ಬಂಟ್ವಾಳ, ಅಕ್ಟೋಬರ್ 05, 2023 (ಕರಾವಳಿ ಟೈಮ್ಸ್) : ಮಾರ್ಬಲ್ ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ಮೀರಿ ದೇವಸ್ಥಾನದ ಗೋಪುರದ ಕಟ್ಟಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಕಾರ್ಮಿಕ ಮೃತಪಟ್ಟಿದ್ದು, ಚಾಲಕ ಸಹಿತ ಮೂವರು ಗಂಭೀರ ಗಾಯಗೊಂಡ ಘಟನೆ ಬುಧವಾರ ಬೆಳಿಗ್ಗೆ ಬಂಟ್ವಾಳ ತಾಲೂಕು, ಕರೋಪಾಡಿ ಗ್ರಾಮದ ಶ್ರೀ ಗುರುದೇವದತ್ತ ಸಂಸ್ಥಾನ ಒಡಿಯೂರು ಶಾಲಾ ಬಳಿ ನಡೆದಿದೆ.
ಅಪಘಾತದಿಂದ ಕಾರ್ಮಿಕ ಸುಭಾಶ್ಚಂದ್ರ ಎಂಬಾತ ಮೃತಪಟ್ಟಿದ್ದು, ಲಾರಿ ಚಾಲಕ ಆದಂ, ಕಾರ್ಮಿಕರಾದ ಅರ್ಶದ್, ಪವನ್ ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಲಾರಿ ಚಾಲಕ ಲಾರಿಯನ್ನು ಇಳಿಜಾರು ರಸ್ತೆಯಲ್ಲಿ ಚಲಾಯಿಸಿದ ಪರಿಣಾಮ ನಿಯಂತ್ರಣ ಮೀರಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಒಡಿಯೂರು ದೇವಸ್ಥಾನದ ಪೂರ್ವ ಗೊಪುರದ ಕಟ್ಟಡಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಗೋಪುರದ ಕಟ್ಟಡಕ್ಕೆ ಹಾನಿಯಾಗಿದ್ದು, ಸುಮಾರು 5 ಲಕ್ಷ ರೂಪಾಯಿ ನಷ್ಟವುಂಟಾಗಿದೆ. ಅಲ್ಲದೇ ಅಪಘಾತದಿಂದಾಗಿ ಲಾರಿಯಲ್ಲಿದ್ದ ಆದಂ, ಅರ್ಷಾದ್ ಪವನ್ ಹಾಗೂ ಶುಭಾಚಂದ್ರರವರಿಗೆ ತೀವ್ರ ತರಹದ ರಕ್ತಗಾಯಗಳಾಗಿರುತ್ತದೆ. ಗಾಯಗೊಂಡ ಅರ್ಷಾದ್, ಪವನ್ ಹಾಗೂ ಶುಭಾಶ್ಚಂದ್ರ ಅವರನ್ನು ಚಿಕಿತ್ಸೆಯ ಬಗ್ಗೆ ಅಂಬುಲೆನ್ಸ ವಾಹನದಲ್ಲಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಕಾರ್ಮಿಕ ಶುಭಾಶ್ಚಂದ್ರ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅರ್ಷಾದ್ ಹಾಗೂ ಪವನ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೇಲ್ದರ್ಜೆ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment