ಬಂಟ್ವಾಳ, ಅಕ್ಟೋಬರ್ 29, 2023 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಮೆಲ್ಕಾರ್ ಜಂಕ್ಷನ್ನಿನಲ್ಲಿ ಗುರುವಾರ ರಾತ್ರಿ ದಸರಾ ಹಬ್ಬದ ಹುಲಿವೇಷದ ಬ್ಯಾನರ್ ತೆರವುಗೊಳಿಸುತ್ತಿದ್ದವರ ಮೇಲೆ ತಂಡವೊಂದು ತಲವಾರು ದಾಳಿ ನಡೆಸಿ ಮೂವರು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಕಾರ್ಯಾಚರಣೆ ನಡೆಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಪ್ರಮುಖ ಆರೋಪಿಗಳ ಮೂರು ಮಂದಿಯನ್ನು ದಸ್ತಗಿರಿ ಮಾಡಿದ್ದಾರೆ.
ಪಾಣೆಮಂಗಳೂರು ಗ್ರಾಮದ ನಿವಾಸಿ ಶೋಧನ್, ನರಿಕೊಂಬು ಗ್ರಾಮದ ನಿವಾಸಿ ಪ್ರಕಾಶ್ ಹಾಗೂ ಕೃತ್ಯಕ್ಕೆ ಸಹಕರಿಸಿದ ಇನ್ನೋರ್ವ ಆರೋಪಿಯನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನುಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಪಾಣೆಮಂಗಳೂರು ಗ್ರಾಮದ ನಿವಾಸಿ ಸಂದೀಪ್ (28) ತನ್ನ ಸಹೋದರ ದೇವದಾಸ ಹಾಗೂ ಗೆಳೆಯರೊಂದಿಗೆ ಗುರುವಾರ ರಾತ್ರಿ ಮೆಲ್ಕಾರ್ ಬ್ರಿಜ್ ಬಳಿ ವೈಭವ್ ಜುವೆಲ್ಲರ್ ಎದುರು ಭಾಗದಲ್ಲಿ ಹಾಕಿದ್ದ ಹುಲಿ ವೇಷದ ಬ್ಯಾನರ್ ಗಳನ್ನು ತೆರೆವುಗೊಳಿಸುತ್ತಿದ್ದ ವೇಳೆ ಆರೋಪಿಗಳಾದ ಪ್ರಸನ್ನ, ಶೋಧನ್ ನರಹರಿ ಪರ್ವತ ಹಾಗೂ ಪ್ರಕಾಶ್ ಯಾನೆ ಮುನ್ನ ಹಾಗೂ ಇತರರು ದಾಳಿ ನಡೆಸಿ ತಲವಾರಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಚೂರಿ ಇರಿತದಿಂದ ಗಾಯಗೊಂಡಿರುವ ದೇವದಾಸ ಹಾಗೂ ಇತರ ಇಬ್ಬರು ಮಂಗಳೂರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 126/2023 ಕಲಂ 504, 506, 324, 323, 307, ಜೊತೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಸದ್ಯ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
0 comments:
Post a Comment