ಬಂಟ್ವಾಳ, ಅಕ್ಟೋಬರ್ 27, 2023 (ಕರಾವಳಿ ಟೈಮ್ಸ್) : ದಸರಾ ಹಬ್ಬದ ಹುಲಿವೇಷದ ಬ್ಯಾನರ್ ತೆರವುಗೊಳಿಸುತ್ತಿದ್ದವರ ಮೇಲೆ ತಂಡವೊಂದು ದಾಳಿ ನಡೆಸಿ ತಲವಾರು ಹಾಗೂ ಮಾರಕಾಯುಧಗಳಿಂದ ದಾಳಿ ನಡೆಸಿದ ಪರಿಣಾಮ ಮೂವರು ಗಾಯಗೊಂಡ ಘಟನೆ ಗುರುವಾರ ರಾತ್ರಿ ಪಾಣೆಮಂಗಳೂರು ಸಮೀಪದ ಮೆಲ್ಕಾರ್ ಜಂಕ್ಷನ್ನಿನಲ್ಲಿ ನಡೆದಿದೆ.
ಈ ಬಗ್ಗೆ ಪಾಣೆಮಂಗಳೂರು ಗ್ರಾಮದ ನಿವಾಸಿ ಸಂದೀಪ್ (28) ಅವರು ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದು, ನಾನು ನನ್ನ ಸಹೋದರ ದೇವದಾಸ ಹಾಗೂ ಗೆಳೆಯರೊಂದಿಗೆ ಗುರುವಾರ ರಾತ್ರಿ ಮೆಲ್ಕಾರ್ ಬ್ರಿಜ್ ಬಳಿ ವೈಭವ್ ಜುವೆಲ್ಲರ್ ಎದುರು ಭಾಗದಲ್ಲಿ ಹಾಕಿದ್ದ ಹುಲಿ ವೇಷದ ಬ್ಯಾನರ್ ಗಳನ್ನು ತೆರೆವುಗೊಳಿಸುತ್ತಿದ್ದ ವೇಳೆ ಆರೋಪಿಗಳಾದ ಪ್ರಸನ್ನ, ಶೋಧನ್ ನರಹರಿ ಪರ್ವತ ಹಾಗೂ ಪ್ರಕಾಶ್ ಯಾನೆ ಮುನ್ನ ಹಾಗೂ ಇತರರು ಬಂದಿದ್ದು, ಈ ಪೈಕಿ ಆರೋಪಿ ಶೋಧನ್ ಎಂಬಾತನು ನಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಗಲಾಟೆ ತಡೆಯಲು ಬಂದ ನನ್ನ ಸಹೋದರ ದೇವದಾಸನಿಗೆ ಆರೋಪಿ ಶೋಧನ ಎಂಬಾತನು ಚೂರಿಯಿಂದ ತಿವಿದಿದ್ದು, ನನಗೂ ಚೂರಿಯಿಂದ ಗಾಯಗೊಳಿಸಿರುತ್ತಾನೆ. ಮತ್ತೋರ್ವ ಆರೋಪಿ ಪ್ರಸನ್ನ ಎಂಬಾತ ದೇವದಾಸನಿಗೆ ಬಾಟಲಿಯಿಂದ ಹಲ್ಲೆ ನಡೆಸಿದ್ದಾನೆ. ನನ್ನ ಜೊತೆಗಿದ್ದ ಶಂಕರ ಎಂಬಾತನಿಗೂ ಆರೋಪಿ ಪ್ರಸನ್ನ ಕಲ್ಲಿನಿಂದ ಹಲ್ಲೆ ನಡೆಸಿರುತ್ತಾನೆ. ಅರೋಪಿಗಳ ಪೈಕಿ ಪ್ರಕಾಶ್ ಯಾನೆ ಮುನ್ನ ಕೂಡಾ ಹಲ್ಲೆಯಲ್ಲಿ ಭಾಗಿಯಾಗಿದ್ದು, ಸ್ಥಳದಲ್ಲಿ ಜಮಾಯಿಸಿದ ಜನ ಬೊಬ್ಬೆ ಹಾಕಿದಾಗ ಆರೋಪಿಗಳು ಓಡಿ ಪರಾರಿಯಾಗಿರುತ್ತಾರೆ.
ಚೂರಿ ಇರಿತದಿಂದ ತೀವ್ರವಾಗಿ ಗಾಯಗೊಂಡು ಕುಸಿದು ಬಿದ್ದ ದೇವದಾಸನಿಗೆ ಬಂಟ್ವಾಳ ಸರಕಾರಿ ಆಸ್ವತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ವತ್ರೆಗೆ ದಾಖಲಿಸಲಾಗಿದೆ. ಆತನು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 126/2023 ಕಲಂ 504, 506, 324, 323, 307, ಜೊತೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment