ಮಂಗಳೂರು, ಆಗಸ್ಟ್ 03, 2023 (ಕರಾವಳಿ ಟೈಮ್ಸ್) : ಡ್ರಗ್ಸ್ ಮುಕ್ತ ಮಂಗಳೂರನ್ನಾಗಿ ಮಾಡುವ ರಾಜ್ಯ ಗೃಹ ಸಚಿವರ ಕಲ್ಪನೆಗೆ ಪೂರಕವಾಗಿ ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಭಾರೀ ಕಾರ್ಯಚರಣೆಯಲ್ಲಿ ಮಾದಕ ವಸ್ತುವಾದ ಎಂಡಿಎಂಎ ಮಾರಾಟ ಮಾಡುತ್ತಿದ್ದ ಮೂವರು ಡ್ರಗ್ ಪೆಡ್ಲರ್ ಗಳು ಬಲೆಗೆ ಬಿದ್ದಿದ್ದಾರೆ.
ಉಳ್ಳಾಲ ತಾಲೂಕು ತಲಪಾಡಿ ಗ್ರಾಮದ ತಲಪಾಡಿ-ದೇವಿಪುರ ರಸ್ತೆಯಲ್ಲಿನ ತಚ್ಚಾಣಿ ಪರಿಸರದಲ್ಲಿ KA-50-N-8081 ನೇ ಬಿಳಿ ಬಣ್ಣದ ಮಾರುತಿ ಸ್ವಿಪ್ಟ್ ಕಾರಿನಲ್ಲಿ ಮೂವರು ಮಾದಕ ವಸ್ತುವಾದ MDMA ನ್ನು ಬೆಂಗಳೂರಿನಿಂದ ಖರೀದಿಸಿಕೊಂಡು ಬಂದು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ಈ ದಾಳಿ ಸಂಘಟಿಸಿದ್ದಾರೆ.
ದಾಳಿ ವೇಳೆ ಆರೋಪಿಗಳಾದ ಬಂಟ್ವಾಳ ತಾಲೂಕು ಸಜಿಪಮುನ್ನೂರು ಗ್ರಾಮದ ನಿವಾಸಿ, ಪ್ರಸ್ತುತ ಉಳ್ಳಾಲ-ಹಳೆಕೊಟೆಯ ಸೈಂಟ್ ಸೆಬೆಸ್ಟಿಯನ್ ಶಾಲಾ ಬಳಿ ವಾಸವಾಗಿರುವ ಮೊಹಮ್ಮದ್ ಹಫೀಝ್ ಅಲಿಯಾಸ್ ಅಪ್ಪಿ (35), ನಂದಾವರ ನಿವಾಸಿ ಅಮೀರ್ ಅಲಿಯಾಸ್ ಅಮ್ಮಿ (34) ಹಾಗೂ ನಂದಾವರ- ದಾಸರಗುಡ್ಡೆ ನಿವಾಸಿ, ಪ್ರಸ್ತುತ ಹಳೆಯಂಗಡಿ ಸಂತೆಕಟ್ಟೆ ಮಸೀದಿ ಬಳಿ ವಾಸವಾಗಿರುವ ಜಾಕೀರ್ ಹುಸೇನ್ ಅಲಿಯಾಸ್ ತಾಚೀ (28) ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರಿಂದ ಒಟ್ಟು 200 ಗ್ರಾಂ ತೂಕದ 10 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ ಮಾದಕ ವಸ್ತು, ಮಾರುತಿ ಸ್ವಿಫ್ಟ್ ಕಾರು, 70 ಸಾವಿರ ರೂಪಾಯಿ ಮೌಲ್ಯದ 3 ಮೊಬೈಲ್ ಫೋನ್ ಗಳು, ಡಿಜಿಟಲ್ ತೂಕ ಮಾಪನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 15,70,500/- ರೂಪಾಯಿ ಎಂದು ಎಂದಾಜಿಸಲಾಗಿದೆ.
ಈ ಬಗ್ಗೆ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಮಾದಕ ವಸ್ತು ಮಾರಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತಪಡಿಸಿರುವ ಪೊಲೀಸರು ಅವರ ಪತ್ತೆಗೆ ಬಲೆ ಬೀಸಿದ್ದಾರೆ.
ಬಂಧಿತರ ಪೈಕಿ ಜಾಕಿರ್ ಹುಸೇನ್ ಅಲಿಯಾಸ್ ತಾಚ್ಚಿ ಎಂಬಾತನ ವಿರುದ್ಧ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣ ಹಾಗೂ ಇತರ 3 ದರೋಡೆ ಪ್ರಕರಣಗಳು, ಬಜ್ಪೆ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ, ಮಂಗಳೂರು ದಕ್ಷಿಣ ಠಾಣೆಯಲ್ಲಿ 2 ಬೈಕ್ ಕಳವು ಪ್ರಕರಣಗಳು, ಉಡುಪಿ ಜಿಲ್ಲೆಯ ಶಿರ್ವಾ ಹಾಗೂ ಪಡುಬಿದ್ರಿ ಠಾಣೆಯಲ್ಲಿ ಕಳವು ಪ್ರಕರಣ, ಹೀಗೆ ಒಟ್ಟು 8 ಪ್ರಕರಣಗಳು ದಾಖಲಾಗಿದ್ದು, ಈತನು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಬಿಡುಗಡೆಗೊಂಡಿದ್ದು ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದಾನೆ. ಈತನ ವಿರುದ್ಧ ನ್ಯಾಯಾಲಯವು ವಾರಂಟ್ ಜ್ಯಾರಿ ಮಾಡಿದೆ. ಇನ್ನೋರ್ವ ಆರೋಪಿ ಮೊಹಮ್ಮದ್ ಹಫೀಸ್ ಎಂಬಾತನ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಮಂಗಳೂರು ಪೂರ್ವ ಠಾಣೆಯಲ್ಲಿ ಹಲ್ಲೆ, ಬೆದರಿಕೆ ಪ್ರಕರಣ, ಬಂಟ್ವಾಳ ನಗರ ಠಾಣೆಯಲ್ಲಿ ಕೊಲೆ ಪ್ರಕರಣ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿರುತ್ತದೆ.
ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಎಚ್ ಎಂ, ಪಿಎಸ್ಐಗಳಾದ ರಾಜೇಂದ್ರ ಬಿ, ಸುದೀಪ್ ಎಂ ವಿ, ಶರಣಪ್ಪ ಭಂಡಾರಿ, ನರೇಂದ್ರ ಹಾಗೂ ಸಿಸಿಬಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
0 comments:
Post a Comment