ಪ್ರಿಮೆಟ್ರಿಕ್ ಎಸ್.ಎಸ್.ಪಿ. ಪೋರ್ಟಲ್ ನಲ್ಲಿ ಆನ್ ಲೈನ್ ಅರ್ಜಿ ಸಲ್ಲಿಕೆಗೆ ನವೆಂಬರ್ 30 ಕೊನೆ ದಿನಾಂಕ
ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ ಭರವಸೆಯಂತೆ ಇದೀಗ ಯೋಜನೆ ಜಾರಿ
ಬೆಂಗಳೂರು, ಅಕ್ಟೋಬರ್ 06, 2023 (ಕರಾವಳಿ ಟೈಮ್ಸ್) : ಕಳೆದ ಶೈಕ್ಷಣಿಕ ವರ್ಷದಿಂದ ಕೇಂದ್ರ ಸರಕಾರ ಸ್ಥಗಿತಗೊಳಿಸಿದ್ದ ಅಲ್ಪಸಂಖ್ಯಾತ ವರ್ಗದ 1 ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಈ ಬಾರಿ ಸಿದ್ದರಾಮಯ್ಯ ನೇತೃತ್ವದ ನೂತನ ಕಾಂಗ್ರೆಸ್ ಸರಕಾರ ರಾಜ್ಯ ಸ್ಕಾಲರ್ ಶಿಪ್ ಪೋರ್ಟಲ್ ನಲ್ಲಿ ಮರು ಆರಂಭಿಸಿದೆ.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಕೇಂದ್ರ ಸರಕಾರ ಸ್ಥಗಿತಗೊಳಿಸಿದ ವಿದ್ಯಾರ್ಥಿ ವೇತನ ಮರು ಆರಂಭಿಸಲಾಗುವುದು ಎಂದು ಭರವಸೆ ನೀಡಿದ್ದರು. ಇದೀಗ ನೂತನ ಸರಕಾರ ತನ್ನ ಭರವಸೆಯಂತೆ ಯೋಜನೆ ಜಾರಿಗೊಳಿಸಿದ್ದು, ಅಲ್ಪಸಂಖ್ಯಾತ ವರ್ಗದ ಪ್ರಿಮೆಟ್ರಿಕ್ ವಿದ್ಯಾರ್ಥಿಗಳಿಗೆ 2023-24ನೇ ಶೈಕ್ಷಣಿಕ ವರ್ಷಕ್ಕೆ ರಾಜ್ಯ ಅಲ್ಪಸಂಖ್ಯಾತ ಇಲಾಖೆಯಡಿ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶ (ಎಸ್.ಎಸ್.ಪಿ.) ಮೂಲಕ ಆನ್ ಲೈನ್ ಅರ್ಜಿ ಸಲ್ಲಿಸಲು ಅಧಿಕೃತ ಅಧಿಸೂಚನೆ ಹೊರಡಿಸಿದೆ.
1 ರಿಂದ 8ನೇ ತರಗತಿ ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್‍ನಲ್ಲಿ (ಎಸ್.ಎಸ್.ಪಿ.) ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ನವೆಂಬರ್ 30 ಆನ್ ಲೈನ್ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕವಾಗಿದೆ.
ಕರ್ನಾಟಕ ರಾಜ್ಯದ ಅರ್ಹ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್ ಮತ್ತು ಪಾರ್ಸಿ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಇದ್ದು, ವಿದ್ಯಾರ್ಥಿಗಳು ಕರ್ನಾಟಕದ ನಿವಾಸಿಗಳಾಗಿದ್ದು, ಹಿಂದಿನ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಕನಿಷ್ಠ 50 ಶೇಕಡಾ ಅಂಕಗಳನ್ನು ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯ 1 ಲಕ್ಷ ರೂಪಾಯಿ ಮೀರಿರದ ವಿದ್ಯಾರ್ಥಿಗಳು ಎಸ್.ಎಸ್.ಪಿ. ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಬಗ್ಗೆ ಹೆಚ್ಚಿನ ವಿವರಗಳಿಗೆ ಅಲ್ಪಸಂಖ್ಯಾತ ಇಲಾಖಾ ವೈಬ್ ಸೈಟ್, ಸಹಾಯವಾಣಿ, ಅಲ್ಪಸಂಖ್ಯಾತ ತಾಲೂಕು ಮಟ್ಟದ ಮಾಹಿತಿ ಕೇಂದ್ರ ಅಥವಾ ಎಸ್.ಎಸ್.ಪಿ. ಪೋರ್ಟಲ್ ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತ ಇಲಾಖಾ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment