ಮಂಗಳೂರು, ಆಗಸ್ಟ್ 10, 2023 (ಕರಾವಳಿ ಟೈಮ್ಸ್) : ಕೇಂದ್ರ ಸರಕಾರದ ಜನವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ಪ್ರತಿಭಟಿಸಿ ದೇಶದ ಸ್ವಾವಲಂಬನೆ ಮತ್ತು ಭಾರತೀಯರ ಸ್ವಾತಂತ್ರ್ಯ ರಕ್ಷಣೆಗಾಗಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ದೇಶದಾದ್ಯಂತ, ಕ್ವಿಟ್ ಇಂಡಿಯಾ ದಿನವಾದ ಆಗಸ್ಟ್ 9 ರಂದು ವಿವಿಧ ಕೇಂದ್ರ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಮಂಗಳೂರಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೇರಿಂಜ ಅವರು, ಕಳೆದ 9 ವರ್ಷಗಳಿಂದ ದೇಶವನ್ನಾಳುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಸಾರ್ವಜನಿಕ ಸೊತ್ತುಗಳನ್ನು ಖಾಸಗೀಕರಣಗೊಳಿಸುತ್ತಿದ್ದಾರೆ. ವಿದೇಶಿಪರ, ಬಂಡವಾಳಶಾಹಿಪರ ನೀತಿಗಳನ್ನು ತನ್ನ ಮತ್ತು ತನ್ನ ಪಕ್ಷಕ್ಕೋಸ್ಕರ ದೇಶದಲ್ಲಿ ಜ್ಯಾರಿಗೊಳಿಸಿ ಜನಸಾಮಾನ್ಯರ, ಕಾರ್ಮಿಕರ ಹಿತವನ್ನು ಕಡೆಗಣಿಸಿ, ದೇಶದ ಸ್ವಾತಂತ್ರ್ಯವನ್ನು, ಸ್ವಾವಲಂಬನೆಯನ್ನು ವಿದೇಶಿಗರಿಗೆ ಅಡವಿಡುತ್ತಿದ್ದಾರೆ. ಭಾರತೀಯರನ್ನು ಕಡೆಗಣಿಸಿ ಸದಾ ವಿದೇಶ ಸುತ್ತುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ‘ವಿದೇಶಿ ಗುರು’ ಆಗಿದ್ದಾರೆ ಎಂದು ಆರೋಪಿಸಿದರು.
ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಮಾತನಾಡಿ, ಕನಿಷ್ಟ ಕೂಲಿ, ತುಟ್ಟಿ ಭತ್ತೆಯನ್ನು ಮಾಲಕರಿಂದ ಜ್ಯಾರಿಮಾಡಿಸಲು ಆಗದ ಸರಕಾರಗಳು ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ವಿಫಲವಾಗಿದೆ. ದೇಶದ ಐಕ್ಯತೆ, ಘನತೆಯನ್ನು ರಕ್ಷಿಸಿ ಉಳಿಸಲು ಕಾರ್ಮಿಕರಿಗೆ ಹೋರಾಟವಲ್ಲದೆ ಬೇರೆ ದಾರಿ ಇಲ್ಲ. ಕೇಂದ್ರ ಸರಕಾರ ಜ್ಯಾರಿಗೊಳಿಸಲು ಅನುಮೋದಿಸಿದ ಕೃಷಿ ಕಾಯ್ದೆಗಳನ್ನು ಹೆಮ್ಮೆಟ್ಟಿಸಿದ ರೈತರ ಚಳವಳಿ ಸರಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಎಚ್ಚರಿಸಿದರು.
ಇಂಟಕ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು ಮಾತನಾಡಿ, ಜನರ ಹೋರಾಟಗಳಿಂದ ರೂಪುಗೊಂಡ ಹಲವಾರು ಸಾರ್ವಜ£ಕ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿರುವ ಈಗಿನ ಕೇಂದ್ರ ಸರಕಾರ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಜನರೇ ಸಂವಿಧಾನ ಬದ್ಧವಾಗಿ ಚುನಾಯಿಸಿದ ಸರಕಾರವೇ ಇಂದು ಜನರ ಮೇಲೆ ಸವಾರಿ ನಡೆಸುತ್ತಿದೆ. ಸರಕಾರದ ವಿರುಧ್ಧದ ಈ ಜನ ಪ್ರತಿಭಟನೆಗೆ ಕೇಂದ್ರ ಸರಕಾರವೇ ಕಾರಣ ಎಂದು ಆರೋಪಿಸಿದರು.
