ಬೆಳ್ತಂಗಡಿ, ನವೆಂಬರ್ 04, 2023 (ಕರಾವಳಿ ಟೈಮ್ಸ್) : ಏಳು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಕಿರಾತಕ ಪತಿರಾಯನೇ ಕತ್ತು ಹಿಸುಕಿ ಬಳಿಕ ಬಾವಿಗೆ ಹಾಕಿ ಕೊಂದ ಅಮಾನುಷ ಘಟನೆ ಬೆಳ್ತಂಗಡಿ ತಾಲೂಕು, ಬೆಳಾಲು ಗ್ರಾಮದ ಕೆಂಪನೊಟ್ಟು ಎಂಬಲ್ಲಿ ಶುಕ್ರವಾರ (ನ 3) ನಡೆದಿದೆ.
ಮೃತ ಮಹಿಳೆಯನ್ನು ಬೆಳಾಲು ನಿವಾಸಿ ಶಶಿಕಲಾ (27) ಎಂದು ಹೆಸರಿಸಲಾಗಿದ್ದು, ಆರೋಪಿ ಕಿರಾತಕ ಪತಿಯನ್ನು ಸುಧಾಕರ ಎಂದು ಗುರುತಿಸಲಾಗಿದೆ.
ಸುಧಾಕರ ಏಳು ವರ್ಷಗಳ ಹಿಂದೆ ಶಶಿಕಲಾಳನ್ನು ಪ್ರೀತಿಸಿ ಮದುವೆಯಾಗಿದ್ದು, ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕೆಂಪನೊಟ್ಟು ಎಂಬಲ್ಲಿ 6 ವರ್ಷದ ಮಗಳೊಂದಿಗೆ ವಾಸವಾಗಿದ್ದರು. ಸುಧಾಕರನಿಗೆ ಅನೈತಿಕ ಸಂಪರ್ಕ ಇದೆಯೆಂದು ಶಶಿಕಲಾ ಮತ್ತು ಸುಧಾಕರನ ಮಧ್ಯೆ ಗಲಾಟೆಯಾಗುತ್ತಿದ್ದು, ಇದೇ ವಿಚಾರದಲ್ಲಿ ಮನೆಯವರು ಬಂದು ಆಗಾಗ ಸಮಾಧಾನ ಪಡಿಸಿ ಹೋಗುತ್ತಿದ್ದರು ಎನ್ನಲಾಗಿದೆ. ನ. 3 ರಂದು ಬೆಳಿಗ್ಗೆ ಸುಧಾಕರ ಹಾಗೂ ಶಶಿಕಲಾಳ ಮಧ್ಯೆ ಜಗಳವಾಗಿದೆ. ಈ ಸಂದರ್ಭ ಸುಧಾಕರನು ಶಶಿಕಲಾಳ ಕುತ್ತಿಗೆಯನ್ನು ಕೈಯಿಂದ ಒತ್ತಿ ಹಿಡಿದಾಗ ಶಶಿಕಲಾ ನೆಲಕ್ಕೆ ಬಿದ್ದು ಪ್ರಜ್ಞೆ ತಪ್ಪಿದ್ದಾಳೆ. ಬಳಿಕ ಸುಧಾಕರ ಕೋಪದಿಂದ ಶಶಿಕಲಾಳು ಬದುಕಿರಬಾರದೆಂದು ಎತ್ತಿ ಬಾವಿಗೆ ಹಾಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಮೃತ ಶಶಿಕಲಾಳ ಸಹೋದರ ಶಶಿಧರ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 86/2023 ಕಲಂ 302 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
0 comments:
Post a Comment