ಬಂಟ್ವಾಳ, ಸೆಪ್ಟೆಂಬರ್ 27, 2023 (ಕರಾವಳಿ ಟೈಮ್ಸ್) : ಅಂತ್ಯಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ಅವರ ಸ್ವಭಾವ ಪವಿತ್ರ ಕುರ್-ಆನ್ ಆಗಿತ್ತು. ಪವಿತ್ರ ಕುರ್-ಆನ್ ಮಾನಕುಲಕ್ಕೆ ನೀಡಿದ ಸಂದೇಶ ಪ್ರಕಾರವೇ ಪ್ರವಾದಿಗಳ ಜೀವನವಾಗಿತ್ತು. ನಾವುಗಳು ಕೂಡಾ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ಅವರ ಗುಣ ಸ್ವಭಾವಗಳನ್ನು ನಿತ್ಯ ಜೀವನದಲ್ಲಿ ಪಾಲಿಸಿದಾಗ ಮಿಲಾದ್ ಸಂಭ್ರಮದ ನಿಜವಾದ ಸಂದೇಶ ಅನಾವರಣಗೊಳ್ಳಲಿದೆ ಎಂದು ಪಾಣೆಮಂಗಳೂರು-ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಅಲ್-ಹಾಜ್ ಬಿ ಎಚ್ ಅಬೂಸ್ವಾಲಿಹ್ ಉಸ್ತಾದ್ ಹೇಳಿದರು.
ಬುಧವಾರ ರಾತ್ರಿ ಮಿಲಾದ್ ಪ್ರಯುಕ್ತ ಮಸೀದಿಯಲ್ಲಿ ನಡೆದ ವಿದ್ಯಾರ್ಥಿ ಕಲಾ ಸಂಭ್ರಮ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಿಲಾದ್ ದಿನ ಆಚರಿಸುವ ಸರ್ವ ಕಾರ್ಯಕ್ರಮಗಳೂ ಕೂಡಾ ಪ್ರವಾದಿ ಪ್ರೇಮದಿಂದ ಪುಳಕಿತಗೊಳ್ಳುವ ಕಾರ್ಯಕ್ರಮಗಳಾಗಿವೆ. ಪುಟಾಣಿಗಳಿಂದ ಪ್ರವಾದಿ ಮದ್-ಹ್ ಹೇಳಿಸಿ ಅದನ್ನು ಕೇಳಿಸಿಕೊಳ್ಳುವುದು, ಮೌಲಿದ್ ಪಾರಾಣ ಮೊದಲಾದ ಎಲ್ಲ ಕಾರ್ಯಕ್ರಮಗಳಿಗೂ ಪುಣ್ಯವಿದೆ. ಪ್ರವಾದಿ ಗುಣಗಾನದ ಬಗ್ಗೆ ಯಾರೇ ಅಪಸ್ವರ ಎತ್ತಿದರೂ ಅದಕ್ಕೆ ಪ್ರವಾದಿ ಪ್ರೇಮಿಗಳು ತಲೆ ಕೆಡಿಸಿಕೊಳ್ಳುವುದಾಗಲೀ, ವಿಮರ್ಶಾತ್ಮಕವಾಗಿ ಪ್ರತಿಕ್ರಯಿಸಿ ಸಮಯ ವ್ಯರ್ಥ ಮಾಡುವುದಾಗಲೀ ಮಾಡದೆ ನಮ್ಮ ಪುಣ್ಯ ಕರ್ಮಗಳನ್ನು ಮುಂದುವರಿಸುವಂತೆ ಕರೆ ನೀಡಿದರು.
ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಮೋನು ಸಹಿತ ಮದ್ರಸ ಅಧ್ಯಾಪಕರುಗಳು, ಗಣ್ಯರು ಉಪಸ್ಥಿತರಿದ್ದರು.
0 comments:
Post a Comment