ಬಂಟ್ವಾಳ, ಅಕ್ಟೋಬರ್ 11, 2023 (ಕರಾವಳಿ ಟೈಮ್ಸ್) : ಬಿ ಸಿ ರೋಡು ಹೃಯದಭಾಗದಲ್ಲಿ ಕಾರ್ಯಾಚರಿಸುತ್ತಿರುವ ವೆಸ್ಟರ್ನ್ ಯೂನಿಯನ್ ಎಂಬ ಹೆಸರಿನ ವಿದೇಶಿ ಹಣ ವಿನಿಮಯ ಮಾಡುವ ಸಂಸ್ಥೆ ಜನ ಅವಶ್ಯಕತೆಗಾಗಿ ವಿನಿಮಯ ಮಾಡಲು ನೀಡಿದ ಹಣವನ್ನು ತಿಂಗಳುಗಟ್ಟಲೆ ವಿನಿಮಯ ಮಾಡದೆ ವಂಚನೆ ಮಾಡಿದೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.
ಕಳೆದ ಕೆಲ ದಿನಗಳಿಂದ ಸಂಸ್ಥೆಯ ಕಚೇರಿಯಲ್ಲಿ ವಿನಿಮಯಕ್ಕಾಗಿ ಹಣ ನೀಡಿದವರು, ವಿದೇಶದಿಂದ ಹಣ ಪಡೆದುಕೊಳ್ಳಬೇಕಾದವರು ಸಕಾಲಕ್ಕೆ ತಮ್ಮ ಹಣಕಾಸು ವಿನಿಮಯ ಆಗಿಲ್ಲ ಎಂಬ ಕಾರಣಕ್ಕಾಗಿ ನಿರಂತರವಾಗಿ ಸಂಸ್ಥೆಯ ಕಚೇರಿಗೆ ದೌಡಾಯಿಸಿ ಕಚೇರಿಯಲ್ಲಿರುವ ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆಸುತ್ತಿದ್ದಾರೆ. ಆದರೂ ಕೂಡಾ ಕಚೇರಿಯಲ್ಲಿರುವ ಸಿಬ್ಬಂದಿಯಾಗಲೀ, ಸಂಸ್ಥೆಯ ಅಧಿಕಾರಿಗಳಾಗಲೀ ಗ್ರಾಹಕರಿಗೆ ಸೂಕ್ತ ಕಾರಣ ನೀಡದೆ ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದು, ಉಡಾಫೆ ಮಾತಿನ ಮೂಲಕ ಜನರನ್ನು ವಂಚಿಸುತ್ತಿದ್ದಾರೆ ಎಂದು ದೂರಲಾಗಿದೆ.
ಕೆಲ ಗ್ರಾಹಕರು ಕಚೇರಿಗೆ ಬಂದು ಗಲಾಟೆ ಮಾಡಿದ ನಂತರ ಅವರ ಹಣವನ್ನು ವಿನಿಮಯ ಮಾಡದೆ ಮತ್ತೆ ವಾಪಾಸು ನೀಡಿ ಕೈತೊಳೆದುಕೊಂಡಿದ್ದಾರೆ. ಇನ್ನು ಕೆಲವರ ವಿದೇಶದಿಂದ ಬಂದ ಹಣ ಸಂಸ್ಥೆಯ ಖಾತೆಗೆ ಜಮೆಯಾಗಿ ತಿಂಗಳು ಕಳೆದರೂ ಇನ್ನೂ ಗ್ರಾಹಕರಿಗೆ ಹಣ ನೀಡದೆ ಸತಾಯಿಸಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ತಾಳ್ಮೆ ಕಳೆದುಕೊಂಡ ಬಂಟ್ವಾಳ ನಿವಾಸಿ ಹನೀಫ್ ಎಂಬವರು ಮಂಗಳವಾರ ಸಂಜೆ ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದು, ಈ ಹಿನ್ನಲೆಯಲ್ಲಿ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬೆಳ್ತಂಗಡಿ ಮೂಲದ ತೇಜಸ್ವಿ ಶೆಟ್ಟಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದ್ದು, ಹಣಕಾಸಿನ ವಂಚನೆಗೊಳಗಾಗಿರುವ ಹಲವು ಮಂದಿ ಗ್ರಾಹಕರು ಕೂಡಾ ಇದೇ ವೇಳೆ ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಗೂಡಿನಬಳಿ ನಿವಾಸಿ ಇರ್ಶಾದ್ ಎಂಬವರಿಗೆ ಮಾತ್ರ ಕೇಂದ್ರದ ಸಿಬ್ಬಂದಿ ಒಂದೂವರೆ ತಿಂಗಳು ಅಲೆದಾಡಿಸಿದ ಬಳಿಕ ವಿದೇಶಕ್ಕೆ ಹಣ ವಿನಿಮಯ ಮಾಡದೆ ನಗದಾಗಿ ವಾಪಾಸು ನೀಡಿದ್ದು, ಇನ್ನುಳಿದ ಹಲವು ಮಂದಿಗೆ ಹಣವನ್ನೂ ನೀಡದೆ, ವಿನಿಮಯವನ್ನೂ ಮಾಡದೆ ವಂಚಿಸಿದ್ದಾನೆ ಎನ್ನಲಾಗಿದೆ. ಬಂಟ್ವಾಳ, ನಂದಾವರ, ಸಜಿಪ, ಮಾಣಿ ಮೊದಲಾದ ಪ್ರದೇಶಗಳ ನಿವಾಸಿ ವ್ಯಕ್ತಿಗಳಿಗೆ ಈತ ವಂಚಿಸಿದ್ದಾನೆ ಎನ್ನಲಾಗಿದ್ದು, ಇದೀಗ ಪೊಲೀಸರಿಗೆ ದೂರು ನೀಡಿ ತಮ್ಮ ಸಾವಿರಾರು, ಲಕ್ಷಾಂತರ ರೂಪಾಯಿ ನಗದು ಹಣ ವಾಪಾಸು ಕೊಡಿಸುವಂತೆ ದುಂಬಾಲು ಬಿದ್ದಿದ್ದಾರೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
0 comments:
Post a Comment