ನವರಾತ್ರಿ ಹಬ್ಬಕ್ಕೆ 42ನೇ ವರ್ಷದ ಮೈರಾನ್ ಪಾದೆ ಗೆಳೆಯರ ಬಳಗ ಹುಲಿವೇಷ ತಂಡದ ವಿಶೇಷ ಆಕರ್ಷಣೆ ಹೆಣ್ಣು ಹುಲಿ “ಬ್ಲ್ಯಾಕ್ ಟೈಗರ್” ಪೂಜಾ - Karavali Times ನವರಾತ್ರಿ ಹಬ್ಬಕ್ಕೆ 42ನೇ ವರ್ಷದ ಮೈರಾನ್ ಪಾದೆ ಗೆಳೆಯರ ಬಳಗ ಹುಲಿವೇಷ ತಂಡದ ವಿಶೇಷ ಆಕರ್ಷಣೆ ಹೆಣ್ಣು ಹುಲಿ “ಬ್ಲ್ಯಾಕ್ ಟೈಗರ್” ಪೂಜಾ - Karavali Times

728x90

14 October 2023

ನವರಾತ್ರಿ ಹಬ್ಬಕ್ಕೆ 42ನೇ ವರ್ಷದ ಮೈರಾನ್ ಪಾದೆ ಗೆಳೆಯರ ಬಳಗ ಹುಲಿವೇಷ ತಂಡದ ವಿಶೇಷ ಆಕರ್ಷಣೆ ಹೆಣ್ಣು ಹುಲಿ “ಬ್ಲ್ಯಾಕ್ ಟೈಗರ್” ಪೂಜಾ

15ನೇ ವರ್ಷಕ್ಕೆ ಹುಲಿವೇಷಧಾರಿಣಿಯಾಗಿ ಬಣ್ಣ ಹಚ್ಚಲಿದ್ದಾರೆ “ಪೂಜಾ” ಹೆಣ್ಣು ಬ್ಲ್ಯಾಕ್ ಟೈಗರ್

 

ಬಂಟ್ವಾಳ, ಅಕ್ಟೋಬರ್ 14, 2023 (ಕರಾವಳಿ ಟೈಮ್ಸ್) : ದಸರಾ ಹಬ್ಬಕ್ಕೂ ಹುಲಿ ವೇಷಕ್ಕೂ ಒಂದು ರೀತಿಯ ಅವಿನಾಭಾ ಸಂಬಂಧ... ದಸರಾ ಹಬ್ಬ ಬಂತೆಂದರೆ ಹುಲಿ ವೇಷಗಳ ತಾಸೆಯ ಅಬ್ಬರ ಕೂಡಾ ಅರಂಭವಾಗುತ್ತದೆ. ಹುಲಿವೇಷದ ತಾಸೆದ ಪೆಟ್ಟ್ ಕೇಳಿ ಬರದಿದ್ದರೆ ಆ ದಸರಾ ಹಬ್ಬಕ್ಕೆ ಕಳೆಯೇ ಬರುವುದಿಲ್ಲ... ಅದರಲ್ಲೂ ದಸರ ಹಬ್ಬ ಬಂತೆಂದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಲಿವೇಷಗಳ ಅಬ್ಬರವೂ ಆರಂಭವಾಗುತ್ತದೆ. ದಸರಾ ಅಲ್ಲದಿದ್ದರೂ ಕೃಷ್ಣ ಜನ್ಮಾಷ್ಠಮಿ, ಗಣೇಶ್ ಚತುರ್ಥಿ ಸಹಿತ ಮೊದಲಾದ ನಾಡ ಹಬ್ಬಗಳಲ್ಲೂ ಹುಲಿ ವೇಷಗಳ ತಂಡಗಳು ಅಲ್ಲಲ್ಲಿ ಕಂಡು ಬರುತ್ತದೆ. 

ದಸರಾ ಸಹಿತ ಹಬ್ಬಗಳ ಸಂದರ್ಭ ನಾಡಿನ ಕೆಲವೊಂದು ಸಂಘ-ಸಂಸ್ಥೆಗಳು ಹರಕೆಯ ರೂಪದಲ್ಲಿ ತಂಡಗಳನ್ನು ಕಟ್ಟಿಕೊಂಡು ಹುಲಿವೇಷದ ಕುಣಿತದೊಂದಿಗೆ ಹರಕೆ ತೀರಿಸುವುದರ ಜೊತೆಗೆ ಜನತೆಗೆ ಮನರಂಜನೆಯನ್ನು ನೀಡುತ್ತಾರೆ ಜೊತೆಗೆ ಹಬ್ಬಗಳಿಗೂ ಒಂದು ರೀತಿಯ ವಿಶೇಷ ಕಳೆಯನ್ನು ನೀಡುತ್ತಾರೆ. 

ಸಾಮಾನ್ಯವಾಗಿ ನವರಾತ್ರಿ ದಿನಗಳಲ್ಲಿ ಪುರುಷರು ಹುಲಿ ವೇಷ ಹಾಕಿ ಕುಣಿಯುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ವೇ ಸಾಮಾನ್ಯವಾಗಿ ಹಿಂದಿನಿಂದಲೂ ಕಂಡು ಬರುತ್ತಿದೆ. ಆದರೆ ಇಲ್ಲೊಬ್ಬಳು ಯುವತಿ ತನ್ನ ತಂದೆಯಿಂದ ಬಳುವಳಿಯಾಗಿ ಪಡೆದುಕೊಂಡು ನವರಾತ್ರಿ ಸಂದರ್ಭದಲ್ಲಿ ಹುಲಿ ವೇಷ ಹಾಕಿ ಕುಣಿಯುತ್ತಿದ್ದಾಳೆ. ಬಂಟ್ವಾಳ ತಾಲೂಕಿನ ಬಿ ಮೂಡ ಗ್ರಾಮದ ಮೈರಾನ್ ಪಾದೆ ನಿವಾಸಿ ಯುವತಿ ಪೂಜಾ ಎಂಬಾಕೆ ಬಹುಶಃ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಲಿವೇಷ ಧಾರಿಣಿಯಾಗಿ ಕುಣಿಯುವ ಏಕೈಕ ಮಹಿಳಾ ಕಲಾವಿದೆ. ತನ್ನ ಹಿರಿಯರು ಜನಪದ ಕಲೆಯಾಗಿ ಹುಲಿವೇಷವನ್ನು ಹಾಕಿ ಕುಣಿಯುವುದನ್ನು ಸದಾ ನೋಡುತ್ತಿದ್ದ ಪೂಜಾ ಅದರಲ್ಲಿ ಸ್ವತಃ ಆಸಕ್ತಿಯನ್ನು ಬೆಳೆಸಿಕೊಂಡು ತನ್ನ ತಂದೆ ಬಿ ರತ್ನಾಕರ್ ಸಾಲ್ಯಾನ್ ಅವರಿಂದಲೇ ಅದನ್ನು ಕಲಿತು ಒಂದನೇ ತರಗತಿಯಿಂದಲೇ ಮರಿ ಹುಲಿಯಾಗಿ ಕುಣಿದು ಜನರ ಮನಸ್ಸನ್ನು ಗೆದ್ದು ಸತತ 14 ವರ್ಷಗಳಿಂದ ಹುಲಿ ವೇಷ ಹಾಕುತ್ತಾ ಇದೀಗ 15ನೇ ವರ್ಷದಲ್ಲಿ ಹುಲಿ ವೇಷ ಧಾರಿಣಿಯಾಗಿ ಕುಣಿಯಲು ಸಿದ್ಧರಾಗುತ್ತಿದ್ದಾರೆ. ಕಳೆದ 15 ವರ್ಷಗಳಿಂದ ನಿರಂತರವಾಗಿ ಹುಲಿವೇಷ ಹಾಕುವ ಈ ಹೆಣ್ಣು ಹುಲಿ ಜಿಲ್ಲೆಯಲ್ಲಿ ಏಕೈಕ ಕಲಾವಿದೆ ಎಂದು ಗುರುತಿಸಿಕೊಂಡಿದ್ದಾಳೆ. 

ಪೂಜಾ ಅವರ ತಂದೆ ರತ್ನಾಕರ ಸಾಲ್ಯಾನ್ ಅವರು ಗೆಳೆಯರ ಬಳಗ ಮೈರಾನ್ ಪಾದೆ ಎಂಬ ಹುಲಿ ವೇಷದ ತಂಡವನ್ನು ಕಟ್ಟಿ ಬೆಳೆಸಿದ್ದಾರೆ. ಮಗಳು ಪೂಜಾ ಕೂಡಾ ತಂದೆಯ ಜೊತೆ  ಒಂದನೇ ತರಗತಿಯಿಂದಲೇ ಬಣ್ಣ ಹಾಕಲು ಶುರುವಿಟ್ಟಿದ್ದಾಳೆ. ತಂದೆಯ ಜೊತೆ ಹುಲಿ ವೇಷದ ಹೆಜ್ಜೆಗಾರಿಕೆ, ತಮಟೆಗೆ ತಕ್ಕಂತೆ ಕುಣಿತ, ತಂದೆ ಹುಲಿ ಜೊತೆ ಕುಣಿತ, ಇಬ್ಬರು ಅಥವಾ ಮೂರು ಜನ ಹಿಡಿದು ಜಂಪಿಂಗ್, ಹೀಗೆ ಬಗೆ ಬಗೆಯಲ್ಲಿ ಕುಣಿದು ತಮ್ಮ ಅಭಿಮಾನಿ ಬಳಗದ ಯಶಸ್ವಿನಲ್ಲಿ ತನ್ನದೇ ಛಾಪನ್ನು ಮೂಡಿಸಿದ್ದಾಳೆ. 

ಪೂಜಾ ಅವರು ಹುಲಿ ವೇಷಧಾರಿಣಿಯಾಗಿ ಗೋವಾ, ಬೆಂಗಳೂರು, ತುಮಕೂರು, ಶ್ರೀ ರಾಜರಾಜೇಶ್ವರಿ ಕ್ಷೇತ್ರ ಪೆÇಳಲಿ, ಮೆರ್ಲಪದವು, ಬೆದ್ರ ಫ್ರೆಂಡ್ಸ್, ಮಾರಿಗುಡಿ ಫ್ರೆಂಡ್ಸ್ ಬೆದ್ರ ಕೂಳೂರು, ಪಾಂಡೇಶ್ವರ, ಮಂಕಿಸ್ಟ್ಯಾಂಡ್ (ಮಂಗಳೂರು), ಕಕ್ಕೆಪದವು, ಪುತ್ತೂರು ಮುಂತಾದ ಕಡೆ ಪ್ರದರ್ಶನವನ್ನು ನೀಡಿದ್ದಾರೆ. 2019ರಲ್ಲಿ ಬಿರುವೆರ್ ಕುಡ್ಲ ವತಿಯಿಂದ ನಡೆದ ಪಿಲಿಗೊಬ್ಬು ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನದ ನೀಡಿದ ಖ್ಯಾತಿಗೂ ಈಕೆ ಪಾತ್ರಳಾಗಿದ್ದಾಳೆ. ತನ್ನ 17ನೇ ವರ್ಷದಿಂದ ಇಲ್ಲಿಯವರೆಗೆ ಬ್ಲ್ಯಾಕ್ ಟೈಗರ್ ಹುಲಿ ವೇಷಧಾರಿಣಿಯಾಗಿ ಅದ್ಭುತ ಹುಲಿ ವೇಷ ಕುಣಿತ ಪ್ರದರ್ಶನವನ್ನು ಪೂಜಾ ನೀೀಡುತ್ತಾ ಬರುತ್ತಿದ್ದಾರೆ.

ದಿವಂಗತ ಮಾಂಕು ಅವರು ಹಲವಾರು ವರ್ಷಗಳಿಂದ ಶ್ರೀ ತಿರುಮಲ ವೆಂಕಟರಮಣ ದೇವಾಲಯದಲ್ಲಿ ಶಾರ್ದುಲ ವೇಷ ಹಾಕಿ ತನ್ನ ಕಲಾ ಸೇವೆಯನ್ನು ನೀಡುತ್ತಾ ಬರುತ್ತಿದ್ದರು. ನಂತರದ ದಿನಗಳಲ್ಲಿ ಅವರ ದ್ವಿತೀಯ ಪುತ್ರ ರತ್ನಾಕರ ಸಾಲ್ಯಾನ್ ಅವರು ತನ್ನ ತಂದೆಯಂತೆ ಚಿಕ್ಕ ವಯಸ್ಸಿನ್ನಲ್ಲಿ ಹುಲಿ ವೇಷಧಾರಿಯಾಗಿ ಗೆಳೆಯರ ಬಳಗ ಎಂಬ ಹೆಸರಿನಲ್ಲಿ ತಂಡ ಕಟ್ಟಿಕೊಂಡು ಶಾರದಾ ದೇವಿಗೆ ಕಲಾ ಸೇವೆಯನ್ನು ನೀಡುತ್ತಾ ಬರುತ್ತಿದ್ದಾರೆ. ಈ ಬಾರಿ ನವರಾತ್ರಿಗೆ 42ನೇ ವರ್ಷದ ಹುಲಿವೇಷವನ್ನು ರಂಗಕ್ಕಿಳಿಸಲು ತಯಾರಿ ನಡೆಸುತ್ತಿರುವ ಗೆಳೆಯರ ಬಳಗದ ವಿಶೇಷ ಆಕರ್ಷಣೆಯಾಗಿ ಪೂಜಾ ಎಂಬ ಹೆಣ್ಣು ಹುಲಿಯೇ ಕಾಣಿಸಿಕೊಳ್ಳಲಿದ್ದಾರೆ.

ತಂದೆ ಹುಲಿವೇಷದಲ್ಲಿ ನಿಪುಣರಾಗಿದ್ದು, ಅವರ ಜೊತೆ ಚಿಕ್ಕಂದಿನಲ್ಲಿಯೇ ಹುಲಿವೇಷ ಹಾಕುತ್ತಿದ್ದೇನೆ. ಮನೆಯ ಪ್ರತೀ ಸದಸ್ಯರೂ ಹುಲಿವೇಷ ಹಾಕುತ್ತಾರೆ. ಹುಲಿವೇಷಕ್ಕೆ ಬೇಕಾಗುವ ಮುಖವಾಡ, ಬಣ್ಣಗಾರಿಕೆ, ತಾಸೆ ಎಲ್ಲವನ್ನೂ ತಂದೆ ತಯಾರಿಸುವ ಕಾರಣ ಅವುಗಳನ್ನು ನೋಡಿ ಅದೆಲ್ಲದರಲ್ಲಿಯೂ ನಾನೂ ಪರಿಣತಳಾಗಿದ್ದೇನೆ. ಒಟ್ಟಿನಲ್ಲಿ ಹುಲಿವೇಷ ನಮ್ಮ ಕುಟುಂಬದ ಅವಿಭಾಜ್ಯ ಅಂಗವಾಗಿದೆ ಎನ್ನುತ್ತಾರೆ ಹೆಣ್ಣು ಹುಲಿವೇಷಧಾರಿಣಿ ಪೂಜಾ ಅವರು.

  • Blogger Comments
  • Facebook Comments

0 comments:

Post a Comment

Item Reviewed: ನವರಾತ್ರಿ ಹಬ್ಬಕ್ಕೆ 42ನೇ ವರ್ಷದ ಮೈರಾನ್ ಪಾದೆ ಗೆಳೆಯರ ಬಳಗ ಹುಲಿವೇಷ ತಂಡದ ವಿಶೇಷ ಆಕರ್ಷಣೆ ಹೆಣ್ಣು ಹುಲಿ “ಬ್ಲ್ಯಾಕ್ ಟೈಗರ್” ಪೂಜಾ Rating: 5 Reviewed By: karavali Times
Scroll to Top