ಬಂಟ್ವಾಳ, ಅಕ್ಟೋಬರ್ 08, 2023 (ಕರಾವಳಿ ಟೈಮ್ಸ್) : “ಕೊಟ್ಟ ಭರವಸೆ ಈಡೇರಿಸಿ, ಜನರ ನೈಜ ಸಮಸ್ಯೆಗಳನ್ನು ಪರಿಹರಿಸಿ” ಘೋಷವಾಕ್ಯದಡಿ ಸಿಪಿಐ ಪಕ್ಷದ ವತಿಯಿಂದ ಜನಾಗ್ರಹದ ಭಾಗವಾಗಿ ಬಿ ಸಿ ರೋಡಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಶನಿವಾರ ಚಳುವಳಿ ನಡೆಯಿತು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ದುರಾಡಳಿತದಿಂದ ರೋಸಿ ಹೋದ ರಾಜ್ಯದ ಜನತೆ ಕೋಮುವಾದಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡುವ ಮೂಲಕ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಅಧಿಕಾರಕ್ಕೆ ಬರುವ ಮುನ್ನ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ಹಲವಾರು ಗ್ಯಾರಂಟಿಗಳನ್ನು ಸರಕಾರ ಜಾರಿಗೆ ತಂದಿದೆ. ಸರಕಾರದ ಈ ನಡೆಯನ್ನು ಸಿಪಿಐ ಸ್ವಾಗತಿಸಿದೆ. ಗ್ಯಾರಂಟಿಗಳ ಜೊತೆಗೆ ನೀಡಲಾದ ಪ್ರಮುಖ ಭರವಸೆಗಳಾದ ರಾಜ್ಯದ ಅಸಂಘಟಿತ ಕಾರ್ಮಿಕರಿಗೆ ಘೋಷಿಸಿದ ಭರವಸೆಗಳು ಇನ್ನೂ ಅನುಷ್ಠಾನಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸುವಂತೆ ಹಾಗೂ ಜನ ಸಮುದಾಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ಸಿಪಿಐ ಪಕ್ಷದ ರಾಜ್ಯ ಮಂಡಳಿ ಕರೆಯಂತೆ ರಾಜ್ಯದಾದ್ಯಂತ ನಡೆಯುವ ಚಳುವಳಿಯ ಭಾಗವಾಗಿ ಬಿ ಸಿ ರೋಡಿನಲ್ಲೂ ಈ ಚಳುವಳಿ ನಡೆದಿದೆ.
ಅಸಂಘಟಿತ ಕಾರ್ಮಿಕರಿಗೆ ನೀಡಿದ ಭರವಸೆಯಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ, ಸಹಾಯಕಿಯರಿಗೆ 10 ಸಾವಿರ ಗೌರವ ಧನ ಹೆಚ್ಚಳಗೊಳಿಸುವುದು, ಆಶಾ ಕಾರ್ಯಕರ್ತೆಯರಿಗೆ ಮಾಸಿಕ 8 ಸಾವಿರ ಮತ್ತು ಅಕ್ಷರ ದಾಸೋಹ ಬಿಸಿಯೂಟ ಕಾರ್ಯಕರ್ತೆಯರಿಗೆ 6 ಸಾವಿರ ಗೌರವಧನ ಹೆಚ್ಚಿಸುವ ವಾಗ್ದಾನ ನೀಡಲಾಗಿತ್ತು. ಅದನ್ನು ಈಡೇರಿಸಬೇಕು. ಬಿಜೆಪಿ ಸರಕಾರ ಜಾರಿಗೆ ತಂದಿದ್ದ ಕೃಷಿ ಕಾಯಿದೆ, ಎಪಿಎಂಸಿ ಕಾಯಿದೆಗಳನ್ನು ರದ್ದುಗೊಳಿಸಬೇಕು ಹಾಗೂ ರೈತರ ಮೇಲೆ ದಾಖಲಾಗಿರುವ ರಾಜಕೀಯ ಪ್ರೇರಿತ ಮೊಕದ್ದಮೆಗಳನ್ನು ವಾಪಾಸ್ಸು ಪಡೆಯಬೇಕು. ಕಾರ್ಮಿಕರ ದೈನಂದಿನ ಕೆಲಸದ ಅವಧಿಯನ್ನು 8 ಗಂಟೆಯಿಂದ 12 ಗಂಟೆಗೆ ವಿಸ್ತರಿಸಿ ಬಿಜೆಪಿ ಸರಕಾರ ಫ್ಯಾಕ್ಟರಿ ಕಾಯಿದೆಗೆ ತಂದಿದ್ದ ತಿದ್ದುಪಡಿಗಳನ್ನು ರದ್ದುಗೊಳಿಸಿ ಹಿಂದಿನಂತೆ ಕೆಲಸದ ಅವಧಿಯನ್ನು 8 ಗಂಟೆಗೆ ಮಿತಗೊಳಿಸಬೇಕು. ರಾತ್ರಿ ಪಾಲಿಯಲ್ಲಿ ಮಹಿಳೆಯರನ್ನು ದುಡಿಸುವ ಕಾನೂನು ತಿದ್ದುಪಡಿಯನ್ನು ಹಿಂಪಡೆಯಬೇಕು. ಕಟ್ಟಡ ಕಾರ್ಮಿಕರ 2021-22 ನೇ ಸಾಲಿನ ಶೈಕ್ಷಣಿಕ ಅರ್ಜಿಗಳಿಗೆ ಕೂಡಲೇ ಸಹಾಯಧನ ಬಿಡುಗಡೆ ಮಾಡಬೇಕು. ಪಿಂಚಣಿ ಅರ್ಜಿಗಳ ಮಂಜೂರಾತಿ ನಿಯಮಗಳನ್ನು ಸರಳಗೊಳಿಸಿ ಕಟ್ಟಡ ಕಾರ್ಮಿಕರ ಮನೆ ನಿರ್ಮಾಣಕ್ಕೆ 5 0ಲಕ್ಷ ರೂಪಾಯಿ ಸಹಾಯಧನ ನೀಡಬೇಕು. ರಾಜ್ಯದ ಲಕ್ಷಾಂತರ ಬೀಡಿ ಮಜೂರರಿಗೆ ಕೇಂದ್ರ ವೆಲ್ ಫೇರ್ ಫಂಡ್ ವೈದ್ಯಕೀಯ ಸೌಲಭ್ಯಗಳು ಸ್ಥಗಿತಗೊಂಡಿದ್ದು ರಾಜ್ಯ ಕಾರ್ಮಿಕರ ವಿಮಾ ನಿಗಮದಿಂದ ಎಲ್ಲಾ ವೈದ್ಯಕೀಯ ಸೌಲಭ್ಯ ಮತ್ತು ಸಹಾಯಧನ ಲಭಿಸುವಂತೆ ಕ್ರಮ ವಹಿಸಬೇಕು. ರಾಜ್ಯದ ಪೌರ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಿ ಸರಕಾರಿ ಸೌಲಭ್ಯಗಳನ್ನು ವಿಸ್ತರಿಸಬೇಕು. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು ಹಾಗೂ ತಾಲೂಕು ಮಟ್ಟದ ಆಸ್ಪತ್ರೆಗಳ ಸಂಖ್ಯೆಯನ್ನು ಹೆಚ್ಚಿಸಿ ಡಯಾಲಿಸಿಸ್ ಕೇಂದ್ರಗಳನ್ನು ಆರಂಭಿಸಬೇಕು. ಮಹಿಳೆಯರ ವಿರುದ್ಧದ ದೌರ್ಜನ್ಯಗಳನ್ನು ತೆಯಲು ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸಬೇಕು.
ತುಳು ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಪರಿಗಣಿಸಲು ಕ್ರಮ ಕೈಗೊಳ್ಳಬೇಕು. ವಸತಿ ಸಮಸ್ಯೆಗಳಿಗೆ ತೊಡಕಾಗಿರುವ ಅರಣ್ಯ ಕಾಯಿದೆಗಳ ವಿಧಿಗಳನ್ನು ತಿದ್ದುಪಡಿ ಮಾಡಬೇಕು.
ಇವಲ್ಲದೆ ರಾಜ್ಯದ ಜನರ ಜ್ವಲಂತ ಸಮಸ್ಯೆಗಳಾದ ವಸತಿ ಸಮಸ್ಯೆಯ ಬಗ್ಗೆ ಸರಕಾರ ಗಮನಹರಿಸಬೇಕು ಪ್ರಮುಖವಾಗಿ ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳು ನಿವೇಶನವಿಲ್ಲದೆ ವಸತಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸರಕಾರ ಕೂಡಲೇ ಅರ್ಹ ನಿವೇಶನ ರಹಿತರಿಗೆ ನಿವೇಶನ ಹಂಚಲು ಮುಂದಾಗಬೇಕು. ಸರಕಾರವೇ ಘೋಷಿಸಿರುವಂತೆ ರಾಜ್ಯದ ಎಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಟುಂಬಗಳಿಗೆ ಸರಕಾರವೇ ವಾಸಯೋಗ್ಯ ಮನೆಗಳನ್ನು £ರ್ಮಿಸಬೇಕು.
ಸಿಪಿಐ ದ ಕ ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ಬಿ ಶೇಖರ್, ಸಿಪಿಐ ಮುಖಂಡ ವಿ ಕುಕ್ಯಾನ್, ಪಕ್ಷದ ರಾಜ್ಯ ಮಂಡಳಿ ಸದಸ್ಯ ಎಂ ಕರುಣಾಕರ ತಾಲೂಕು ಮುಖಂಡ ಬಿ ಬಾಬು ಭಂಡಾರಿ, ಸಹಕಾರ್ಯದರ್ಶಿ ಪ್ರೇಮನಾಥ ಕೆ, ಕೋಶಾಧಿಕಾರಿ ಶ್ರೀನಿವಾಸ ಭಂಡಾರಿ, ಬಿ ಎಂ ಹಸೈನಾರ್ ವಿಟ್ಲ, ರಾಮ ಮುಗೇರ, ಒ ಕೃಷ್ಣ, ಎಐವೈಎಫ್ ನಾಯಕ ಹರ್ಷಿತ್, ಮೋಹನ್ ಅರಳ, ಸೀತರಾಮ ಕನ್ಯಾನ, ಎನ್ ಎಫ್ ಐ ಡಬ್ಲ್ಯೂ ರಾಜ್ಯ ನಾಯಕಿ ಭಾರತಿ ಪ್ರಶಾಂತ್, ಉಮಾವತಿ ಕುರ್ನಾಡು, ಶಮಿತಾ, ಮಮತಾ, ಕೇಶವತಿ, ಮೋಹಿನಿ, ಸರೋಜಿನಿ ಕುರಿಯಾಳ, ಸಿಪಿಐ ನಾಯಕರುಗಳಾದ ಮೋಹನ್ ಅರಳ, ದೇರಣ್ಣ ಅನಂತಾಡಿ, ಎಂ ಬಿ ಭಾಸ್ಕರ, ಚಂದಪ್ಪ ನಾವೂರು, ಗಿರಿಯಪ್ಪ ಅನಂತಾಡಿ, ಸೀತ ಅನಂತಾಡಿ, ಸುರೇಶ್ ಕುಮಾರ್ ಬಂಟ್ವಾಳ್, ಪ್ರೇಮನಾಥ ಕೆ ಮೊದಲಾದವರು ನೇತೃತ್ವ ವಹಿಸಿದ್ದರು.
0 comments:
Post a Comment