ರೇಶನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಇದ್ದರೂ ಇನ್ನಿಲ್ಲದೆ ಕಾಡುತ್ತಿರುವ ಸರ್ವರ್ ಸಮಸ್ಯೆಯಿಂದ ಜನರಿಂದ ಆಕ್ರೋಶ : ಜನರ ಪ್ರಶ್ನೆಗಳಿಗೆ ಆಹಾರ ಇಲಾಖೆ ನಿರುತ್ತರ - Karavali Times ರೇಶನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಇದ್ದರೂ ಇನ್ನಿಲ್ಲದೆ ಕಾಡುತ್ತಿರುವ ಸರ್ವರ್ ಸಮಸ್ಯೆಯಿಂದ ಜನರಿಂದ ಆಕ್ರೋಶ : ಜನರ ಪ್ರಶ್ನೆಗಳಿಗೆ ಆಹಾರ ಇಲಾಖೆ ನಿರುತ್ತರ - Karavali Times

728x90

8 October 2023

ರೇಶನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಇದ್ದರೂ ಇನ್ನಿಲ್ಲದೆ ಕಾಡುತ್ತಿರುವ ಸರ್ವರ್ ಸಮಸ್ಯೆಯಿಂದ ಜನರಿಂದ ಆಕ್ರೋಶ : ಜನರ ಪ್ರಶ್ನೆಗಳಿಗೆ ಆಹಾರ ಇಲಾಖೆ ನಿರುತ್ತರ

ಬಂಟ್ವಾಳ, ಅಕ್ಟೋಬರ್ 08, 2023 (ಕರಾವಳಿ ಟೈಮ್ಸ್) : ರಾಜ್ಯದ ನೂತನ ಸರಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಇದೀಗ ರೇಶನ್ ಕಾರ್ಡ್ ವ್ಯವಸ್ಥೆಗೆ ಇನ್ನಿಲ್ಲದ ಬೇಡಿಕೆ ಹೆಚ್ಚಾಗಿದೆ. ಪಡಿತರ ಚೀಟಿಗಳಲ್ಲಿ ಲೋಪದೋಷಗಳಿದ್ದಲ್ಲಿ ಗ್ಯಾರಂಟಿ ಯೋಜನೆಗಳು ಜನರ ಕೈಗೆಟುಕುತ್ತಿಲ್ಲ. ಇದಕ್ಕಾಗಿ ಜನ ರೇಶನ್ ಕಾರ್ಡ್ ಲೋಪದೋಷ ಸರಿಪಡಿಸಲು ಹಾಗೂ ತಿದ್ದುಪಡಿಗಳನ್ನು ಮಾಡಲು ಕಾಯುತ್ತಿದ್ದಾರೆ. ಆದರೆ ಸರಕಾರ ರೇಶನ್ ಕಾರ್ಡ್ ಪೋರ್ಟಲ್ ತೆರೆಯದೆ ಇದ್ದುದರಿಂದ ಈ ಎಲ್ಲಾ ಸಮಸ್ಯೆಗಳು ಪರಿಹಾರವಾಗದೆ ಜನ ಚಡಪಡಿಸುವಂತಾಗಿದೆ. 

ಇದೀಗ ಸರಕಾರ ಒಂದೆರಡು ಬಾರಿ ರೇಶನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿ ಪೋರ್ಟಲ್ ತೆರೆದಿದೆಯಾದರೂ ಸರ್ವರ್ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿರುವುದರಿಂದ ಜನ ತಾಸುಗಟ್ಟಲೆ-ದಿನಗಟ್ಟಲೆ ಸೇವಾ ಕೇಂದ್ರಗಳ ಬಾಗಿಲಲ್ಲಿ ಕಾಯುತ್ತಿರುವಂತಹ ದೃಶ್ಯಗಳು ಕಂಡು ಬರುತ್ತಿದೆ. ರಾಜ್ಯಾದ್ಯಂತ ತಿದ್ದುಪಡಿಗೆ ಅವಕಾಶ ನೀಡಿದಾಗ ಸರ್ವರ್ ಸಮಸ್ಯೆ ಇನ್ನಿಲ್ಲದಂತೆ ಕಾಡಿದ ಪರಿಣಾಮವಾಗಿ ಪರಿಹಾರ ಕ್ರಮ ಎಂಬಂತೆ ಸರಕಾರ ಬಳಿಕ ಜಿಲ್ಲಾವಾರು ವಿಂಗಡಿಸಿ ಪೋರ್ಟಲ್ ಓಪನ್ ಮಾಡಿ ಪರಿಹಾರಕ್ಕಾಗಿ ಪ್ರಯತ್ನಿಸಿತು. ಆದರೂ ಸಮಸ್ಯೆ ಪರಿಹಾರ ಕಾಣಲಿಲ್ಲ. 

ಇದೀಗ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಮಾತ್ರ ಅ 8 ರಿಂದ 10ರವರೆಗೆ ರೇಶನ್ ಕಾರ್ಡ್ ತಿದ್ದುಪಡಿಗೆ ಸರಕಾರ ಅವಕಾಶ ಕಲ್ಪಿಸಿದೆ. ಆದರೂ ಕೂಡಾ ಸರ್ವರ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನಲಾಗಿದೆ. ಅ 8 ರಂದು ಆರಂಭವಾಗಿದ್ದು, ಪೋರ್ಟಲ್ ಏನೋ ತೆರೆದಿದೆ. ಭಾನುವಾರವಾದರೂ ಕೆಲವೊಂದು ಅಗತ್ಯ ಕೆಲಸಗಳಿಗೆ ರೇಶನ್ ಕಾರ್ಡ್ ತಿದ್ದುಪಡಿ ಬೇಕಾದವರು ಬೆಳಗ್ಗಿನಿಂದಲೇ ತಾಲೂಕಿನ ವಿವಿಧ ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳ ಬಾಗಿಲಲ್ಲಿ ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡು ಬಂದಿದೆ. ಈ ಬಾರಿ ಸರಕಾರ ಯಾವುದೇ ಓಪನ್ ಸೈಟ್ ಗಳಲ್ಲಿ ತಿದ್ದುಪಡಿಗೆ ಅವಕಾಶ ನೀಡದೆ ಕೇವಲ ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಸೇವಾ ಕೇಂದ್ರಗಳಲ್ಲಿ ಮಾತ್ರ ತಿದ್ದುಪಡಿಗೆ ಅವಕಾಶ ನೀಡಿದರೂ ಸರ್ವರ್ ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಗ್ರಾಹಕರು ತಾಸುಗಟ್ಟಲೆ ಹಾಗೂ ದಿನವಿಡೀ ಸೇವಾ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಂತು ಕಾದು ಕಾದು ಸುಸ್ತಾಗಿ ಕೊನೆಗೆ ಬರಿಕೈಯಲ್ಲೇ ಮನೆಗೆ ತೆರಳುವಂತಾಗಿದೆ. ಕೆಲ ಸೇವಾ ಕೇಂದ್ರಗಳಲ್ಲಂತೂ ಸರ್ವರ್ ಸಮಸ್ಯೆ ವಿಪರೀತವಾಗಿದೆ. ಮನೆಗೆ ಹೋಗಿ ಎಂದರೂ ತೆರಳದೆ ಕಾಯುತ್ತಲೇ ಇದ್ದ ಗ್ರಾಹಕರಿಗೆ ಕೊನೆಗೆ ಸೇವಾ ಕೇಂದ್ರದ ಮಾಲಕರು ಅಂಗಡಿಯನ್ನೇ ಬಂದ್ ಮಾಡಿ ವಾಪಾಸು ಕಳಿಸುತ್ತಿದ್ದ ದೃಶ್ಯ ಕಂಡು ಬಂತು. 

ರೇಶನ್ ಕಾರ್ಡ್ ಪೋರ್ಟಲ್ ಸರ್ವರ್ ಸಮಸ್ಯೆ ಬಗ್ಗೆ ತಾಲೂಕು ಹಾಗೂ ಜಿಲ್ಲಾ ಮಟ್ಟದ ಆಹಾರ ಇಲಾಖಾ ಅಧಿಕಾರಿ-ಸಿಬ್ಬಂದಿಗಳಿಂದ ಜನರ ಪ್ರಶ್ನೆಗಳಿಗೆ ಯಾವುದೇ ಉತ್ತರ ದೊರೆಯುತ್ತಿಲ್ಲ ಎಂಉ ಸಾರ್ವಜನಿಕರು ದೂರುತ್ತಿದ್ದಾರೆ. ಈ ಬಗ್ಗೆ ಸ್ವತಃ ಆಹಾರ ಇಲಾಖೆ ಸಚಿವರ ಕಚೇರಿ, ಆಪ್ತ ಕಾರ್ಯದರ್ಶಿ, ಆಪ್ತ ಸಹಾಯಕರಿಗೆ ಸಂಪರ್ಕಿಸಿದರೂ ಯಾವುದೇ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ ಎಂದು ಜನ ಹಾಗೂ ಸೇವಾ ಕೇಂದ್ರಗಳ ಮಾಲಕರು ಕೂಡಾ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪೋರ್ಟಲ್ ಇನ್ನೆರಡು ದಿನ ಕಾರ್ಯನಿರ್ವಹಿಸಲಿದ್ದು, ಯಾವ ರೀತಿ ಸರ್ವರ್ ಸಮಸ್ಯೆ ಪರಿಹಾರ ಕಾಣುತ್ತದೆ ಎಂದು ಕಾದುನೋಡಬೇಕಷ್ಟೆ.

  • Blogger Comments
  • Facebook Comments

0 comments:

Post a Comment

Item Reviewed: ರೇಶನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಇದ್ದರೂ ಇನ್ನಿಲ್ಲದೆ ಕಾಡುತ್ತಿರುವ ಸರ್ವರ್ ಸಮಸ್ಯೆಯಿಂದ ಜನರಿಂದ ಆಕ್ರೋಶ : ಜನರ ಪ್ರಶ್ನೆಗಳಿಗೆ ಆಹಾರ ಇಲಾಖೆ ನಿರುತ್ತರ Rating: 5 Reviewed By: karavali Times
Scroll to Top