ಸುಳ್ಯ, ಸೆಪ್ಟೆಂಬರ್ 19, 2023 (ಕರಾವಳಿ ಟೈಮ್ಸ್) : ಮಡಿಕೇರಿ ನಿವಾಸಿ ವ್ಯಕ್ತಿಯೋರ್ವರನ್ನು ಮೂವರ ತಂಡ ಅಟೋ ರಿಕ್ಷಾದಿಂದ ದೂಡಿ ಹಾಕಿ ಲಕ್ಷಾಂತರ ರೂಪಾಯಿ ಹಣ ಹಾಗೂ ದಾಖಲೆ ಪತ್ರಗಳಿದ್ದ ಬ್ಯಾಗ್ ಕಸಿದುಕೊಂಡು ಪರಾರಿಯಾದ ಘಟನೆ ಸುಳ್ಯ ಕಸಬಾ ಗ್ರಾಮದ ಹಳೆಗೇಟು ಎಂಬಲ್ಲಿ ಸೋಮವಾರ (ಸೆ 18) ರಾತ್ರಿ ನಡೆದಿದೆ.
ಕೊಡಗು ಜಿಲ್ಲೆಯ ಮಡಿಕೇರಿ ಸಮೀಪದ ಕಾರುಗುಂದ ನಿವಾಸಿ ದರ್ಶನ್ (27) ಎಂಬವರೇ ತಂಡದಿಂದ ದರೋಡೆಗೊಳಗಾದ ವ್ಯಕ್ತಿ. ದರ್ಶನ್ ಸೋಮವಾರ ವೈಯಕ್ತಿಕ ಕೆಲಸದ ನಿಮಿತ್ತ ಸುಳ್ಯಕ್ಕೆ ಬಂದು, ಅದೇ ದಿನ ರಾತ್ರಿ ಸುಮಾರು 11:15 ರ ವೇಳೆಗೆ ಊರಿಗೆ ಹಿಂತಿರುಗುವ ಸಲುವಾಗಿ ಸುಳ್ಯ ಬಸ್ಸು ನಿಲ್ದಾಣಕ್ಕೆ ತೆರಳಲು ಸುಳ್ಯ ಕಸಬಾ ಗ್ರಾಮದ ಹಳೆಗೇಟು ಎಂಬಲ್ಲಿ ಆಟೋರಿಕ್ಷಾವೊಂದನ್ನು ಹತ್ತಿದ್ದಾರೆ. ಆಟೋ ರಿಕ್ಷಾದ ಪ್ರಯಾಣಿಕರ ಸೀಟಿನಲ್ಲಿ ಇಬ್ಬರು ಪ್ರಯಾಣಿಕರು ಕುಳಿತಿದ್ದು, ದರ್ಶನ್ ಅವರು ಆಟೋದಲ್ಲಿ ಕುಳಿತ ತಕ್ಷಣ ಚಾಲಕ ಹಾಗೂ ಪ್ರಯಾಣಿಕರಿಬ್ಬರು ಸೇರಿ ದರ್ಶನ್ ಅವರಲ್ಲಿದ್ದ ಬ್ಯಾಗ್ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ದರ್ಶನ್ ಪ್ರತಿರೋಧ ತೋರಿದ ವೇಳೆ ಅವರಿಗೆ ಹಲ್ಲೆ ನಡೆಸಿ, ಬ್ಯಾಗನ್ನು ಕಿತ್ತುಕೊಂಡು ದರ್ಶನ್ ಅವರನ್ನು ಮೂವರು ಸೇರಿ ರಿಕ್ಷಾದಿಂದ ದೂಡಿ ಹಾಕಿ ಆಟೋದಲ್ಲಿ ಪರಾರಿಯಾಗಿರುತ್ತಾರೆ.
ದರ್ಶನ್ ಅವರ ಕೈಯಲ್ಲಿದ್ದ ಬ್ಯಾಗಿನಲ್ಲಿ ವ್ಯವಹಾರದ ಬಾಬ್ತು ತಂದಿದ್ದ ಒಟ್ಟು 3.5 ಲಕ್ಷ ರೂಪಾಯಿ ನಗದು ಹಣ, ಎರಡು ಮೊಬೈಲ್ ಗಳು, ವಿವಿಧ ಗುರುತಿನ ಚೀಟಿಗಳು ಹಾಗೂ ಮೂರು ಎಟಿಎಂ ಕಾರ್ಡ್ ಗಳಿತ್ತು. ಘಟನೆಯ ಸಂದರ್ಭ ದರ್ಶನ್ ಅಟೋ ರಿಕ್ಷಾದ ನೋಂದಣಿ ಸಂಖ್ಯೆ ಗಮನಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಈ ಬಗ್ಗೆ ಸುಳ್ಯ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 105/2023 ಕಲಂ 392 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
0 comments:
Post a Comment