ಗಣೇಶ ಚತುರ್ಥಿ ಸಂಭ್ರಮದಲ್ಲಿದ್ದ ಪ್ರಯಾಣಿಕರಿಗೆ ಟ್ರಾಫಿಕ್ ಜಾಂ ಬಿಸಿ
ಬಂಟ್ವಾಳ, ಸೆಪ್ಟೆಂಬರ್ 20, 2023 (ಕರಾವಳಿ ಟೈಮ್ಸ್) : ಗಣೇಶ ಚತುರ್ಥಿ ದಿನವಾದ ಮಂಗಳವಾರ ಸಂಜೆ ಪಾಣೆಮಂಗಳೂರು ಹೊಸ ನೇತ್ರಾವತಿ ಸೇತುವೆಯಲ್ಲಿ ನಡೆದ ಸರಣಿ ಅಪಘಾತದಿಂದಾಗಿ ತಾಸುಗಟ್ಟಲೆ ಟ್ರಾಫಿಕ್ ಜಾಂ ಉಂಟಾಗಿ ವಾಹನ ಸವಾರರು, ಪ್ರಯಾಣಿಕರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದ ಘಟನೆ ನಡೆದಿದೆ.
ಪಾಣೆಮಂಗಳೂರು ನೂತನ ನೇತ್ರಾವತಿ ಸೇತುವೆ ಮೇಲೆ ಎರಡು ಕಾರುಗಳ ನಡುವೆ ಅಪಘಾತ ನಡೆದಿದ್ದು, ಇದೇ ವೇಳೆ ಹಿಂಬದಿಯಿಂದ ಬಂದ ಎರಡು ವಾಹನಗಳ ನಡುವೆಯೂ ಡಿಕ್ಕಿ ಸಂಭವಿಸಿದೆ. ಅದೂ ಅಲ್ಲದೆ ಪಾಣೆಮಂಗಳೂರು ಸಮೀಪದ ನೆಹರುನಗರ ಎಂಬಲ್ಲಿ ಲಾರಿಯೊಂದು ಕೂಡಾ ಕೆಟ್ಟು ಹೋಗಿ ನಿಂತ ಪರಿಣಾಮ ಮತ್ತಷ್ಟು ಟ್ರಾಫಿಕ್ ಜಾಂ ಉಂಟಾಗಿದೆ. ಅಪಘಾತಕ್ಕೀಡಾದ ವಾಹನಗಳು ಜಖಂಗೊಂಡಿದ್ದು, ವಾಹನ ಸವಾರರು ಹಾಗೂ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಸರಣಿ ಅಪಘಾತ ನಡೆದ ಕಾರಣ ವಾಹನಗಳ ಸಾಲು ಕಿ ಮೀ ಉದ್ದ ಹೆದ್ದಾರಿಯ ಎರಡೂ ಬದಿಗಳಲ್ಲಿ ಕಂಡು ಬಂದಿದ್ದು ತಾಸುಗಟ್ಟಲೆ ಟ್ರಾಫಿಕ್ ಅಸ್ತವ್ಯಸ್ತ ಉಂಟಾಗಿತ್ತು. ಗಣೇಶ ಚತುರ್ಥಿ ಕೂಡಾ ಇದ್ದುದರಿಂದ ವಾಹನ ದಟ್ಟಣೆ ಹಾಗೂ ಜನ ಸಂಚಾರ ವಿಪರೀತವಾಗಿದ್ದುದರಿಂದ ಸಹಜವಾಗಿಯೇ ವಾಹನ ಹಾಗೂ ಜನ ಸಂಚಾರ ಏರುಪೇರಾಗಿತ್ತು. ಹೆದ್ದಾರಿಯಲ್ಲಿ ಟ್ರಾಫಿಕ್ ಜಾಂ ಇದ್ದುದರಿಂದ ಹಲವು ವಾಹನಗಳು ಪಾಣೆಮಂಗಳೂರು ಪೇಟೆ ಬಳಸಿ ಹಳೆ ನೇತ್ರಾವತಿ ಸೇತುವೆ ಮೂಲಕ ಸಂಚಾರ ನಡೆಸಿದ್ದು, ಪಾಣೆಮಂಗಳೂರು ಪೇಟೆ ಮಾರ್ಗದಲ್ಲೂ ಟ್ರಾಫಿಕ್ ಜಾಂ ಉಂಟಾಗಿ ತಾಸುಟ್ಟಲೆ ವಾಹನ ಸವಾರರು ಪರದಾಟ ನಡೆಸುವಂತಾದ ದೃಶ್ಯ ಕಂಡು ಬಂತು.
ಬಳಿಕ ಸ್ಥಳಕ್ಕಾಗಮಿಸಿದ ಬಂಟ್ವಾಳ ಸಂಚಾರಿ ಪೊಲೀಸರು ಟ್ರಾಫಿಕ್ ಅವ್ಯವಸ್ಥೆಯನ್ನು ನಿಯಂತ್ರಿಸಲು ಹರಸಾಹಸಪಟ್ಟಿದ್ದು, ಕೊನೆಗೂ ರಾತ್ರಿ ವೇಳೆಗೆ ಹೆದ್ದಾರಿ ಸಂಚಾರ ಸುಗಮಗೊಂಡಿದೆ.
0 comments:
Post a Comment