ಬಂಟ್ವಾಳ, ಸೆಪ್ಟೆಂಬರ್ 18, 2023 (ಕರಾವಳಿ ಟೈಮ್ಸ್) : ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಜಿಪಮುನ್ನೂರು ಗ್ರಾಮದ ನಿವಾಸಿ ಮೈಕಲ್ ಡಿ ಸೋಜ ಅವರ ಮನೆಯಲ್ಲಿ ಸೆ 1 ರಂದು ನಡೆದಿದ್ದ ಲಕ್ಷಾಂತರ ರೂಪಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣ ಕಳವು ಪ್ರಕರಣ ಬೇಧಿಸಿರುವ ಬಂಟ್ವಾಳ ನಗರ ಪೊಲೀಸರು ಒಟ್ಟು ಹನ್ನೆರಡು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ, 3.30 ಲಕ್ಷ ಮೌಲ್ಯದ ವಾಹನ ಸಹಿತ ಇಬ್ಬರು ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಮಂಗಳೂರು ತಾಲೂಕು ಕಸಬಾ ಬೆಂಗ್ರೆ ನಿವಾಸಿ ಫರಾಜ್ (27) ಹಾಗೂ ಸುರತ್ಕಲ್ ಸಮೀಪದ ಕೃಷ್ಣಾಪುರ-ಚೊಕ್ಕಬೆಟ್ಟು ನಿವಾಸಿ ತೌಸಿಫ್ ಅಹಮ್ಮದ್ (34) ಎಂದು ಹೆಸರಿಸಲಾಗಿದೆ. ಬಂಧಿತ ಆರೋಪಿಗಳಿಂದ 12.23 ಲಕ್ಷ ರೂಪಾಯಿ ಮೌಲ್ಯದ 223 ಗ್ರಾಂ ಚಿನ್ನಾಭರಣ, 3.30 ಲಕ್ಷ ರೂಪಾಯಿ ಮೌಲ್ಯದ ಮಹೇಂದ್ರ ಕ್ಸೈಲೋ ಕಾರು ಹಾಗೂ ಮೋಟಾರ್ ಸೈಕಲ್ ಸೇರಿದಂತೆ ಒಟ್ಟು 15.56 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸ್ವಾಧೀನಪಡಿಸಿಕೊಂಡ ಚಿನ್ನಾಭರಣಗಳ ಪೈಕಿ ಪಣಂಬೂರು ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಕಳವಾಗಿದ್ದ ಚಿನ್ನಾಭರಣಗಳು ಸೇರಿರುತ್ತದೆ. ಆರೋಪಿಗಳ ಪೈಕಿ ಫರಾಜ್ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಹಾಗೂ ಪಣಂಬೂರು ಪೊಲೀಸ್ ಠಾಣೆಯಲ್ಲಿ ಮನೆ ಕಳ್ಳತನ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಜಿಪಮುನ್ನೂರು ಗ್ರಾಮದ ನಿವಾಸಿ ಮೈಕಲ್ ಡಿ ಸೋಜಾ ಅವರು ತನ್ನ ಬಾಡಿಗೆ ಮನೆಗೆ ಸೆ 1 ರಂದು ಶುಕ್ರವಾರ ಬೆಳಿಗ್ಗೆ ಬೀಗ ಹಾಕಿ ಮಕ್ಕಳೊಂದಿಗೆ ಹೊರಗೆ ಹೋಗಿದ್ದು, ಮಧ್ಯಾಹ್ನ 2.45ರ ವೇಳೆಗೆ ಬಂದು ನೋಡಿದಾಗ ಕಳವು ಕೃತ್ಯ ಬೆಳಕಿಗೆ ಬಂದಿತ್ತು. ಮನೆಯಲ್ಲಿ ಮೈಕಲ್ ಅವರು ಪರಿಶೀಲನೆ ನಡೆಸಿದಾಗ ಮನೆಯೊಳಗಿನ ಕೋಣೆಯಲ್ಲಿಟ್ಟ 2 ಕಪಾಟುಗಳ ಬಾಗಿಲು ಮುರಿದು 5.36 ಲಕ್ಷ ರೂಪಾಯಿ ಮೌಲ್ಯದ ಒಟ್ಟು 115 ಗ್ರಾಂ ತೂಕದ ಚಿನ್ನಾಭರಣಗಳನ್ನು ಹಾಗೂ ಸುಮಾರು 3 ಸಾವಿರ ರೂಪಾಯಿ ರೂಪಾಯಿ ಮೌಲ್ಯದ ಬೆಳ್ಳಿಯ ಸಾಮಾಗ್ರಿಗಳನ್ನು ಕಳವು ಮಾಡಲಾಗಿರುವುದು ಗಮನಕ್ಕೆ ಬಂದಿತ್ತು. ಈ ಬಗ್ಗೆ ಅವರು ಬಂಟ್ವಾಳ ನಗರ ಠಾಣೆಗೆ ನೀಡಿದ ದೂರಿನಂತೆ ಅಪರಾಧ ಕ್ರಮಾಂಕ 98/2023 ಕಲಂ 454, 380 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಇದೀಗ ಕಳ್ಳತನ ಪ್ರಕರಣ ಬೇಧಿಸಿ ಇಬ್ಬರು ಖದೀಮರನ್ನು ಚಿನ್ನಾಭರಣಗಳ ಸಹಿತ ದಸ್ತಗಿರಿ ಮಾಡುವಲ್ಲಿ ಸಫಲರಾಗಿದ್ದಾರೆ.
0 comments:
Post a Comment