ಬಂಟ್ವಾಳ, ನವೆಂಬರ್ 17, 2023 (ಕರಾವಳಿ ಟೈಮ್ಸ್) : ಅಕ್ಷರ ದಾಸೋಹ ನೌಕರರಿಗೆ ಚುನಾವಣೆ ಸಂದರ್ಭ ನೀಡಲಾದ ಕೆಲವೊಂದು ಭರವಸೆಗಳ ಈಡೇರಿಕೆಗೆ ಸರಕಾರ ಒಪ್ಪಿಗೆ ನೀಡಿರುವುದರಿಂದ ಗುರುವಾರದಿಂದ ಆರಂಭಗೊಂಡ ಅನಿರ್ದಿಷ್ಟಾವಧಿ ಧರಣಿಯನ್ನು ನೌಕರರು ತಾತ್ಕಾಲಿಕವಾಗಿ ವಾಪಾಸು ಪಡೆದುಕೊಂಡಿದ್ದಾರೆ.
ಅಕ್ಷರ ದಾಸೋಹ ನೌಕರರಿಗೆ ಚುನಾವಣೆ ಸಂದರ್ಭದಲ್ಲಿ ವೇತನ ಏರಿಸುವ ಬಗ್ಗೆ ನೀಡಿದ್ದ ಭರವಸೆಯನ್ನು ತಕ್ಷಣ ಈಡೇರಿಸಲು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಅಕ್ಟೋಬರ್ 30 ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಧರಣಿ ಹಾಗೂ ತಾಲೂಕು ಕೇಂದ್ರಗಳಲ್ಲಿ ಹಲವಾರು ಪ್ರತಿಭಟನೆಗಳು ನಡೆಸಲಾಗಿದ್ದರೂ ಸರಕಾರ ಯಾವುದೇ ಪ್ರತಿಸ್ಪಂದನೆ ತೋರದ ಹಿನ್ನಲೆಯಲ್ಲಿ ನ 16 ರಿಂದ ಬಿಸಿಯೂಟ ಬಂದ್ ಮಾಡಿ ಅನಿರ್ದಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಲಾಗಿತ್ತು.
ಈ ನಡುವೆ ಶಿಕ್ಷಣ ಸಚಿವರು ಸಭೆ ನಡೆಸಿ ಪ್ರಮುಖ ಮೂರು ಬೇಡಿಕೆಗಳಾದ ಹಾಜರಾತಿ ಆಧಾರದಲ್ಲಿ ಕೆಲಸದಿಂದ ತೆಗೆದುಹಾಕುವ ಬಗ್ಗೆ ಚರ್ಚಿಸಲಾಗಿ ಈ ಸಿಬ್ಬಂದಿಯವರನ್ನು ಪಕ್ಕದ ಶಾಲೆಗೆ ತಾತ್ಕಾಲಿಕವಾಗಿ ನಿಯೋಜಿಸಲು ಆದೇಶಿರುತ್ತಾರೆ. ಅಡುಗೆ ಸಿಬ್ಬಂದಿಯ ಕೆಲಸದ ಅವಧಿ 4 ಗಂಟೆಯಿಂದ 6 ಗಂಟೆಗಳೆಂದು ಪರಿಗಣಿಸಲು ಕೇಂದ್ರ ಸರಕಾರಕ್ಕೆ ಪತ್ರ ಬರೆಯಲು ತೀರ್ಮಾನಿಸಿರುತ್ತಾರೆ. ಅಪಘಾತದಲ್ಲಿ ಮರಣ ಹೊಂದಿದ ಮತ್ತು ನಿವೃತ್ತಿ ಹೊಂದಿದ ಅಡುಗೆ ಸಿಬ್ಬಂದಿಯ ಕುಟುಂಬದವರು ಅರ್ಜಿ ಸಲ್ಲಿಸಿದರೆ ಅವರಿಗೆ ಕೆಲಸ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಶಾಲೆಗಳಲ್ಲಿ ಬೆಂಕಿ ಅವಘಡಗಳಿಂದ ಯಾವುದೇ ಅಪಘಾತವಾದರೆ ಅದಕ್ಕೆ ಕಡ್ಡಾಯವಾಗಿ ಎಫ್ ಐ ಆರ್ ದಾಖಲಿಸಿ ಪರಿಹಾರ ನೀಡಲು ಆದೇಶಿಸಲಾಗಿದೆ.
ಈ ಮೇಲಿನ ಬೇಡಿಕೆಗಳನ್ನು ಈಡೇರಿಸಲು ಸರಕಾರ ಒಪ್ಪಿರುವುದರಿಂದ ಕರ್ನಾಟಕ ರಾಜ್ಯ ಪ್ರಗತಿಪರ ಅಕ್ಷರ ದಾಸೋಹ ನೌಕರರ ಸಂಘ (ಎಐಸಿಸಿಟಿಯು) ವತಿಯಿಂದ ಗುರುವಾರ ಬಿ ಸಿ ರೋಡಿನ ಮಿನಿ ವಿಧಾನಸೌಧದ ಮುಂಭಾಗ ನಡೆಯುತ್ತಿದ್ದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.
ಪ್ರತಿಭಟನಾಕಾರರನ್ನುದ್ದೇಶಿಸಿ ಎಐಸಿಸಿಟಿಯು ಜಿಲ್ಲಾಧ್ಯಕ್ಷ ರಾಮಣ್ಣ ವಿಟ್ಲ ಮಾತನಾಡಿ, ಅಕ್ಷರ ದಾಸೋಹ ನೌಕರರು ಕಳೆದ ಇಪ್ಪತ್ತು ವರ್ಷಗಳಿಂದ ಕಡಿಮೆ ವೇತನದಲ್ಲಿ ದುಡಿಯುತ್ತಿದ್ದು ಸರಕಾರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿರುವ ಹಿನ್ನಲೆಯಲ್ಲಿ ಧರಣಿಯನ್ನು ತಾತ್ಕಾಲಿಕವಾಗಿ ವಾಪಾಸು ಪಡೆಯಲಾಗಿದೆ. ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಸಹಿತ ಕೆಲ ಕಾಂಗ್ರೆಸ್ ಮುಖಂಡರು ಆಗಮಿಸಿ ಧರಣಿಯನ್ನು ಬೆಂಬಲಿಸಿ ಸರಕಾರ ನೀಡಿದ ಆಶ್ವಾಸನೆಯನ್ನು ತಕ್ಷಣ ಈಡೇರಿಸುವಂತೆ ಸರಕಾರದ ಮೇಲೆ ಒತ್ತಡ ಹಾಕುವುದಾಗಿ ತಿಳಿಸಿದರು.
ಮುಖಂಡರಾದ ವಿನಯ ನಡುಮೊಗೇರು, ಪುಷ್ಪ ಬೊಂಡಾಲ, ಹೇಮಲತಾ ಬಿಳಿಯೂರು, ಪೂರ್ಣಿಮಾ ಕಾರ್ಲ, ಜಯಂತಿ ಶಂಭೂರು ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment