ಬಂಟ್ವಾಳ, ಅಕ್ಟೋಬರ್ 17, 2023 (ಕರಾವಳಿ ಟೈಮ್ಸ್) : ಅಕ್ಷರ ದಾಸೋಹ ನೌಕರರು ಕಳೆದ ಇಪ್ಪತ್ತು ವರ್ಷಗಳಿಂದ ಕಡಿಮೆ ವೇತನದಲ್ಲಿ ದುಡಿಯುತ್ತಿದ್ದು 3 ತಿಂಗಳಿಂದ ಸಂಬಳ ನೀಡದೆ ಸತಾಯಿಸಲಾಗುತ್ತಿದೆ. ಚುನಾವಣೆ ಸಂಧರ್ಭದಲ್ಲಿ ಸಂಬಳ ಏರಿಕೆ ಮಾಡುವುದಾಗಿ ಕಾಂಗ್ರೆಸ್ ನಾಯಕರು ಭರವಸೆ ನೀಡಿದ್ದು, ಸರಕಾರ ಈವರೆಗೆ ಏರಿಕೆ ಮಾಡಿರುವುದಿಲ್ಲ. ಈ ಬಗ್ಗೆ ತಕ್ಷಣ ವೇತನ ಏರಿಕೆ ಮಾಡದಿದ್ದಲ್ಲಿ ಅಕ್ಟೋಬರ್ 30ರಿಂದ ಅನಿರ್ಧಿಷ್ಡಾವಧಿ ಧರಣಿ ನಡೆಸಲಾಗುವುದು ಎಂದು ಎಐಸಿಸಿಟಿಯು ಜಿಲ್ಲಾಧ್ಯಕ್ಷ ರಾಮಣ್ಣ ವಿಟ್ಲ ಎಚ್ಚರಿಸಿದರು.
ಅಕ್ಷರ ದಾಸೋಹ ನೌಕರರಿಗೆ ಬಾಕಿ ಇರುವ ವೇತನ ಕೂಡಲೇ ಪಾವತಿಸುವಂತೆ ಹಾಗೂ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯನ್ನು ಕೂಡಲೇ ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಗತಿಪರ ಅಕ್ಷರ ದಾಸೋಹ ನೌಕರರ ಸಂಘ (ಎಐಸಿಸಿಟಿಯು) ವತಿಯಿಂದ ಬಿ ಸಿ ರೋಡಿನ ಮಿನಿ ಮಿಧಾನಸೌಧ ಮುಂಭಾಗ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಂಘದ ಅಧ್ಯಕ್ಷೆ ಜಯಶ್ರೀ ಆರ್ ಕೆ, ಕಾರ್ಯದರ್ಶಿ ವಾಣಿಶ್ರೀ, ಪ್ರಮುಖರಾದ ಜಯಂತಿ ಶಂಭೂರು, ಲಲಿತಾಂಭಿಕೆ, ವನಿತಾ ದಡ್ಡಲಕಾಡು, ಮಾಲತಿ, ವಿನಯ ನಡುಮೊಗರು, ಮಮತಾ ಬಿಳಿಯೂರು ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಪ್ರತಿಭಟನೆ ನಂತರ ತಹಶೀಲ್ದಾರ್ ಮುಖಂತರ ಮುಖ್ಯಮಂತ್ರಿ ಗಳಿಗೆ ಹಾಗೂ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಮುಖಾಂತರ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.
0 comments:
Post a Comment