ಮಂಗಳೂರು, ಸೆಪ್ಟೆಂಬರ್ 21, 2023 (ಕರಾವಳಿ ಟೈಮ್ಸ್) : ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ಹೆಸರಿನಲ್ಲಿ ಯುವತಿಗೆ ಕರೆ ಮಾಡಿ 25 ಲಕ್ಷ ಲಾಟರಿ ಗೆದ್ದಿರುವುದಾಗಿ ತಿಳಿಸಿ ಲಕ್ಷಾಂತರ ರೂಪಾಯಿ ಹಣ ವರ್ಗಾಯಿಸಿ ವಂಚಿಸಿದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ತಾಲೂಕು, ಚಿಕ್ಕಮುಡ್ನೂರು ಗ್ರಾಮದ ನಿವಾಸಿ ಝೀನತ್ ಬಾನು ಎಂಬಾಕೆಯೇ ಕರೋಡ್ ಪತಿಯಾಗಲು ಹೋಗಿ ವಂಚನೆಗೊಳಗಾಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಯುವತಿ.
ಝೀನತ್ ಬಾನು ಅವರಿಗೆ 2022 ರ ಮೇ ತಿಂಗಳಲ್ಲಿ ಅಪರಿಚಿತ ವ್ಯಕ್ತಿ ವಾಟ್ಸಪ್ ಕರೆ ಮಾಡಿ ತಾನು ಕೌನ್ ಬನೇಗಾ ಕರೋಡಪತಿ ಎಂಬ ಕಾರ್ಯಕ್ರಮದಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ ತಾವು 25 ಲಕ್ಷ ರೂಪಾಯಿ ಲಾಟರಿ ಗೆದ್ದಿರುವುದಾಗಿ ತಿಳಿಸಿದ್ದಾನೆ. ಬಳಿಕ ಈ ಲಾಟರಿ ಹಣ ಪಡೆಯಲು ಟ್ಯಾಕ್ಸ್ ಕಟ್ಟಲು ಹಾಗೂ ಇನ್ನಿತರ ಚಾರ್ಜಸ್ ಕಾರಣ ಹೇಳಿ ಝೀನತ್ ಬಾನು ಅವರಿಂದ 2022 ರ ಮೇ ತಿಂಗಳಿನಿಂದ 2023 ರ ಸೆಪ್ಟಂಬರ್ 13 ರವರೆಗಿನ ಅವಧಿಯಲ್ಲಿ ಅಪರಿಚಿತ ವ್ಯಕ್ತಿಯು ವಿವಿಧ ಬ್ಯಾಂಕ್ ಖಾತೆಗಳಿಗೆ ಸುಮಾರು 12,93,200/- ಹಣವನ್ನು ವರ್ಗಾಯಿಸಿಕೊಂಡು ವಂಚಿಸಿರುತ್ತಾನೆ ಎಂಬುದಾಗಿ ಝೀನತ್ ಬಾನು ನೀಡಿದ ದೂರಿನಂತೆ ದಕ್ಷಿಣ ಕನ್ನಡ ಜಿಲ್ಲಾ ಸಿಇಎನ್ ಅಪರಾಧ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 29/2023 ಕಲಂ 66(ಡಿ), ಐಟಿ ಆಕ್ಟ್ 417 420 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
0 comments:
Post a Comment