ಬಂಟ್ವಾಳ, ಆಗಸ್ಟ್ 23, 2023 (ಕರಾವಳಿ ಟೈಮ್ಸ್) : ರಸ್ತೆಯಲ್ಲಿ ನಡೆಯುತ್ತಿದ್ದ ಗಲಾಟೆ ನೋಡಲು ಬಂದ ವ್ಯಕ್ತಿಗೆ ಆರೋಪಿಗಳ ಗುಂಪು ಬೆದರಿಕೆ ಹಾಕಿದ್ದಲ್ಲದೆ ಮನೆಗೆ ಅಕ್ರಮ ಪ್ರವೇಶ ಮಾಡಿ ದಂಪತಿಗೆ ಹಲ್ಲೆ ನಡೆಸಿದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಕಾವಳಪಡೂರು ಗ್ರಾಮದ ನಿವಾಸಿ ಸುಂದರ (42) ಅವರು ಠಾಣೆಗೆ ದೂರು ನೀಡಿದ್ದು, ಸೋಮವಾರ ಸಂಜೆ ಸುಂದರ ಅವರ ಮನೆ ಬಳಿ ರಸ್ತೆಯಲ್ಲಿ ಗಲಾಟೆ ನಡೆಯುತ್ತಿರುವುದನ್ನು ಕಂಡು ಅವರ ಜಾಗಕ್ಕೆ ಬಂದು ನೋಡಿದಾಗ ಆರೋಪಿಗಳಾದ ಪ್ರವೀಣ್, ಪ್ರದೀಪ್, ಪ್ರಶಾಂತ್ ಹಾಗೂ ಮಂಜು ಎಂಬವರು ರಸ್ತೆಯಲ್ಲಿ ಅವರೊಳಗೆ ಗಲಾಟೆ ಮಾಡಿಕೊಳ್ಳುತ್ತಿದ್ದರು. ಈ ಸಂದರ್ಭ ಸುಂದರ ಅವರನ್ನು ಕಂಡು ಆರೋಪಿಗಳು ಅವ್ಯಾಚವಾಗಿ ಬೈದು ಆರೋಪಿಗಳ ಪೈಕಿ ಪ್ರವೀಣ ಮತ್ತು ಪ್ರದೀಪ ಎಂಬವರು ಸುಂದರ ಅವರನ್ನು ಓಡಿಸಿಕೊಂಡು ಹೋಗಿರುತ್ತಾರೆ. ಅಲ್ಲಿಂದ ಹೆದರಿ ಓಡಿದ ಸುಂದರ ಅವರು ತನ್ನ ಮನೆಯೊಳಗೆ ಒಳಗೆ ಹೋದಾಗ ಪ್ರವೀಣ ಮತ್ತು ಪ್ರದೀಪ್ ಅವರು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಸುಂದರ ಅವರನ್ನು ದೂಡಿ ಹಾಕಿದ್ದಲ್ಲದೆ ನಡುವೆ ಬಂದ ಅವರ ಪತ್ನಿಯನ್ನೂ ಕೂಡ ದೂಡಿ ಹಾಕಿರುತ್ತಾರೆ. ಆರೋಪಿ ಪ್ರಶಾಂತ ಮನೆಯಂಗಳಕ್ಕೆ ಬಂದು ಜೀವ ಬೆದರಿಕೆಯನ್ನೂ ಒಡ್ಡಿರುತ್ತಾನೆ ಎಂದು ಸುಂದರ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment