರ ಕಷ್ಟ-ಸುಖಗಳಿಗೆ ಸ್ಪಂದಿಸುತ್ತಿದ್ದಾರೆ. ಭೀಕರ ಬರಗಾಲ ಇರುವುದರಿಂದ ಜನರ, ರೈತರ ಸಮಸ್ಯೆಗಳನ್ನು ಕೇಳಿ ಸಕಾಲದಲ್ಲಿ ಸ್ಪಂದಿಸಬೇಕೆಂದು ಪ್ರತಿ ಶಾಸಕರಿಗೆ, ಸಚಿವರಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕೊಪ್ಪಳದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ರೈತರ ಬಗ್ಗೆ ಕಾಳಜಿ ಇದ್ದರೆ, ಬಿಜೆಪಿ ಸಂಸದರು ರಾಜ್ಯ ಸರಕಾರವನ್ನು ಟೀಕಿಸುವ ಬದಲು ಕೇಂದ್ರದೊಂದಿಗೆ ಮಾತನಾಡಿ, ರಾಜ್ಯಕ್ಕೆ ಪರಿಹಾರಗಳನ್ನು ಬಿಡುಗಡೆಗೊಳಸಿದರೆ ಉತ್ತಮ. ಕೇಂದ್ರ ಸರಕಾರಕ್ಕೆ 17,900 ಕೋಟಿ ರೂಪಾಯಿ ಬರ ಪರಿಹಾರ ಕೋರಿ ಮನವಿ ಸಲ್ಲಿಸಿದ್ದೇವೆ. ರಾಜ್ಯದ ಸಚಿವರ ಭೇಟಿಗೂ ಸಮಯ ನೀಡದೇ, ಪರಿಹಾರ ಮೊತ್ತವನ್ನು ಬಿಡುಗಡೆ ಮಾಡದೇ ಕೇಂದ್ರ ಸರಕಾರ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರುತ್ತಿದೆ. ಕೇಂದ್ರ ಸರಕಾರ ನರೇಗಾ ಯೋಜನೆಯಡಿ ದಿನಗೂಲಿ ಕಾರ್ಮಿಕರ ವೇತನ 600 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರಕಾರ ಕುಡಿಯುವ ನೀರಿನ ಬವಣೆ ನೀಗಿಸಲು 900 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಜಿಲ್ಲೆಯ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಅನುದಾನ ನೀಡಿದ್ದು, ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಸಲ್ಲಿಸಿದ್ದಲ್ಲಿ, ಸರಕಾರ ತಕ್ಷಣ ಅನುದಾನ ಒದಗಿಸಲಿದೆ ಎಂದ ಸಿದ್ದರಾಮಯ್ಯ ಈ ಹಿಂದೆ ನೀಡುತ್ತಿದ್ದಂತೆ ಕೃಷಿ ಪಂಪಸೆಟ್ ಗಳಿಗೆ ಪೂರಕ ಸೌಲಭ್ಯಗಳನ್ನು ರೈತರಿಗೆ ಮುಂದುವರೆಸಲಾಗುವುದು ಎಂದರು.
ನಾವು ಐದು ಗ್ಯಾರಂಟಿಗಳನ್ನು ಅನುಷ್ಠಾನ ಮಾಡುತ್ತೇವೆ ಎಂದು ಹೇಳಿದ್ದೆವು. ಅದನ್ನು ಈಡೇರಿಸಿದ್ದೇವೆ. ಹಿಂದಿನ ಸರಕಾರ ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿ ಹೋಗಿದ್ದರೂ ಕೂಡ ಐದು ಗ್ಯಾರಂಟಿ ಅನುಷ್ಠಾನ ಮಾಡಿ ನುಡಿದಂತೆ ನಡೆದಿದ್ದೇವೆ ಎಂದು ಸಿಎಂ ಸಿದ್ದರಾಮ್ಯಯ ಸರಕಾರದ ನಡೆಯನ್ನು ಶ್ಲಾಘಿಸಿಕೊಂಡರು.
0 comments:
Post a Comment