ಬಂಟ್ವಾಳ, ಅಕ್ಟೋಬರ್ 30, 2023 (ಕರಾವಳಿ ಟೈಮ್ಸ್) : ನವವಿವಾಹಿತೆ ಯುವತಿಯೋರ್ವಳು ಪತಿ ಮನೆಯವರ ವರದಕ್ಷಿಣೆ ಕಿರುಕುಳದ ಕಾರಣಕ್ಕೆ ತವರು ಮನೆಗೆ ಬಂದು ಆತ್ಮಹತ್ಯೆಗೆ ಶರಣಾದ ಘಟನೆ ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮದ ಸುಭಾಷ್ ನಗರ ಎಂಬಲ್ಲಿಂದ ತಡವಾಗಿ ವರದಿಯಾಗಿದೆ.
ಸಜಿಪಮೂಡ ಗ್ರಾಮದ ಸುಭಾಷ್ ನಗರ ನಿವಾಸಿ ಕೆ ಎಂ ಬಾವ ಅವರ ಪುತ್ರಿ ನೌಸೀನ್ ಎಂಬಾಕೆಯೇ ವರದಕ್ಷಿಣೆ ಕಿರುಕುಳಕ್ಕಾಗಿ ನೇಣಿಗೆ ಕೊರಳೊಡ್ಡಿದ ಯುವತಿ. ಈಕೆಯನ್ನು ಉಳ್ಳಾಲ ತಾಲೂಕಿನ ನಾಟೆಕಲ್ ನಿವಾಸಿ ಸಿ ಎಚ್ ಹೈದರ್ ಎಂಬವರ ಪುತ್ರ ಅಝ್ಮಾನ್ ಎಂಬಾತನಿಗೆ ಎರಡೂವರೆ ತಿಂಗಳ ಹಿಂದೆ ಅಂದರೆ 2023 ರ ಆಗಸ್ಟ್ 14 ರಂದು ಮದುವೆ ಮಾಡಿಕೊಡಲಾಗಿತ್ತು.
ನೌಸೀನಾಳಿಗೆ ಗಂಡನ ಮನೆಯಲ್ಲಿ ಅತ್ತೆ ಝುಬೈದಾ ಹಾಗೂ ಆಕೆಯ ಮಗಳು ಅಝ್ಮಿಯಾ ಅವರು ನೀನು ಲವ್ ಮಾಡಿ ಬಂದಿದ್ದಿ. ನಮ್ಮ ಹುಡುಗನಿಗೆ ಒಳ್ಳೆಯ ಹುಡುಗಿ ಸಿಗುತ್ತಿದ್ದಳು. ಹೆಚ್ಚಿನ ವರದಕ್ಷಿಣೆ ಸಿಗುತ್ತಿತ್ತು ಎಂಬಿತ್ಯಾದಿಯಾಗಿ ಹೀಯಾಳಿಸಿ ಮಾತನಾಡಿತ್ತಿದ್ದರು. ತಾಯಿ ಹಾಗೂ ತಂಗಿಯ ಮಾತು ಕೇಳಿ ಗಂಡ ಅಝ್ಮಾನ್ ಕೂಡಾ ನೌಸೀನಾಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಅಕ್ಟೋಬರ್ 24 ರಂದು ನೌಸೀನಾಳ ಸಹೋದರರಾದ ಮುಬಾರಕ್, ನೌಶಾದ್ ಹಾಗೂ ಅವರ ಅಕ್ಕನ ಮಗ ರಾಜೀಕ್ ಅವರು ನೌಸೀನಾಳನ್ನು ನೋಡಿ ಬರಲೆಂದು ಆಕೆಯ ಗಂಡನ ಮನೆಗೆ ತೆರಳಿದ್ದು, ಆ ಸಂದರ್ಭ ನೌಸೀನಾ ಗಂಡನ ಮನೆಯವರ ಕಿರುಕುಳದ ಬಗ್ಗೆ ಸಹೋದರರಲ್ಲಿ ಹೇಳಿಕೊಂಡು ಅದೇ ದಿನ ಸಹೋದರರ ಜೊತೆ ತವರು ಮನೆಗೆ ಬಂದಿದ್ದಾಳೆ. ಮರುದಿನ ಅಂದರೆ ಅಕ್ಟೋಬರ್ 25 ರಂದು ರಾತ್ರಿ 8 ಗಂಟೆ ವೇಳೆಗೆ ನೌಸೀನಾ ತವರು ಮನೆಯಲ್ಲಿ ಮನೆಯ ಕೋಣೆಯೊಳಗೆ ತೆರಳಿ ಚೂಡಿದಾರ ಶಾಲಿನಿಂದ ಕಿಟಕಿಯ ಸರಳಿಗೆ ನೇಣು ಬಿಗಿದುಕೊಂಡಿದ್ದಾಳೆ. ಮನೆಯ ಕೋಣೆಯೊಳಗೆ ತೆರಳಿದ ನೌಸೀನಾ ಹೊರಗೆ ಬಾರದೆ ಇರುವುದನ್ನು ಕಂಡು ಮನೆ ಮಂದಿ ಕಿಟಕಿಯಲ್ಲಿ ನೋಡಿದಾಗ ನೌಸೀನಾ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾಳೆ. ತಕ್ಷಣ ಕೋಣೆಯ ಬಾಗಿಲು ಮುರಿದು ನೇಣು ಬಿಗಿದ ಸ್ಥಿತಿಯಲ್ಲಿದ್ದ ನೌಸೀನಾಳನ್ನು ತುಂಬೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ ರಾತ್ರಿ 8.45 ರ ವೇಳೆಗೆ ನೌಸೀನಾ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ನೌಸೀನಾಳ ಮದುವೆ ಸಂದರ್ಭ 18 ಪವನ ಚಿನ್ನ ಉಡುಗೂರೆ ನೀಡಲಾಗಿದೆ. ಉಡುಗೂರೆ ಕಡಿಮೆ ಆಗಿದೆ ಎಂದು ಅತ್ತೆ, ನಾದಿನಿ ಹಾಗೂ ಗಂಡ ಸೇರಿಕೊಂಡು ನಮ್ಮ ಹುಡುಗನಿಗೆ ಒಳ್ಳೆಯ ಹುಡುಗಿ ಸಿಗುತ್ತಿದ್ದಳು ಎಂದು ಹೀಯಾಳಿಸಿ ಮಾನಸಿಕವಾಗಿ ಕಿರುಕುಳ ನೀಡಿದ್ದರಿಂದಲೇ, ನೌಸೀನಾ ಮಾನಸಿಕವಾಗಿ ನೊಂದು ಆತ್ಮಹತ್ಯೆ ಕೃತ್ಯ ಎಸಗಿದ್ದಾಳೆ ಎಂದು ಆಕೆಯ ಸಹೋದರ ಅಬ್ದುಲ್ ನಾಸೀರ್ ಅವರು ಅ 26 ರಂದು ಬಂಟ್ವಾಳ ನಗರ ಪೊಲೀಸರಿಗೆ ನೀಡಿದ ದೂರಿನಂತೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 125/2023 ಕಲಂ 498(ಎ), 306, ಜೊತೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
0 comments:
Post a Comment