ಬಂಟ್ವಾಳ, ಆಗಸ್ಟ್ 18, 2023 (ಕರಾವಳಿ ಟೈಮ್ಸ್) : ಪಡಿತರ ಅಕ್ಕಿ ವಿತರಣೆ ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ಬಿ ಸಿ ರೋಡು ಸಮೀಪದ ಕೆ ಎಸ್ ಆರ್ ಟಿ ಸಿ ಡಿಪೋ ಎದುರುಗಡೆ ಇರುವ ಪಡಿತರ ಅಕ್ಕಿ ಸಗಟು ಗೋದಾಮಿನಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಇದರ ಮಂಗಳೂರು ಕಛೇರಿ ವ್ಯವಸ್ಥಾಪಕ ಶರತ್ ಕುಮಾರ್ ಹೊಂಡಾ ಅವರು ಶುಕ್ರವಾರ ಪರಿಶೀಲನೆ ನಡೆಸಿದಾಗ ಅಕ್ಕಿ ಕೊರತೆ ಕಂಡು ಬಂದ ಹಿನ್ನಲೆಯಲ್ಲಿ ತನಿಖೆ ನಡೆಸುವಂತೆ ಅವರು ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ಬಿ ಸಿ ರೋಡಿನ ಪಡಿತರ ಅಕ್ಕಿ ದಾಸ್ತಾನು ಗೋದಾಮುವಿನಿಂದ ಬಂಟ್ವಾಳ ನಗರಕ್ಕೆ ಪಡಿತರ ಅಕ್ಕಿ ಸರಬರಾಜು ಆಗುತ್ತದೆ. ಪಡಿತರ ವಿತರಣೆಯು ವಿಳಂಬವಾಗುತ್ತಿರುವ ಬಗ್ಗೆ ಅನುಮಾನ ಬಂದು ಜಿಲ್ಲಾ ವ್ಯವಸ್ಥಾಪಕರ ಮೌಖಿಕ ಆದೇಶದ ಮೇಲೆ ಆ 17 ರಂದು ಶರತ್ ಕುಮಾರ್ ಅವರು ದಾಸ್ತಾನು ಪರಿಶೀಲಿಸಿದ್ದಾರೆ. ಫಿಸ್ಟ್ ತಂತ್ರಾಂಶದ ಪ್ರಕಾರ ಸಗಟು ಮಳಿಗೆಯಲ್ಲಿ ಇರಬೇಕಾಗಿದ್ದ ಭೌತಿಕ ದಾಸ್ತಾನುವಿಗಿಂತ ಅಂದಾಜು 1,32,36,030/- ರೂಪಾಯಿ ಮೌಲ್ಯದ 3892 ಕ್ವಿಂಟಾಲ್ ಅಕ್ಕಿ ಕೊರತೆ ಇರುವುದು ಅನುಭಕ್ಕೆ ಬಂದಿದೆ.
ಈ ಬಗ್ಗೆ ಅವರು ಬಂಟ್ವಾಳ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಗೋದಾಮು ನಿವಾರ್ಹಕ ಕಿರಿಯ ಸಹಾಯಕ ವಿಜಯ ಎಂಬವರ ವಿರುದ್ದ ಪೊಲೀಸ್ ದೂರು ದಾಖಲಿಸಿದ್ದು, ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 84/2023 ಕಲಂ 409 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ಸಂಬಂಧ ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಜಿಲ್ಲಾ ಎಸ್ಪಿ ರಿಷ್ಯಬ್ ಅವರು ಕೂಡಾ ಅಕ್ಕಿ ಗೋದಾಮಿಗೆ ಭೇಟಿ ನೀಡಿ ಸೂಕ್ತ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಶಾಸಕ ರಾಜೇಶ್ ನಾಯಕ್ ದೂರಿನಂತೆ ಕ್ರಮ
ಬಂಟ್ವಾಳದ ಅಕ್ಕಿ ದಾಸ್ತಾನು ಕೇಂದ್ರದಲ್ಲಿ ಬಂಟ್ವಾಳ ತಾಲೂಕಿನ ಪಡಿತರ ಚೀಟಿದಾರರಿಗೆ ವಿತರಿಸಲು ಭಾರತೀಯ ಆಹಾರ ನಿಗಮದಿಂದ ವಿತರಣೆಯಾದ ಅಕ್ಕಿ ಅವ್ಯವಹಾರವಾಗಿರುವ ಬಗ್ಗೆ ಸಾರ್ವಜನಿಕ ದೂರುಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ವೈಯುಕ್ತಿಕ ಗಮನ ಹರಿಸಿ ತಕ್ಷಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಅವರು ಜಿಲ್ಲಾಧಿಕಾರಿಗೆ ಗುರುವಾರ ಪತ್ರ ಬರೆದು ಆಗ್ರಹಿಸಿದ್ದರು. ಶಾಸಕರು ಪತ್ರ ಬರೆದ ಮರುದಿನ ಅಧಿಕಾರಿಗಳು ಈ ಕ್ರಮ ಕೈಗೊಳ್ಳುತ್ತಿದ್ದಾರೆ.
0 comments:
Post a Comment