ಬಂಟ್ವಾಳ, ಅಕ್ಟೋಬರ್ 05, 2023 (ಕರಾವಳಿ ಟೈಮ್ಸ್) : ಹೊಸ ಮದ್ಯದಂಗಡಿಗಳಗೆ ಪರವಾನಿಗೆ ನೀಡುವಂತೆ ರಾಜ್ಯ ಸರಕಾರಕ್ಕೆ ಅಬಕಾರಿ ಇಲಾಖೆ ಇತ್ತೀಚೆಗೆ ಪ್ರಸ್ತಾವನೆ ಸಲ್ಲಿಸುವುದನ್ನು ಭಾರತೀಯ ಮಹಿಳಾ ಒಕ್ಕೂಟ ತೀವ್ರವಾಗಿ ವಿರೋಧಿಸುತ್ತದೆ ಹಾಗೂ ಈ ಪ್ರಸ್ತಾಪಕ್ಕೆ ಸರಕಾರ ಯಾವುದೇ ಕಾರಣಕ್ಕೂ ಸಮ್ಮತಿ ಸೂಚಿಸಬಾರದು ಎಂದು ಭಾರತೀಯ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿ ಭಾರತಿ ಪ್ರಶಾಂತ್ ಆಗ್ರಹಿಸಿದ್ದಾರೆ.
ಬಿ ಸಿ ರೋಡಿನ ಮಿನಿ ವಿಧಾನಸೌಧದ ಮುಂಭಾಗ ಭಾರತೀಯ ಮಹಿಳಾ ಒಕ್ಕೂಟ (ಎನ್ ಎಫ್ ಐ ಡಬ್ಲ್ಯೂ) ಸಂಘಟನೆ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು ಸರಕಾರ ಕೇವಲ ಗಾಂಧಿ ಜಯಂತಿ ಆಚರಿಸಿದರೆ ಸಾಲದು. ಇದೇ ವೇಳೆ ಗಾಂಧೀಜಿಯವರ ಮದ್ಯ ವಿರೋಧಿ ಆದರ್ಶಗಳನ್ನೂ ಪಾಲಿಸಬೇಕೆಂದು ಸರಕಾರವನ್ನು ಆಗ್ರಹಿಸಿದರು.
ಈಗಾಗಲೇ ರಾಜ್ಯದಲ್ಲಿ ವಿವಿಧ ಪರವಾನಗಿಗಳನ್ನು ಹೊಂದಿರುವ ಮದ್ಯದಂಗಡಿಗಳ ಸಂಖ್ಯೆ 12,614 ಇದೆ. ಜನಸಂಖ್ಯೆಗೆ ತಕ್ಕಂತೆ ಮದ್ಯದಂಗಡಿಗಳು ಇಲ್ಲ ಹಾಗೂ ಜನಸಂಖ್ಯೆಯ ಆಧಾರದಲ್ಲಿ ಸಣ್ಣ ಗ್ರಾಮಗಳಲ್ಲೂ ಮದ್ಯದಂಗಡಿಗಳಿಗೆ ಪರವಾನಗಿ ನೀಡುತ್ತೇವೆಂದು ಸಚಿವರು ಹೇಳುವುದು ಬೇಜವಾಬ್ದಾರಿಯ ಹೇಳಿಕೆ. ಇದು ಸಮಾಜದ ಆರೋಗ್ಯಕ್ಕೆ ಹಾನಿಕರ. ಜನಸಂಖ್ಯೆಯ ಆಧಾರದಲ್ಲಿ ಪರವಾನಿಗೆ ವಿತರಿಸಲು ಮದ್ಯದಂಗಡಿಯೇನೂ ಶಾಲೆಯಲ್ಲ, ಆಸ್ಪತ್ರೆಯಲ್ಲ, ಅಂಗನವಾಡಿ ಕೇಂದ್ರವಲ್ಲ ಇಲ್ಲವೇ ಮಾನವ ಪ್ರಗತಿಗೆ ಬೇಕಾದ ಯಾವುದೇ ಮೂಲಭೂತ ಸೌಕರ್ಯವೂ ಅಲ್ಲ. ಈಗಾಗಲೇ ಕುಡಿತದ ಚಟಕ್ಕೆ ಬಿದ್ದ ಪುರುಷರು ತಮ್ಮ ಕುಟುಂಬದ ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತ ಅವರಿಗೆ ನರಕಯಾತನೆ ನೀಡುತ್ತಿದ್ದಾರೆ. ಹಳ್ಳಿಗಾಡುಗಳಲ್ಲಿ ಮತ್ತು ನಗರ ಪ್ರದೇಶಗಳಲ್ಲೂ ಕೂಡ ಮಹಿಳೆಯರ ಬೆವರಿನ ದುಡಿಮೆಯ ಹಣವೆಲ್ಲ ಮದ್ಯದಂಗಡಿಗಳ ಪಾಲಾಗುತ್ತಿರುವುದು ವಾಸ್ತವ. ಬಹುತೇಕ ಮಹಿಳೆಯರ ರಕ್ತ, ಬೆವರು ಮತ್ತು ಕಣ್ಣೀರಿನಿಂದ ಮದ್ಯದಂಗಡಿಗಳ ಖಜಾನೆ ತುಂಬುತ್ತಿದೆ ಎಂದರೆ ಅದು ಅತಿಶಯೋಕ್ತಿಯಲ್ಲ. ಮಹಿಳೆಯರ ಬಗ್ಗೆ ಕಂಬನಿ ಸುರಿಸುವ ಸರಕಾರ ಈ ಎಲ್ಲ ಅಂಶಗಳನ್ನು ಗಮನಿಸಿ ಹೆಜ್ಜೆ ಇಡಬೇಕು ಎಂದು ಭಾರತಿ ಪ್ರಶಾಂತ್ ಆಗ್ರಹಿಸಿದರು.
ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ನೂತನ ಕಾಂಗ್ರೆಸ್ ಸರಕಾರ ಮಹಿಳೆಯರ ಪರ ಗ್ಯಾರಂಟಿಗಳನ್ನು ನೀಡಿ ಮದ್ಯದಂಗಡಿಗಳನ್ನು ತೆರೆದರೆ ಅದು ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತಾದೀತು. ಮಹಿಳೆಯರು ಶಕ್ತಿ ಯೋಜನೆಯಿಂದ ಬೀದಿಯ ಮೇಲೆ ಬಂದು ತಮ್ಮ ಸ್ವಾತಂತ್ರ್ಯವನ್ನು ಅನುಭವಿಸಿದ್ದರು. ಈಗ ಮದ್ಯದಂಗಡಿಗಳನ್ನು ಈ ರೀತಿ ಸರಕಾರ ತೆರೆಯಲು ಪರವಾನಿಗೆ ನೀಡಿದ್ದೇ ಆದರೆ ಮುಂದಿನ ದಿನಗಳಲ್ಲಿ ಅದೇ ಮಹಿಳೆಯರು ಬೀದಿಗೆ ಬಂದು ತಮ್ಮ ‘ಶಕ್ತಿ’ಯನ್ನು ತೋರಿಸುವುದರಲ್ಲಿ ಸಂಶಯವಿಲ್ಲ ಎಂದು ಎಚ್ಚರಿಸಿದರು.
ಎಐವೈಎಫ್ ಬಂಟ್ವಾಳ ತಾಲೂಕು ಘಟಕಾಧ್ಯಕ್ಷ ಪ್ರೇಮನಾಥ ಕೆ, ಕಾರ್ಯದರ್ಶಿ ಶ್ರೀನಿವಾಸ ಭಂಡಾರಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ ಶೇಖರ್, ತಾಲೂಕು ಕಾರ್ಯದರ್ಶಿ ಸುರೇಶ್ ಕುಮಾರ್, ಪ್ರಮುಖರಾದ ಮಮತಾ ಬಂಟ್ವಾಳ, ಮೋಹಿನಿ ಮಠ, ಸರೋಜಿನಿ ಕುರಿಯಾಳ, ಸುಜೀತಾ ಬಿಸಿರೋಡು, ಶಮಿತಾ, ಕೇಶವತಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment