ಮಂಗಳೂರಿನಲ್ಲಿ ಸಿಪಿಐ ರಾಜಕೀಯ ಸಮಾವೇಶ ಹಾಗೂ ಕೆಂಬಾವುಟ ಪತ್ರಿಕೆಯ 50ನೇ ವರ್ಷದ ವಿಶೇಷ ಸಂಚಿಕೆ ಬಿಡುಗಡೆ
ಮಂಗಳೂರು, ಸೆಪ್ಟೆಂಬರ್ 03, 2023 (ಕರಾವಳಿ ಟೈಮ್ಸ್) : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್ ಡಿ ಎ ಮೈತ್ರಿಕೂಟವನ್ನು ಸೋಲಿಸುವುದೇ ನಮ್ಮ ಸದ್ಯದ ಗುರಿ. ಅದಕ್ಕಾಗಿ ಈಗಿನಿಂದಲೇ ಕಾರ್ಯಪ್ರವೃತ್ತರೋಗೋಣ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ಬಿನೋಯ್ ವಿಶ್ವಂ ಕರೆ ನೀಡಿದರು.
ಸೆ 2 ರಂದು ಸಿಪಿಐ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಮಿತಿ ಮಂಗಳೂರು ಪುರಭವನದಲ್ಲಿ ಏರ್ಪಡಿಸಿದ್ದ “ರಾಜಕೀಯ ಸಮಾವೇಶ” ಉದ್ಘಾಟಿಸಿ ಪಕ್ಷದ ವಾರಪತ್ರಿಕೆ ಕೆಂಬಾವುಟದ 50ನೇ ವರ್ಷದ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜನಸಾಮಾನ್ಯರ ಏಳಿಗೆಗಾಗಿ ದುಡಿಯುವುದನ್ನು ಬಿಟ್ಟು ಬಂಡವಾಳಶಾಹಿಗಳ ಉದ್ದಾರಕ್ಕಾಗಿ ದುಡಿಯುತ್ತಿದೆ. ಇದರಿಂದಾಗಿ ಬಡವರು, ಕಾರ್ಮಿಕರು, ಯುವಕರು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಸಮಾಜದ ಕೆಳವರ್ಗದ ಜನ ಭಾರೀ ಕಷ್ಟಗಳನ್ನು ಎದುರಿಸುವಂತಾಗಿದೆ ಎಂದರು.
ಬಿಜೆಪಿ ಓಟು ಗಳಿಸುವುದಕ್ಕಾಗಿ ಜನರನ್ನು ಜಾತಿ-ಧರ್ಮಗಳ ಹೆಸರಿನಲ್ಲಿ ಒಡೆಯುತ್ತಿದ್ದಾರೆ. ಇದು ದೇಶದಲ್ಲಿ ಅಶಾಂತಿಗೆ ಕಾರಣವಾಗಿದೆ. ನಮ್ಮ ಸಂವಿಧಾನವನ್ನು ಬದಲಿಸಲು ಬಿಜೆಪಿ ಮತ್ತು ಸಂಘ ಪರಿವಾರ ಮಾಡುತ್ತಿರುವ ಪ್ರಯತ್ನಗಳನ್ನು ಹಿಮ್ಮೆಟ್ಟಿಸುವುದು ಹಾಗೂ ಅವರನ್ನು ಚುನಾವಣೆಗಳಲ್ಲಿ ಸೋಲಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದ ಬಿನೋಯ್ ವಿಶ್ವಂ ಅವರು, ಈ ದಿಸೆಯಲ್ಲಿ ದೇಶದ ಎಲ್ಲಾ ವಿರೋಧ ಪಕ್ಷಗಳು ಒಗ್ಗೂಡಿ “ಇಂಡಿಯಾ” ಎಂಬ ರಾಜಕೀಯ ಒಕ್ಕೂಟ ಸ್ಥಾಪಿಸಿದೆ. ಈ ಒಕ್ಕೂಟದ ಉದ್ದೇಶವೇ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದು. ನಮ್ಮ ರಾಜಕೀಯ ಮತ್ತು ಸೈದ್ದಾಂತಿಕ ನಿಲುವುಗಳು ಏನೇ ಇದ್ದರೂ ದೇಶದ ಏಳಿಗೆಗಾಗಿ ಮತ್ತು ದೇಶವಾಸಿಗಳ ಹಿತಕ್ಕಾಗಿ ಈ ಒಕ್ಕೂಟ ಸರ್ವ ಪ್ರಯತ್ನ ನಡೆಸಲಿದೆ. ಈ ಕರ್ತವ್ಯ ನಿರ್ವಹಣೆಯಲ್ಲಿ ಸಿಪಿಐ ಮುಂಚೂಣಿಯಲ್ಲಿರುತ್ತದೆ. ಈ ಕಾರ್ಯಸಾಧನೆಗಾಗಿ ಸಿಪಿಐ ಪಕ್ಷದ ಸದಸ್ಯರು, ಹಿತಚಿಂತಕರು ಹಾಗೂ ಜನಸಾಮಾನ್ಯರು ಈಗಿನಿಂದಲೇ ಕರ್ಯಪ್ರವೃತ್ತರಾಗಬೇಕಿದೆ ಎಂದರು.
ಸಿಪಿಐ ಕರ್ನಾಟಕ ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್ ಮಾತನಾಡಿ, ಕರ್ನಾಟಕದ ಜನ ಈಗಾಗಲೇ ಎಚ್ಚರಗೊಂಡಿದ್ದಾರೆ. ಕಳೆದ ಮೇ ತಿಂಗಳಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭ್ರಷ್ಟ ಬಿಜೆಪಿಯನ್ನು ಸೋಲಿಸಿದ್ದಾರೆ. ಈ ಬದಲಾವಣೆ ದೇಶದ ರಾಜಕೀಯ ಬದಲಾವಣೆಯ ಮುನ್ಸೂಚನೆಯಾಗಿದೆ. ಆದ್ದರಿಂದ ಈಗಿನಿಂದಲೇ ಕಣಕ್ಕಿಳಿಯೋಣ ಎಂದು ಕರೆಯಿತ್ತರು.
ಸಿಪಿಐ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ಬಿ ಶೇಖರ್ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ಕರ್ನಾಟಕ ರಾಜ್ಯ ಮಂಡಳಿ ಉಪಕಾರ್ಯದರ್ಶಿ ಅಮ್ಜದ್, ಎ ಐ ಎಸ್ ಎಫ್ ಕರ್ನಾಟಕ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಸಂತೋಷ್, ಪಕ್ಷ ಪ್ರಮುಖರಾದ ವಿ ಕುಕ್ಯಾನ್, ಎಚ್ ವಿ ರಾವ್, ಶಶಿಕಲಾ, ಸೀತಾರಾಮ ಬೇರಿಂಜೆ, ಕರುಣಾಕರ ಮಾರಿಪಳ್ಳ, ಸುರೇಶ್ ಬಂಟ್ವಾಳ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment