ಪುತ್ತೂರು, ಆಗಸ್ಟ್ 24, 2023 (ಕರಾವಳಿ ಟೈಮ್ಸ್) : ಪುತ್ತೂರು ನಗರದ ಮಹಿಳಾ ಪೊಲೀಸ್ ಠಾಣೆ ಸಮೀಪದಲ್ಲೇ ಯುವತಿಯನ್ನು ಯುವಕನೋರ್ವ ಇರಿದು ಕೊಂದ ಪ್ರಕರಣದ ಕಾರಣ ಬಯಲಾಗಿದ್ದು, ಈ ಬಗ್ಗೆ ಯುವತಿಯ ತಾಯಿ ಶ್ರೀಮತಿ ಸೀತಾ ಅವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ಅಳಿಕೆ ಗ್ರಾಮದ ನಿವಾಸಿ ಸೀತಾ ಅವರ ಪುತ್ರಿ ಕುಮಾರಿ ಗೌರಿ (18) ಪುತ್ತೂರಿನ ಫ್ಯಾನ್ಸಿ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಈಕೆಯನ್ನು ಆರೋಪಿ ಬಂಟ್ವಾಳ ನಿವಾಸಿ ಪದ್ಮರಾಜ್ ಎಂಬಾತ ಕಳೆದ 4 ವರ್ಷಗಳಿಂದ ಪ್ರೀತಿಸುವಂತೆ ಪೀಡಿಸುತ್ತಿದ್ದ. ಈ ಬಗ್ಗೆ ಈಗಾಗಲೇ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿದೆ. ಗುರುವಾರ (ಆ 24) ಮಧ್ಯಾಹ್ನ ಕೂಡಾ ಗೌರಿಯನ್ನು ಆರೋಪಿ ಪದ್ಮರಾಜ ಪೀಡಿಸಿದ್ದು, ಈ ಬಗ್ಗೆ ಗೌರಿಯು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲು ಹೋಗುತ್ತಿದ್ದ ವೇಳೆ ಆರೋಪಿ ಪುತ್ತೂರು ಮಹಿಳಾ ಪೊಲೀಸ್ ಠಾಣಾ ಬಳಿ ಚಾಕುವಿನಿಂದ ಕುತ್ತಿಗೆಯಿಂದ ಇರಿದು ಪರಾರಿಯಾಗಿದ್ದಾನೆ.
ಚೂರಿ ಇರಿತದಿಂದ ಗಂಭೀರವಾಗಿ ಗಾಯಗೊಂಡ ಗೌರಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಚಿಕಿತ್ಸೆಗೆ ಸ್ಪಂದಿಸದ ಆಕೆ ಸಂಜೆ ವೇಳೆಗೆ ಮೃತಪಟ್ಟಿರುತ್ತಾಳೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 85/2023 ಕಲಂ 302 ರಂತೆ ಪ್ರಕರಣ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪುತ್ತೂರು ಪೊಲೀಸರು ಆರೋಪಿ ಪದ್ಮರಾಜನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
0 comments:
Post a Comment