ಬಂಟ್ವಾಳ, ಆಗಸ್ಟ್ 08, 2023 (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಮುನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಿಂದೂ ಸ್ಮಶಾನ ಭೂಮಿಗೆ ಮೀಸಲಿಟ್ಟ ಜಮೀನನ್ನು ಬಿಜೆಪಿ ಬೆಂಬಲಿತ ಸದಸ್ಯನೇ ಅಕ್ರಮವಾಗಿ ಕಬಳಿಸಿಕೊಂಡು ಕೃಷಿ ಮಾಡುತ್ತಿರುವ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಜಮೀನನ್ನು ಪಂಚಾಯತ್ ಅಧೀನಕ್ಕೆ ಪಡೆದುಕೊಂಡು ಸ್ಮಶಾನ ನಿರ್ಮಾಣಕ್ಕೆ ತಕ್ಷಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಬಂಟ್ವಾಳ ತಹಶೀಲ್ದಾರ್ ಅವರಿಗೆ ಸೋಮವಾರ ಲಿಖಿತ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ಸಜಿಪಮುನ್ನೂರು ಗ್ರಾಮದ 6ನೇ ವಾರ್ಡಿನ ಆಲಾಡಿ-ಶಾರದಾ ನಗರದಲ್ಲಿ ಸರ್ವೆ ನಂಬ್ರ 29/1 ರ 0.50 ಎಕ್ರೆ ಜಮೀನನ್ನು 1994-95ರಲ್ಲೇ ಕಮಿಷನರ್ ಆದೇಶ ಸಂಖ್ಯೆ ಎಲ್ ಎನ್ ಡಿ ಸಿ ಆರ್ 153/94-95ರಂತೆ ಸಾರ್ವಜನಿಕ ಸ್ಮಶಾನಕ್ಕೆ ಮೀಸಲಾಗಿಡಲಾಗಿದೆ. ಸದ್ರಿ ಸ್ಮಶಾನ ಜಾಗದಲ್ಲಿ ಇನ್ನೂ ಸ್ಮಶಾನ ನಿರ್ಮಾಣ ಆಗಿಲ್ಲ ಮಾತ್ರವಲ್ಲ ಸದ್ರಿ ಮೀಸಲು ಜಮೀನನ್ನು ಪಂಚಾಯತಿನ ಬಿಜೆಪಿ ಬೆಂಬಲಿತ ಸದಸ್ಯ ಸುಂದರ ಪೂಜಾರಿ ಎಂಬವರು ಅಕ್ರಮವಾಗಿ ಕಬಳಿಸಿ ಕೃಷಿ-ಕೃತಾವಳಿ ಮಾಡಿಕೊಂಡು ಫಸಲಿನ ಲಾಭವನ್ನು ವೈಯುಕ್ತಿಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಇತ್ತೀಚೆಗೆ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಅಧಿಕಾರಿಗಳನ್ನು ತೀವ್ರ ತರಾಟೆಗೆಳೆದಿದ್ದರು. ಈ ಬಗ್ಗೆ ಕರಾವಳಿ ಟೈಮ್ಸ್ ಸಚಿತ್ರ ವರದಿ ಪ್ರಕಟಿಸಿ ಅಧಿಕಾರಿಗಳನ್ನು ಎಚ್ಚರಿಸಿತ್ತು.
ಪತ್ರಿಕಾ ವರದಿಯನ್ನು ಮುಂದಿಟ್ಟು ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವರು, ಮಾಜಿ ಸಚಿವರು, ಜಿಲ್ಲಾಧಿಕಾರಿಗಳು, ಮಂಗಳೂರು ಸಹಾಯಕ ಆಯುಕ್ತರಿಗೂ ಮನವಿ ಸಲ್ಲಿಸಿದ್ದರು. ಇದೀಗ ತಾಲೂಕಿನ ಸಮಸ್ಯೆಗೆ ಸಂಬAಧಿಸಿದAತೆ ಗ್ರಾಮಸ್ಥರು ತಹಶೀಲ್ದಾರ್ ಅವರಿಗೂ ಮನವಿ ಸಲ್ಲಿಸಿ ಸ್ಮಶಾನ ಭೂಮಿಯ ಅತಿಕ್ರಮಣ ತೆರವುಗೊಳಿಸಿ ಗ್ರಾಮಕ್ಕೆ ಮೂಲಭೂತವಾಗಿ ಬೇಕಾಗಿರುವ ಸ್ಮಶಾನವನ್ನು ನಿರ್ಮಿಸಿಕೊಡುವಂತೆ ಆಗ್ರಹಿಸಿದ್ದಾರೆ.
ಈ ಸಂದರ್ಭ ಸುಬ್ರಹ್ಮಣ್ಯ ಭಟ್, ದೇವಿಪ್ರಸಾದ್ ಪೂಂಜಾ, ಯೂಸುಫ್ ಕರಂದಾಡಿ, ಕಬೀರ್ ಬಾವಾ, ಇಬ್ರಾಹಿಂ ಕೈಲಾರ್ ಉಪಸ್ಥಿತರಿದ್ದರು.
0 comments:
Post a Comment