ಸುಳ್ಯ, ಆಗಸ್ಟ್ 13, 2023 (ಕರಾವಳಿ ಟೈಮ್ಸ್) : ಕೇರಳ ನಿವಾಸಿ ಯುವಕನೋರ್ವ ತನ್ನ ಪರಿಚಯದ ಮಡಿಕೇರಿ ನಿವಾಸಿ ಯುವತಿಯ ಕೋರಿಕೆ ಮೇರೆಗೆ ಸುಳ್ಯದಲ್ಲಿ ವಿಶ್ರಾಂತಿ ಪಡೆಯಲು ರೂಂ ವ್ಯವಸ್ಥೆ ಮಾಡಿಕೊಟ್ಟ ಕಾರಣಕ್ಕೆ ಯುವಕರ ತಂಡವೊಂದು ನೈತಿಕ ಪೊಲೀಸ್ ಗಿರಿ ನಡೆಸಿ ಯುವಕಗೆ ಹಲ್ಲೆ ನಡೆಸಿದ ಘಟನೆ ಶನಿವಾರ ರಾತ್ರಿ ಸುಳ್ಯ ಸಮೀಪದ ತೋಡಿಕಾನ ಎಂಬಲ್ಲಿ ನಡೆದಿದೆ.
ಈ ಬಗ್ಗೆ ಹಲ್ಲೆಗೊಳಗಾದ ಯುವಕ ಮೊಹಮ್ಮದ್ ಜಲೀಲ್ (39) ಅವರು ಸುಳ್ಯ ಪೊಲೀಸರಿಗೆ ದೂರು ನೀಡಿದ್ದು, ಕೇರಳ ರಾಜ್ಯದ ಮಲಪುರಂ ನಿವಾಸಿಯಾಗಿರುವ ಮೊಹಮ್ಮದ್ ಜಲೀಲ್ ಪ್ರಸ್ತುತ ಸುಳ್ಯ ತಾಲೂಕು ಅರಂತೋಡಿನಲ್ಲಿ ಕಳೆದ ಮೂರು ತಿಂಗಳಿನಿಂದ ರಬ್ಬರ್ ತೋಟವನ್ನು ಗುತ್ತಿಗೆ ಪಡೆದು ವಹಿವಾಟು ನಡೆಸುತ್ತಿದ್ದು, ಅರಂತೋಡಿನಲ್ಲೇ ವಾಸವಾಗಿದ್ದಾರೆ. ಆಗಸ್ಟ್ 12 ರ ಶನಿವಾರ ತನ್ನ ಪರಿಚಯದ ಯುವತಿಯೋರ್ವಳು ತಾನು ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ತಿದ್ದು ತನಗೆ ವಿಶ್ರಾಂತಿ ಪಡೆಯಲು ರೂಂ ಬೇಕೆಂದು ಕೇಳಿಕೊಂಡ ಹಿನ್ನಲೆಯಲ್ಲಿ ಜಲೀಲ್ ಯುವತಿಗೆ ಸುಳ್ಯದಲ್ಲಿ ರೂಂ ವ್ಯವಸ್ಥೆ ಮಾಡಿ ಬಳಿಕ ವೈಯಕ್ತಿಕ ಕೆಲಸದ ನಿಮಿತ್ತ ಸುಳ್ಯ ತಾಲೂಕು ತೋಡಿಕಾನಕ್ಕೆ ಬಂದಾಗ ಕಾರು ಮತ್ತು ಸ್ಕೂಟರ್ ಮೂಲಕ ಬಂದ 5 ಜನ ಆರೋಪಿಗಳು ಜಲೀಲ್ ಅವರ ಕಾರನ್ನು ತಡೆದು ಅವ್ಯಾಚವಾಗಿ ಬೈದು ಕೈಯಿಂದ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿ ತೆರಳಿರುತ್ತಾರೆ.
ಆರೋಪಿಗಳ ಪೈಕಿ ಮೂವರ ಹೆಸರು ಲತೀಶ್ ಗುಂಡ್ಯ, ವರ್ಷಿತ್ ಹಾಗೂ ಪುನೀತ್ ಎಂದು ಗುರುತಿಸಲಾಗಿದ್ದು, ಉಳಿದ 2 ಜನ ಆರೋಪಿಗಳ ಪರಿಚಯ ದೊರೆಯಬೇಕಾಗಿದೆ. ಜಲೀಲ್ ಅವರು ನೀಡಿದ ದೂರಿನ ಮೇರೆಗೆ ಈ ಬಗ್ಗೆ ಸುಳ್ಯ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 87/2023 ಕಲಂ 143, 147, 341, 323, 504, 506, 153(ಎ) ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. ಹಲ್ಲೆ ಆರೋಪಿಗಳ ಪೈಕಿ ಸುಳ್ಯ ಸೊಣಂಗೇರಿ ನಿವಾಸಿ ಪುನೀತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
0 comments:
Post a Comment