ಬಂಟ್ವಾಳ, ಸೆಪ್ಟೆಂಬರ್ 16, 2023 (ಕರಾವಳಿ ಟೈಮ್ಸ್) : ತಾಲೂಕಿನ ಕೇಪು ಗ್ರಾಮದ ಮರಕ್ಕಿಣಿ ಎಂಬಲ್ಲಿ ಶನಿವಾರ ಅಟೋ ರಿಕ್ಷಾದಲ್ಲಿ ಅಕ್ರಮ ಗಾಂಜಾ ಸಾಗಾಟ ಪ್ರಕರಣ ಬೇಧಿಸಿದ ವಿಟ್ಲ ಪೊಲೀಸರು ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ಸಹಿತ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ.
ಬಂಧಿತ ಆರೋಪಿಯನ್ನು ಸುಳ್ಯ ಕಸಬಾ ಗ್ರಾಮದ ನಿವಾಸಿ ಎನ್ ಎಂ ಮಹಮ್ಮದ್ ಕಲಂದರ್ ಶಾ (36) ಎಂದು ಹೆಸರಿಸಲಾಗಿದೆ. ಕಲಂದರ್ ಶಾ ಶನಿವಾರ ಕೇಪು ಗ್ರಾಮದ ಮರಕ್ಕಿಣಿ ಎಂಬಲ್ಲಿ ತನ್ನ ಕೆಎ21 ಬಿ7248 ನೋಂದಣಿ ಸಂಖ್ಯೆಯ ಅಟೋ ರಿಕ್ಷಾದಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಗಾಂಜಾ ಸಾಗಿಸುತ್ತಿರುವ ಬಗ್ಗೆ ಖಚಿತ ವರ್ತಮಾನದ ಮೇರೆಗೆ ವಿಟ್ಲ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಕಾರ್ಯಾಚರಣೆ ವೇಳೆ ಅಟೋ ರಿಕ್ಷಾ ಸಹಿತ ರಿಕ್ಷಾದಲ್ಲಿದ್ದ 1.35 ಲಕ್ಷ ರೂಪಾಯಿ ಮೌಲ್ಯದ 6.110 ಕೆ ಜಿ ತೂಕದ ಗಾಂಜಾ, ಮೊಬೈಲ್ ಫೋನ್, 900 ರೂಪಾಯಿ ನಗದು ಹಾಗೂ ರಿಕ್ಷಾ ಚಾಲಕನ ಚಾಲನಾ ಪರವಾನಗಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರು ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 2,96,900/- ಎಂದು ಅಂದಾಜಿಸಲಾಗಿದೆ. ಆರೋಪಿ ವಿರುದ್ದ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 162/2023 ಕಲಂ 8(ಸಿ),20(ಬಿ) (3) (ಬಿ) ಎನ್ ಡಿ ಪಿ ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment