ಬಂಟ್ವಾಳ, ಅಕ್ಟೋಬರ್ 28, 2023 (ಕರಾವಳಿ ಟೈಮ್ಸ್) : ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನಕ್ಕೆ ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿ ಎಂದು ಕೊಯಿಲ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಭಾರತಿ ಕಾರಂತ್ ಹೇಳಿದರು.
ಕೊಯಿಲ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಂಟ್ವಾಳ ಎಸ್ ವಿ ಎಸ್ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ವಿದ್ಯಾರ್ಥಿಯ ಸರ್ವಾಂಗೀಣ ಪ್ರಗತಿಗೆ ಉತ್ತೇಜನ ನೀಡುತ್ತದೆ. ವಿದ್ಯಾರ್ಥಿಯಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಅನಾವರಣಕ್ಕೆ ವೇದಿಕೆಯನ್ನು ಒದಗಿಸಿಕೊಡುತ್ತದೆ. ದೇಹ, ಮನಸ್ಸು, ಸ್ವಚ್ಚತೆ ವ್ಯಕ್ತಿಯ, ಮಾನಸಿಕ ಸ್ಥೈರ್ಯ ತುಂಬಿ ಹೊಂದಾಣಿಕೆ ಮನೋಭಾವವನ್ನು ಬೆಳೆಸುತ್ತದೆ ಎಂದರು.
ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಜಗದೀಶ್ ಕೊೈಲ ಮಾತನಾಡಿ, ಭಾವನಾತ್ಮಕ ಸಂಬಂಧ, ಪ್ರೀತಿಯ ಬೆಸುಗೆ, ಅಗಲಿಕೆಯ ನೋವು ಇವೆಲ್ಲದರ ಜತೆ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವುದಕ್ಕೆ ಎನ್ ಎಸ್ ಎಸ್ ಉತ್ತಮ ವೇದಿಕೆ ಎಂದರು.
ಪಂಜಿಕಲ್ಲು ಪ್ರಗತಿಪರ ಕೃಷಿಕ ದೇವಪ್ಪ ಕುಲಾಲ್ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಸಾಮಾಜಿಕ ಸಾಮರಸ್ಯ, ನಂಬಿಕೆ, ಸೇವಾ ಮನೋಭಾವ, ಶಿಸ್ತು ಮತ್ತು ಸಂಯಮ, ಕ್ರಿಯಾಶೀಲ ಬದುಕು ಇವು ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಪ್ರೇರಣೆ ನೀಡುತ್ತದೆ ಎಂದರು.
ಲಯನ್ಸ್ ಕ್ಲಬ್ ರಾಯಿ-ಸಿದ್ಧಕಟ್ಟೆ ಕಾರ್ಯದರ್ಶಿ ಅನಿಲ್ ಪ್ರಭು ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಭೇಧ ಭಾವವಿಲ್ಲದೆ ಒಂದೇ ಮನಸ್ಸಿನಿಂದ ಭಾಗವಹಿಸಿ ಶಿಬಿರದಲ್ಲಿ ಸಿಗುವ ಉನ್ನತ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಭವಿಷ್ಯದಲ್ಲಿ ಉತ್ತಮ ನಾಯಕರಾಗುವುದಕ್ಕೆ ಪ್ರೇರಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಶಿಬಿರದ ಅಧ್ಯಕ್ಷತೆ ವಹಿಸಿದ್ದ ಎಸ್ ವಿ ಎಸ್ ಕಾಲೇಜು ಪ್ರಾಂಶುಪಾಲ ಡಾ ಸುಯೋಗವರ್ಧನ್ ಡಿ ಎಂ ಮಾತನಾಡಿ, ನಾವೆಲ್ಲರೂ ಒಂದೇ ಎನ್ನುವ ಮನೋಭಾವ ಬೆಳೆಸುವ ಜೊತೆಗೆ ಕೀಳರಿಮೆಯನ್ನು ಹೋಗಲಾಡಿಸುತ್ತದೆ. ನಂಬಿಕೆ, ವಿಶ್ವಾಸ ಏಕತೆಯ ಭಾವನೆಗಳು ಹೇಳಿಕೊಟ್ಟು ಬರುವುದಿಲ್ಲ. ಪ್ರೀತಿ-ವಿಶ್ವಾಸದಿಂದ ಇಡೀ ಜಗತ್ತನ್ನು ಗೆಲ್ಲಬಹುದು. ಜಾತಿ-ಧರ್ಮ, ಮೇಲು-ಕೀಳು ಎನ್ನುವ ಭೇದಭಾವವಿಲ್ಲದೆ ಎಲ್ಲರೂ ಒಂದೇ ಸೂರಿನಡಿಯಲ್ಲಿ ಒಟ್ಟಾಗಿ ಜೀವಿಸುವ ಭಾವೈಕ್ಯತೆಯ ಗುಣವನ್ನು ಬೆಳೆಸುವುದಕ್ಕೆ ಎನ್ ಎಸ್ ಎಸ್ ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಎಸ್ ವಿ ಎಸ್ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸುದರ್ಶನ್ ಬಿ, ಉಪ ಪ್ರಾಂಶುಪಾಲ ಲೆಪ್ಟಿನೆಂಟ್ ಪ್ರದೀಪ್ ಪೂಜಾರಿ, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಸುಜಯಾ ನಾಗೇಶ್, ಯಶೋಧರ ರೈ ದೇರಾಜೆ ಗುತ್ತು, ಎನ್ ಎಸ್ ಎಸ್ ಘಟಕ ನಾಯಕರಾದ ಪವನ್ ಮತ್ತು ಕೀರ್ತನಾ ಭಾಗವಹಿಸಿದ್ದರು.
ಎನ್ ಎಸ್ ಎಸ್ ಶಿಬಿರಾರ್ಥಿಗಳು ಪ್ರಾರ್ಥಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಶಿಬಿರಾಧಿಕಾರಿ ಶಶಿಧರ್ ಎಸ್ ಸ್ವಾಗತಿಸಿದರು. ಸಹ ಶಿಬಿರಾಧಿಕಾರಿಗಳಾದ ರೂಪಾ ವಂದಿಸಿ, ಭವಿತಾ ಕೆ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment