ಬಂಟ್ವಾಳ, ಆಗಸ್ಟ್ 27, 2023 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಸಿ ರೋಡು ಸಮೀಪದ ಶಾಂತಿಅಂಗಡಿ-ಎಲ್ ಐ ಸಿ ಬಳಿ ನಿವಾಸಿ ಮುಹಮ್ಮದ್ ಅವರ ಪುತ್ರ ಮನ್ಸೂರ್ ಯಾನೆ ಮಂಚು (32) ಅವರು ಅಲ್ಪಕಾಲದ ಅನಾರೋಗ್ಯದಿಂದ ಶನಿವಾರ ರಾತ್ರಿ ನಿಧನರಾಗಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಇವರು ಶನಿವಾರ ರಾತ್ರಿ ವೇಳೆ ನಿಧನರಾಗಿದ್ದಾರೆ. ಬಿ ಸಿ ರೋಡು ಸಹಿತ ಆಸುಪಾಸಿನ ಊರುಗಳಲ್ಲಿ ಮಂಚು ಎಂದೇ ಚಿರಪರಿಚಿತರಾಗಿದ್ದ ಇವರು ಸಮಾಜದ ಎಲ್ಲ ವರ್ಗದವರೊಂದಿಗೆ ಆತ್ಮೀಯ ಸ್ನೇಹ-ಒಡನಾಟ ಇಟ್ಟುಕೊಂಡು ಎಲ್ಲ ರೀತಿಯ ಕಾರ್ಯಕ್ರಮಗಳಲ್ಲೂ ಭಾಗವಹಿಸುವ ಮೂಲಕ ಗಮನ ಸೆಳೆಯುತ್ತಿದ್ದರು. ಅತ್ಯಂತ ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ಇವರನ್ನು ಕಳೆದ ಬಾರಿ ಸ್ನೇಹಿತರು ಸೇರಿ ಪವಿತ್ರ ಉಮ್ರಾ ಯಾತ್ರೆಯ ವ್ಯವಸ್ಥೆ ಮಾಡಿದ್ದರು. ಬಡತನದಲ್ಲಿದ್ದರೂ ಇವರ ಉತ್ತಮ ಒಡನಾಟದ ಕಾರಣದಿಂದ ಪವಿತ್ರ ಮಕ್ಕಾ ಸಂದರ್ಶನದ ಭಾಗ್ಯ ಇವರ ಪಾಲಿಗೆ ಒದಗಿಬಂದಿತ್ತು.
ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ನಾಯಕರುಗಳೊಂದಿಗೆ ಕೂಡಾ ಆತ್ಮೀಯತೆಯಿಂದ ಇದ್ದುಕೊಂಡಿದ್ದ ಮನ್ಸೂರು ಸಮಾಜಮುಖಿ ಶ್ರಮದಾನದಂತಹ ಕೆಲಸ-ಕಾರ್ಯಗಳಲ್ಲೂ ಕರೆಯದೆ ಬಂದು ಸೇರಿಕೊಳ್ಳುತ್ತಿದ್ದರು. ಬಿ ಸಿ ರೋಡಿನಲ್ಲಿ ಫೂಟ್ ವೇರ್ ಅಂಗಡಿಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಮೃತರ ದಫನ ಕಾರ್ಯವು ಭಾನುವಾರ ಬೆಳಿಗ್ಗೆ ಪರ್ಲಿಯಾ ಮಸೀದಿಯಲ್ಲಿ ನೆರವೇರಿಸಲಾಗಿದೆ.
ಮೃತರು ತಂದೆ, ತಾಯಿ, ಸಹೋದರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತಿಮ ದರ್ಶನಕ್ಕೆ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಸಹಿತ ಹಲವು ಗಣ್ಯರು ಭೇಟಿ ನೀಡಿ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.
0 comments:
Post a Comment