ಮಂಗಳೂರು, ಅಕ್ಟೋಬರ್ 08, 2023 (ಕರಾವಳಿ ಟೈಮ್ಸ್) : ರಾಜ್ಯ, ದೇಶದಲ್ಲಿ ಸಮಾನತೆ ಸಾಧ್ಯವಾಗಲು ಜಾತಿ ಗಣತಿ ಅಗತ್ಯ. ತುಳಿತಕ್ಕೊಳಗಾದವರು, ದುರ್ಬಲ ವರ್ಗಗಳಿಗೆ ಮೀಸಲಾತಿಯ ಕೂಗು ಇರುತ್ತದೆ. ಆದರೆ ಮೀಸಲಾತಿ ಶಾಶ್ವತ ಅಲ್ಲ. ಯಾರಿಗೆ ಮೀಸಲಾತಿ ನೀಡಬೇಕು, ಹೇಗೆ ನೀಡಬೇಕು ಎಂಬುದಕ್ಕೆ ಜಾತಿ ಗಣತಿ ಅಗತ್ಯ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್ ಕಾಂತರಾಜ್ ಹೇಳಿದ್ದಾರೆ.
ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ವಿವಿಧ ಜಿಲ್ಲಾ ಕಾಂಗ್ರೆಸ್ ಮುಂಚೂಣಿ ಘಟಕಗಳು ಮತ್ತು ವಿಭಾಗಗಳ ಸಹಯೋಗದೊಂದಿಗೆ ಶನಿವಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ‘ಜಾತಿಗಣತಿಯ ಅಗತ್ಯ ಮತ್ತು ಲಾಭಗಳು ಹಾಗೂ ಹಿಂದುಳಿದ ವರ್ಗಗಳ ಸಬಲೀಕರಣ ಮತ್ತು ಮೀಸಲಾತಿ’ ವಿಷಯದ ಕುರಿತಾದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದ ಏರುಪೇರನ್ನು ಹೋಗಲಾಡಿಸಿ ಸಮಾನತೆ ತರಲು ಜಾತಿಗಣತಿ ನೆರವಾಗಲಿದೆ. ಜಾತಿ ಗಣತಿ ಮಾಡದಿದ್ದರೆ ಇಡಬ್ಲ್ಯುಎಸ್ ಕಾರ್ಯಕ್ರಮಗಳನ್ನು ಕೂಡ ಸಮರ್ಪಕವಾಗಿ ಜಾರಿಗೆ ತರುವುದು ಅಸಾಧ್ಯ. ಸಂವಿಧಾನದ ಗುರಿ ತಲುಪುವುದೇ ಜಾತಿ ಗಣತಿಯ ಉದ್ದೇಶವಾಗಿದೆ. ಜಾತಿ ಗಣತಿಯಿಂದ ಸಾಮಾಜಿಕ ನ್ಯಾಯ ಒದಗಿಸಲು, ಕಲ್ಯಾಣ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಹಂಚಿಕೆ ಮಾಡಲು ಸಾಧ್ಯವಾಗುತ್ತದೆ. ಜಾತಿಯನ್ನು ಹುಟ್ಟು ಹಾಕಲು ಅಥವಾ ಮುಂದುವರೆಸಲು ಸಂವಿಧಾನ ಹೇಳಿಲ್ಲ. ಅದರ ಬದಲಾಗಿ ಜಾತಿ ರಹಿತ ಸಮಾಜ ನಿರ್ಮಾಣ ಮಾಡಲು ಹೇಳಿದೆ. ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಅದರ ಶಕ್ತಿಯನ್ನು ಮೊದಲು ಅರ್ಥಮಾಡಿಕೊಳ್ಳಬೇಕು ಎಂದರು.
ಜನಗಣತಿಯಂತೆ ಜಾತಿಗಣತಿ ಸಂವಿಧಾನದ ಆಶಯವಾಗಿದ್ದು, ಜಾತಿಗಣತಿಯಿಂದ ಸಮಾಜದ ಸ್ಥಿತಿಗತಿಯ ನೈಜ ಚಿತ್ರಣ ಪಡೆಯಬಹುದು. ಆ ಮೂಲಕ ಸಂವಿಧಾನದ ಉದ್ದೇಶವನ್ನು ಈಡೇರಿಸಬಹುದು. ಜಾತಿಗಣತಿ ಎನ್ನುವುದು ಸಮಾಜ ಒಡೆಯುವ ಪ್ರಯತ್ನ ಎಂದು ಆರೋಪ ಮಾಡುತ್ತಾರೆ. ಅದು ಸರಿಯಲ್ಲ. ಹಾಗೆ ಮಾಡಿದರೆ ಸಮಾಜದಲ್ಲಿ ಈಗ ದುರ್ಬಲ ಸ್ಥಿತಿಯಲ್ಲಿ ಇರುವವರು ಅದೇ ಸ್ಥಿತಿಯಲ್ಲಿ ಇರಬೇಕು ಎಂದು ಬಯಸಿದಂತಾಗುತ್ತದೆ ಎಂದರು.
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲಾಗಿದ್ದು, ಅದರಲ್ಲಿ 55 ಪ್ರಶ್ನೆಗಳಿವೆ. ಜಾತಿ ಅದರಲ್ಲಿ ಒಂದು ಅಂಶ ಮಾತ್ರ. ಜಾತಿ ಗಣತಿ ಸಮಾಜ ಒಡೆಯುವ ಪ್ರಯತ್ನವೆಂಬ ಆರೋಪ ಸಮಂಜಸವಲ್ಲ. ಜಾತಿಗಣತಿ ವಿರೋಧಿಸುವುದೆಂದರೆ ಅದು ಸಮಾಜದಲ್ಲಿ ಈಗ ಯಾರು ಯಾವ ಸ್ಥಿತಿಯಲ್ಲಿದ್ದಾರೆಯೋ ಅದೇ ಸ್ಥಿತಿಯಲ್ಲಿರಬೇಕೆಂದು ಬಯಸಿದಂತೆ ಆಗುತ್ತದೆ. ಈಗ ಶೇ 58 ಸಂಪತ್ತು ಕೇವಲ ಶೇ. 1 ರಷ್ಟು ಜನರ ಕೈಯಲ್ಲಿದೆ. ಇದನ್ನು ಸರಿಪಡಿಸಬೇಕಾಗಿದೆ. ಸಮೀಕ್ಷೆಯಲ್ಲಿ ಜಾತಿಯನ್ನು ಕೂಡ ಒಂದು ಅಂಶವಾಗಿ ಪರಿಗಣಿಸಲು ಸುಪ್ರೀಂಕೋರ್ಟಿನ ಆದೇಶದಲ್ಲಿ ಕೂಡ ತಿಳಿಸಲಾಗಿದೆ. ಬಿಹಾರದಲ್ಲಿ ಜಾತಿಗಣತಿ ಜಾರಿಗೆ ತರುವುದನ್ನು ತಡೆಯುವ ಅಧಿಕಾರ ತನಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಸಂತೋಷದ ವಿಚಾರ ಎಂದವರು ಸಂತಸ ವ್ಯಕ್ತಪಡಿಸಿದರು.
ಆಯೋಗದ ಇನ್ನೋರ್ವ ಮಾಜಿ ಅಧ್ಯಕ್ಷ ಡಾ ಸಿ ಎಸ್ ದ್ವಾರಕಾನಾಥ್ ಮಾತನಾಡಿ, ಬಿಹಾರದ ಜಾತಿಗಣತಿ ವರಿದಿಯನ್ನು ನೋಡಿದ ಮೇಲೆ ಬಿಜೆಪಿ, ಸಂಘಪರಿವಾರದವರಿಗೆ ಭಯ ಉಂಟಾಗಿದೆ. ಅವರಿಗೆ ಅದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಮೀಸಲಾತಿಯನ್ನು ಹೇಗೆ ಕೊಡಬೇಕೆಂಬುದನ್ನು ಜಾತಿಗಣತಿ ಸ್ಪಷ್ಟಪಡಿಸುತ್ತದೆ. ನಮ್ಮ ದೇಶದಲ್ಲಿ ಜಾತಿ ಇರುವುದು ವಾಸ್ತವ. ಇದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳುತ್ತಿಲ್ಲ. ಅವರು ಭ್ರಮಾಲೋಕದಲ್ಲಿದ್ದಾರೆ ಎಂದು ಟೀಕಿಸಿದರು.
ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಬಿ ರಮಾನಾಥ ರೈ ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಸ್ವಾಗತಿಸಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಿ ಸಿ ರೋಡು ಪ್ರಸ್ತಾವನೆಗೈದರು.
0 comments:
Post a Comment