ವರ್ಷಪೂರ್ತಿ ವಿದ್ಯಾರ್ಥಿ ವೇತನ ನೀಡದೆ ಸತಾಯಿಸಿದ ಅಲ್ಪಸಂಖ್ಯಾತ ಇಲಾಖೆ : ಇದೀಗ ಬಯೋಮೆಟ್ರಿಕ್ ಹೆಸರಿನಲ್ಲಿ ವಿದ್ಯಾರ್ಥಿಗಳ ಅಲೆದಾಟ - Karavali Times ವರ್ಷಪೂರ್ತಿ ವಿದ್ಯಾರ್ಥಿ ವೇತನ ನೀಡದೆ ಸತಾಯಿಸಿದ ಅಲ್ಪಸಂಖ್ಯಾತ ಇಲಾಖೆ : ಇದೀಗ ಬಯೋಮೆಟ್ರಿಕ್ ಹೆಸರಿನಲ್ಲಿ ವಿದ್ಯಾರ್ಥಿಗಳ ಅಲೆದಾಟ - Karavali Times

728x90

4 September 2023

ವರ್ಷಪೂರ್ತಿ ವಿದ್ಯಾರ್ಥಿ ವೇತನ ನೀಡದೆ ಸತಾಯಿಸಿದ ಅಲ್ಪಸಂಖ್ಯಾತ ಇಲಾಖೆ : ಇದೀಗ ಬಯೋಮೆಟ್ರಿಕ್ ಹೆಸರಿನಲ್ಲಿ ವಿದ್ಯಾರ್ಥಿಗಳ ಅಲೆದಾಟ

ಡಿಜಿಟಲೀಕರಣಗೊಂಡರೂ ಸುಧಾರಿಸದ ವ್ಯವಸ್ಥೆ : ಯಾರದೋ ತಪ್ಪಿಗೆ ಅಮಾಯಕ ವಿದ್ಯಾರ್ಥಿಗಳನ್ನು ಅಲೆದಾಡಿಸುವುದು ಯಾವ ಪುರುಷಾರ್ಥಕ್ಕೆ ? ವಿದ್ಯಾರ್ಥಿ ಪೋಷಕರ ಆಕ್ರೋಶ


ಸಾಲ ವಸೂಲಾತಿಗೆ ಕಠಿಣ ಕ್ರಮಕ್ಕೆ ತಾಕೀತು ಮಾಡುತ್ತಿರುವ ಸಚಿವ ಝಮೀರ್ ವಿರುದ್ದವೂ ಅಲ್ಪಸಂಖ್ಯಾತರ ಅಸಮಾಧಾನ


ಬೆಂಗಳೂರು, ಸೆಪ್ಟೆಂಬರ್ 04, 2023 (ಕರಾವಳಿ ಟೈಮ್ಸ್)  : ಕೇಂದ್ರ ಹಾಗೂ ರಾಜ್ಯ ಸರಕಾರದ ಅಲ್ಪಸಂಖ್ಯಾತ ಇಲಾಖೆ ಜಂಟಿಯಾಗಿ ನೀಡುತ್ತಾ ಬಂದಿರುವ ಎನ್.ಎಸ್.ಪಿ. ಸ್ಕಾಲರ್ ಶಿಪ್ ಕಳೆದ ಶೈಕ್ಷಣಿಕ ಸಾಲಿನಲ್ಲಿ ಅಂದರೆ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಅರ್ಜಿ ಸಲ್ಲಿಸಿರುವ ಯಾವುದೇ ವಿದ್ಯಾರ್ಥಿಗಳಿಗೂ ಶೈಕ್ಷಣಿಕ ವರ್ಷ ಪೂರ್ಣಗೊಂಡು ಮತ್ತೊಂದು ಶೈಕ್ಷಣಿಕ ವರ್ಷ ಆರಂಭವಾಗಿ ಅರ್ಧ ಭಾಗ ಆಗುತ್ತಾ ಬಂದರೂ ಇನ್ನೂ ವಿದ್ಯಾರ್ಥಿಗಳ ಖಾತೆಗೆ ಹಣ ಜಮೆಯಾಗಿಲ್ಲ. ಹಣ ಜಮೆಯಾಗಿಲ್ಲ ಮಾತ್ರವಲ್ಲ ಇದೀಗ ಯಾರೋ ನಕಲಿ ಅರ್ಜಿ ಸಲ್ಲಿಸಿದ್ದಾರೆ ಎಂಬ ನೆಪವೊಡ್ಡಿ ವಿದ್ಯಾರ್ಥಿ ವೇತನಕ್ಕಾಗಿ ಆನ್ ಲೈನ್ ಅರ್ಜಿ ಸಲ್ಲಿಸಿದ ಸಕಲ ವಿದ್ಯಾರ್ಥಿಗಳನ್ನು, ವಿದ್ಯಾಸಂಸ್ಥೆಗಳ ನೋಡಲ್ ಅಧಿಕಾರಿಗಳನ್ನು ಆಧಾರ್ ಬಯೋಮೆಟ್ರಿಕ್ ಆಂಥೆಟಿಫಿಕೇಶನ್ ಹೆಸರಿನಲ್ಲಿ ಸರಕಾರವೇ ಅಲೆದಾಡಿಸುತ್ತಿದೆ. 

ಈಗಾಗಲೇ ವಿದ್ಯಾಸಂಸ್ಥೆಗಳ ಮುಖ್ಯಸ್ಥರ ಬಯೋಮೆಟ್ರಿಕ್ ಪ್ರಕ್ರಿಯೆ ಮುಕ್ತಾಯಗೊಂಡಿದೆ. ವಿದ್ಯಾಸಂಸ್ಥೆಗಳ ನೋಡಲ್ ಅಧಿಕಾರಿ ಸಂಸ್ಥೆಗೆ ಒಬ್ಬರೇ ಇದ್ದು, ಸೀಮಿತ ಸಂಖ್ಯೆಯಲ್ಲಿರುವುದರಿಂದ ಅದೇನೋ ನಿಗದಿತ ಸಮಯಕ್ಕೆ ಪೂರ್ಣಗೊಂಡಿದೆ. ಇದೀಗ ವಿದ್ಯಾರ್ಥಿಗಳ ಬಯೋಮೆಟ್ರಿಕ್ ಆರಂಭಗೊಂಡಿದ್ದು, ಲಕ್ಷಾಂತರ ಸಂಖ್ಯೆಯಲ್ಲಿರುವ ವಿದ್ಯಾರ್ಥಿಗಳ ಬಯೋಮೆಟ್ರಿಕ್ ಪ್ರಕ್ರಿಯೆ ಮುಕ್ತಾಯಗೊಳ್ಳುವುದು ಸುಲಭದ ಮಾತಲ್ಲ. ಅಲ್ಪಸಂಖ್ಯಾತ ಇಲಾಖೆಯಿಂದಲೇ ಪರವಾನಿಗೆ ಪಡೆದ ಸಾಮಾನ್ಯ ಸೇವಾ ಕೇಂದ್ರ (ಸಿ.ಎಸ್.ಸಿ.) ಗಳ ಸಿಬ್ಬಂದಿಗಳ ತಂಡ ಗೊತ್ತುಪಡಿಸಿ ಪ್ರತೀ ದಿನ ನಿಗದಿತ ಶಾಲಾ-ಕಾಲೇಜಿಗೆ ಕಳಿಸುವ ಮೂಲಕ ವಿದ್ಯಾರ್ಥಿಗಳ ಬಯೋಮೆಟ್ರಿಕ್‍ಗಾಗಿ ವ್ಯವಸ್ಥೆ ಮಾಡಲಾಗಿದೆಯಾದರೂ ಇದರಲ್ಲಿ ಸಮಸ್ಯೆಗೆ ಪರಿಹಾರ ದೊರೆತಿಲ್ಲ. 

ಕಳೆದ ಶೈಕ್ಷಣಿಕ ವರ್ಷದಲ್ಲಿ ಅಧ್ಯಯನ ಮಾಡಿದ ಶಾಲಾ-ಕಾಲೇಜಿಗೆ ಬಯೋಮೆಟ್ರಿಕ್‍ಗಾಗಿ ಬರುವಂತೆ ವಿದ್ಯಾರ್ಥಿಗಳಿಗೆ ಅಥವಾ ಪೋಷಕರಿಗೆ ಸಂದೇಶ ಬರುತ್ತಿದ್ದು, ಶೈಕ್ಷಣಿಕ ಸಂಬಂಧಿಸಿ ವಿಷಯಗಳಲ್ಲಿ ಸದಾ ನಿಬಿಡತೆಯಲ್ಲಿರುವ ವಿದ್ಯಾರ್ಥಿಗಳಾಗಲೀ, ಪೋಷಕರಾಗಲೀ ಎಲ್ಲರೂ ಈ ಸಂದೇಶದ ಪ್ರಕಾರ ನಿಗದಿತ ಸ್ಥಳಕ್ಕೆ ತೆರಳಿ ಬಯೋಮೆಟ್ರಿಕ್ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಇನ್ನು ಕಾಲೇಜು ಕೋರ್ಸು ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಬೇರೆ ಬೇರೆ ಊರುಗಳಿಗೋ, ದೂರದ ವಿದ್ಯಾ ಸಂಸ್ಥೆಗೆ ಉನ್ನತ ವಿದ್ಯಾಭ್ಯಾಸಕ್ಕೋ ತೆರಳಿರುವ ಅಥವಾ ವಿವಿಧ ಕಂಪೆನಿ, ಸಂಸ್ಥೆಗಳಲ್ಲಿ ಉದ್ಯೋಗಕ್ಕಾಗಿ ಸೇರಿಕೊಂಡಿರುವ ವಿದ್ಯಾರ್ಥಿಗಳು ಕಳೆದ ವರ್ಷದ ವಿದ್ಯಾರ್ಥಿ ವೇತನದ ಮೊತ್ತಕ್ಕಾಗಿ ಬಯೋಮೆಟ್ರಿಕ್ ಪ್ರಕ್ರಿಯೆ ಪೂರ್ಣಗೊಳಿಸುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೆ ಕೆಲವು ಪೋಷಕರಿಗೆ ಮೊಬೈಲ್ ಸಂದೇಶ ಬಂದಿರುವುದೇ ಗೊತ್ತಾಗದ ಹಿನ್ನಲೆಯಲ್ಲಿ ಹಾಗೂ ಸಿ.ಎಸ್.ಸಿ. ಸಿಬ್ಬಂದಿಗಳು ಶಾಲಾ-ಕಾಲೇಜುಗಳಿಗೆ ಬಂದ ದಿನ ಗೈರು ಹಾಜರಿಯಾಗಿರುವ ವಿದ್ಯಾರ್ಥಿಗಳ ಬಯೋಮೆಟ್ರಿಕ್‍ಗಾಗಿ ಪರ್ಯಾಯ ವ್ಯವಸ್ಥೆಯನ್ನೂ ಇಲಾಖೆ ಸೂಚಿಸಿಲ್ಲ ಎಂದು ವಿದ್ಯಾರ್ಥಿ ಪೋಷಕರು ಆತಂಕ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಅಲ್ಲದೆ ಕಳೆದ ಬಾರಿ ಅಥವಾ ಅದಕ್ಕಿಂತ ಮುಂಚಿನ ವರ್ಷಗಳಲ್ಲಿ ವಿದ್ಯಾರ್ಥಿ ವೇತನ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿದ ನವೀಕರಣ ವಿದ್ಯಾರ್ಥಿಗಳು ಇದೀಗ ಬಯೋಮೆಟ್ರಿಕ್ ಪ್ರಕ್ರಿಯೆಗೆ ತೆರಳಿದ ಸಂದರ್ಭ ಆಧಾರ್ ಸಂಖ್ಯೆ ಜೋಡಿಸಿಲ್ಲ. ಎನ್.ಎಸ್.ಪಿ. ಪೋರ್ಟಲ್ ಲಾಗಿನ್ ಆಗಿ ಆಧಾರ್ ಸಂಖ್ಯೆ ಜೋಡಿಸುವಂತೆ ಸಂದೇಶ ಬರುತ್ತದೆ. ಆದರೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಆಧಾರ್ ಅಪ್ಡೇಟ್ ಮಾಡಿದ ವಿದ್ಯಾರ್ಥಿಗಳ ಆಧಾರ್ ಕಾರ್ಡಿನಲ್ಲಿ ಮಾಹಿತಿಗಳು ಒಂದಷ್ಟು ಬದಲಾವಣೆಯಾಗಿರುವ ಹಿನ್ನಲೆಯಲ್ಲಿ ಪೋರ್ಟಲ್‍ನಲ್ಲಿ ಆಧಾರ್ ಸಂಖ್ಯೆ ಜೋಡಿಸುವಾಗ ಮಾಹಿತಿಗಳು ತಾಳೆಯಾಗುತ್ತಿಲ್ಲ ಎಂಬ ಸಂದೇಶ ಬರುತ್ತಿದೆ. ಅದೇ ರೀತಿ ಕೆಲ ವಿದ್ಯಾರ್ಥಿಗಳ ಆಧಾರ್ ಇ-ಕೆವೈಸಿ ನವೀಕರಣಕ್ಕೆ ಸಮಯವಾಗಿದ್ದು, ಅಂತಹ ವಿದ್ಯಾರ್ಥಿಗಳ ಬಯೋಮೆಟ್ರಿಕ್ ಕೂಡಾ ಆಗುತ್ತಿಲ್ಲ. ಅಂತಹ ವಿದ್ಯಾರ್ಥಿಗಳು ಆಧಾರ್ ಸೆಂಟರಿಗೆ ತೆರಳಿ ಆಧಾರ್ ಇ-ಕೆವೈಸಿ ಅಥವಾ ಆಧಾರ್ ಬಯೋಮೆಟ್ರಿಕ್ ಪ್ರಕ್ರಿಯೆ ಮಾಡಿಸಿದ ಬಳಿಕ ಅದು ಪೂರ್ಣಗೊಳ್ಳಲು ಕೆಲವು ಬಾರಿ ತಿಂಗಳುಗಳೆ ತಗಲುತ್ತಿರುವ ಹಿನ್ನಲೆಯಲ್ಲಿ ಅದಕ್ಕೂ ಇಲಾಖೆ ಪರಿಹಾರ ಸೂಚಿಸಿಲ್ಲ. ಒಟ್ಟಾರೆ ಕೇಂದ್ರ ಅಲ್ಪಸಂಖ್ಯಾತ ಇಲಾಖೆ ಇದೀಗ ಸೂಚಿಸಿರುವ ಬಯೋಮೆಟ್ರಿಕ್ ಪ್ರಕ್ರಿಯೆ ಪೂರ್ಣವಾಗಿ ಗೊಂದಲಮಯವಾಗಿದ್ದು, ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ವೇತನದಿಂದ ವಂಚಿತಗೊಳಿಸುವ ಉದ್ದೇಶವೇನಾದರೂ ಇದರ ಹಿಂದೆ ಇದೆ ಎಂಬ ಸಂಶಯ ಕೂಡಾ ವಿದ್ಯಾರ್ಥಿ ಪೋಷಕರನ್ನು ಕಾಡುತ್ತಿದೆ. 

ವಿದ್ಯಾರ್ಥಿಗಳು ಕಳೆದ ಬಾರಿ ವಿದ್ಯಾರ್ಥಿ ವೇತನಕ್ಕೆ ಎನ್.ಎಸ್.ಪಿ. ಪೋರ್ಟಲ್‍ನಲ್ಲಿ ಆನ್ ಲೈನ್ ಅರ್ಜಿ ಸಲ್ಲಿಸುವ ಸಂದರ್ಭ ಆಧಾರ್ ಸಂಖ್ಯೆ ನಮೂದಿಸಿಯೇ ಅದು ಆಧಾರ್ ಆಧಾರಿತವಾಗಿಯೇ ಅರ್ಜಿ ನೋಂದಣಿ ಪ್ರಕ್ರಿಯೆ ಚಾಲನೆಗೊಳ್ಳುವಂತೆ ಸಂಪೂರ್ಣ ಡಿಜಿಟಲೀಕರಣ ವ್ಯವಸ್ಥೆಯ ಮೂಲಕವೇ ಮಾಡಲಾಗಿದ್ದರೂ ಇದೀಗ ಮತ್ತೆ ಸಮಸ್ಯೆ ತಲೆದೋರಿರುವುದರ ಹಿಂದೆ ಯಾರ ಕೈವಾಡ ಇದೆ ಎಂಬ ಪ್ರಶ್ನೆ ಕೂಡಾ ವಿದ್ಯಾರ್ಥಿ ಪೋಷಕ ವರ್ಗದಿಂದ ಕೇಳಿ ಬರುತ್ತಿದೆ.

ಇದೀಗ ನಡೆಯುತ್ತಿರುವ ಬಯೋಮೆಟ್ರಿಕ್ ಪ್ರಕ್ರಿಯೆ ಪೂರ್ಣವಾಗಿ ಕೇಂದ್ರ ಅಲ್ಪಸಂಖ್ಯಾತ ಇಲಾಖೆಯ ಸುಪರ್ದಿಗೆ ಸೇರಿದೆ ಎಂದು ರಾಜ್ಯ ಸರಕಾರ ಕೈ ತೊಳೆದುಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಆದರೆ ಕೇಂದ್ರದ ನರೇಂದ್ರ ಮೋದಿ ಸರಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ.) ಯನ್ನು ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರಕಾರ ಪೂರ್ಣವಾಗಿ ತಿರಸ್ಕರಿಸಿ ರಾಜ್ಯ ಶಿಕ್ಷಣ ನೀತಿ (ಎಸ್.ಇ.ಪಿ.) ಯನ್ನೇ ಜಾರಿಗೊಳಿಸುವ ಬದ್ದತೆ ಪ್ರದರ್ಶಿಸಿರುವಾಗ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಸಮಸ್ಯೆಗೂ ಎಸ್.ಇ.ಪಿ. ಮಾದರಿಯಲ್ಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಕೂಡಾ ವಿದ್ಯಾರ್ಥಿ ಪೋಷಕ ವರ್ಗದಿಂದ ಕೇಳಿ ಬರುತ್ತಿದೆ. 

ಒಟ್ಟಾರೆ ಡಿಜಿಟಲೀಕರಣಗೊಂಡ ವ್ಯವಸ್ಥೆಯಲ್ಲೂ ಗೊಂದಲ ಸೃಷ್ಟಿಸಿಕೊಂಡಿರುವ ಕೇಂದ್ರ ಅಲ್ಪಸಂಖ್ಯಾತ ಇಲಾಖೆ ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ನೀಡಲ್ಪಡುವ ವಿದ್ಯಾರ್ಥಿ ವೇತನಕ್ಕೆ ಆನ್ ಲೈನ್ ಅರ್ಜಿ ಸಲ್ಲಿಸುವ ಸಮಯ ಕಳೆದರೂ ಅದನ್ನೂ ಜಾರಿ ಮಾಡದೆ, ಕಳೆದ ಬಾರಿಯ ವಿದ್ಯಾರ್ಥಿ ವೇತನವನ್ನೂ ಬಿಡುಗಡೆ ಮಾಡದೆ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಮೂಲಕ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಗೆ ತಡೆಯಾಗುತ್ತಿದೆ. 

ಈ ಬಗ್ಗೆ ರಾಜ್ಯದ ನೂತನ ಸರಕಾರದ ಮುಖ್ಯಮಂತ್ರಿಗಳು ಹಾಗೂ ಅಲ್ಪಸಂಖ್ಯಾತ ಇಲಾಖಾ ಸಚಿವರು ಸೂಕ್ತ ಪರಿಹಾರ ಕಂಡುಕೊಳ್ಳುವ ಮೂಲಕ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಸಂಬಂಧಿಯಾಗಿ ಅನುಭವಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ವಿದ್ಯಾರ್ಥಿ ಪೋಷಕರು ಆಗ್ರಹಿಸಿದ್ದಾರೆ.


ಸಾಲ ವಸೂಲಾತಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡುತ್ತಿರುವ ಸಚಿವ ಝಮೀರ್ 


ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ನೂತನ ಕಾಂಗ್ರೆಸ್ ಸರಕಾರದ ಅಲ್ಪಸಂಖ್ಯಾತ ಇಲಾಖಾ ಸಚಿವರು ಅಲ್ಪಸಂಖ್ಯಾತ ಇಲಾಖೆ ನೀಡಿರುವ ಸಾಲದ ವಸೂಲಾತಿಗೆ ಇಲಾಖಾ ಸಿಬ್ಬಂದಿಗಳಿಗೆ ಇನ್ನಿಲ್ಲದ ಒತ್ತಡ ಹೇರುತ್ತಿದ್ದಾರೆ ಎನ್ನಲಾಗುತ್ತಿದ್ದು, ಇದರಿಂದ ಇಲಾಖಾ ಸಿಬ್ಬಂದಿಗಳು ಸಾಲಗಾರರ ಬೆನ್ನು ಬಿದ್ದು ಪೀಡಿಸುತ್ತಿರುವ ಬಗ್ಗೆಯೂ ಆಕ್ರೋಶ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸರಕಾರದ ಹಿಂದೆ ಅಲ್ಪಸಂಖ್ಯಾತರ ಪಾತ್ರ ಬಹಳಷ್ಟಿದೆ. ಹೀಗಿರುತ್ತಾ ಅಲ್ಪಸಂಖ್ಯಾತರಿಗಿರುವ ಯೋಜನೆಗಳನ್ನು ಮರು ಜಾರಿಗೊಳಿಸಿ ಸಾಲ ಮನ್ನಾದಂತಹ ಜನಪರ ಸೌಲಭ್ಯಗಳನ್ನು ಒದಗಿಸುವಂತೆ ಅಲ್ಪಸಂಖ್ಯಾತರ ವರ್ಗ ಆಗ್ರಹಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ವರ್ಷಪೂರ್ತಿ ವಿದ್ಯಾರ್ಥಿ ವೇತನ ನೀಡದೆ ಸತಾಯಿಸಿದ ಅಲ್ಪಸಂಖ್ಯಾತ ಇಲಾಖೆ : ಇದೀಗ ಬಯೋಮೆಟ್ರಿಕ್ ಹೆಸರಿನಲ್ಲಿ ವಿದ್ಯಾರ್ಥಿಗಳ ಅಲೆದಾಟ Rating: 5 Reviewed By: karavali Times
Scroll to Top