ಎಐಬಿಇಎ ನೇತೃತ್ವದ ಬ್ಯಾಂಕ್ ಸಂಘಟನೆಗಳ ಮುಖಂಡ ಫಣೀಂದ್ರ ಮಾತನಾಡಿ, ಕೇಂದ್ರ ಸರಕಾರ ಜ್ಯಾರಿಗೊಳಿಸಿದ ನೋಟ್ ಬ್ಯಾನ್ ತೀರ್ಮಾನವು ಅಪ್ರಬುದ್ಧ ಹಾಗೂ ಜನರ ಮೇಲೆ ಹೇರಿಕೆಯಾಗಿತ್ತು. ನೋಟು ಬ್ಯಾನ್‍ನಿಂದ ಕಪ್ಪು ಹಣ ನಿರ್ಮೂಲನೆ, ಭಯೋತ್ಪಾದನೆ ನಿಗ್ರಹ, ಆರ್ಥಿಕತೆ ಬೆಳೆಯುತ್ತದೆ ಎಂದು ಹೇಳಿದ ಕೇಂದ್ರದ ಆಡಳಿತದಾರರು ತನ್ನ ಪೇಲವ ತೀರ್ಮಾನದಿಂದ ದೇಶದ ಆರ್ಥಿಕತೆಯನ್ನು ಹಾಳು ಮಾಡಿದರು, ದೇಶದ ಆರ್ಥಿಕತೆ ಕುಸಿಯಿತು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮುಚ್ಚಿದ್ದರಿಂದ ಉದ್ಯೋಗ ನಷ್ಟವಾಯಿತು. ದೇಶ ಕಾಯುವ ಯೋಧರ ಪರ ಎಂದು ಮಾತನಾಡುತ್ತಾ ರಕ್ಷಣಾ ಕ್ಷೇತ್ರವನ್ನು ಖಾಸಗೀಕರಿಸಲು ಹೊರಟಿರುವ ಕೇಂದ್ರ ಸರಕಾರದ ಅಧಿಕಾರದಲ್ಲಿ ಉಳಿಯಲು ಅರ್ಹವಲ್ಲ ಎಂದು ವಾಗ್ದಾಳಿ ನಡೆಸಿದರು.
ಎಐಸಿಸಿಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕೆ ಇ ಮಾತನಾಡಿ, ಕಾರ್ಮಿಕ ವರ್ಗ ನಡೆಸಿದ ಅಂತಾರಾಷ್ಟ್ರೀಯ ಹೋರಾಟದಿಂದ ಎಂಟು ಗಂಟೆ ಮಾತ್ರ ಕೆಲಸದ ಅವಧಿ ಎಂಬ ಕಾನೂನು ಜ್ಯಾರಿಯಾಯಿತು. ಆದರೆ ಇವತ್ತಿನ ಕೇಂದ್ರ ಸರಕಾರ ಈ ಅವಧಿಯನ್ನು 12 ಗಂಟೆಗಳಿಗೆ ಏರಿಸಿ ಮಾಲಕರಿಗೆ ಪೂರಕವಾದ ಕಾನೂನು ರೂಪಿಸಿತು. ಕೆಲವೊಂದು ರಾಜ್ಯಗಳು ಇದನ್ನು ವಿರೋಧಿಸಿದರೂ ಹಿಂದಿನ ಕರ್ನಾಟಕ ರಾಜ್ಯ ಸರಕಾರ ತರಾತುರಿಯಿಂದ ಜ್ಯಾರಿಗೊಳಿಸಿದೆ. ಸರಕಾರಗಳ ಈ ಕಾರ್ಮಿಕ ವಿರೋಧಿ ನೀತಿಯಿಂದ ಕಾರ್ಮಿಕರ ಸಂಖ್ಯೆ ಕಡಿಮೆಯಾಗಿ ಉದ್ಯೋಗ ನಷ್ಟವಾಗಲಿದೆ. ಸರಕಾರದ ಈ ನೀತಿಯನ್ನು ನಾವೆಲ್ಲ ವಿರೋಧಿಸಬೇಕಾಗಿದೆ ಎಂದು ಕರೆ ನೀಡಿದರು.
ಎಐಟಿಯುಸಿ ನಾಯಕರಾದ ಬಿ ಶೇಖರ್, ಎ ಪ್ರಭಾಕರ್ ರಾವ್, ವಿ ಕುಕ್ಯಾನ್, ಕರುಣಾಕರ್ ಮಾರಿಪಳ್ಳ, ಸಿಐಟಿಯು ನಾಯಕರಾದ ಬಾಲಕೃಷ್ಣ ಶೆಟ್ಟಿ, ಭಾರತಿ ಬೋಳಾರ, ಎಐಸಿಸಿಟಿಯು ಜಿಲ್ಲಾದ್ಯಕ್ಷ ರಾಮಣ್ಣ ವಿಟ್ಲ, ಜಿಲ್ಲಾ ಮುಖಂಡರಾದ ಭರತ್ ಕುಮಾರ್, ಸತೀಶ್ ಕುಮಾರ್, ದಿನೇಶ ಆಚಾರಿ ಮಾಣಿ, ಅಶ್ರಫ್ ಕೊಯಿಲ, ಇಬ್ರಾಹಿಂ ಮೈಂದಾಲ, ನಾಗೇಶ್ ಕೈರಂಗಳ, ಜಿಲಾನಿ, ಅವಿನಾಶ್, ಇಬ್ರಾಹಿಂ, ವಿಶ್ವನಾಥ್, ಅಶ್ವಿನ್ ಕುಮಾರ್ ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಪ್ರಸ್ತಾವನೆಗೈದರು. ಎಐಟಿಯುಸಿ ಜಿಲ್ಲಾ ಸಹ ಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್ ವಂದಿಸಿದರು.
0 comments:
Post a Comment