- ಡಿ.ಎಸ್.ಐ.ಬಿ ಪಾಣೆಮಂಗಳೂರು
ಕರಾವಳಿ ಟೈಮ್ಸ್ ಸ್ವಾತಂತ್ರ್ಯೋತ್ಸವ ವಿಶೇಷ ಲೇಖನ
ಹೆಣ್ಣಿನ ಮೇಲೆ ದೌರ್ಜನ್ಯ ಇನ್ನೂ ಕಡಿಮೆಯಾಗಿಲ್ಲ. ಸ್ವತಂತ್ರವಾಗಿ ಓಡಾಡಲು ಕೂಡ ಅವಳಿಗೆ ಭಯ. ಒಂಟಿಯಾಗಿ ಇರಲು ಕೂಡ ಅಸಾಧ್ಯವಾಗಿದೆ. ಅವಳು ಅವಳ ಸ್ವತಂತ್ರ ಕೇಳಲು ನ್ಯಾಯಲಯದ ಮೆಟ್ಟಿಲು ಏರಬೇಕು. ಆದರೂ ಅಲ್ಲಿಯೂ ಕೂಡ ಕೆಲವೊಮ್ಮೆ ನ್ಯಾಯ ವಂಚಿತಳಾಗುತ್ತಾಳೆ. ತಾಯಿಗೆ ತನ್ನ ಮಗಳನ್ನು ಒಂಟಿಯಾಗಿ ಕಳುಹಿಸಲು ಭಯ. ಎಲ್ಲಿ ಕಾಮುಕರ ಆಹಾರವಾಗುತ್ತಾಳೆ ಎಂಬುದೇ ಚಿಂತೆ. ನೆಮ್ಮದಿಯಿಂದ ವಿವಾಹ ಮಾಡಿಕೊಟ್ಟರೆ ಕೆಲವೊಂದು ಪತಿ ಕುಟುಂಬದ ಕಿರುಕುಳ ದೌರ್ಜನ್ಯ ಕಷ್ಟನೋವು ಎಲ್ಲವನ್ನೂ ಅನುಭವಿಸುತ್ತಿರುತ್ತಾಳೆ. ಸ್ವತಂತ್ರ ಭಾರತದಲ್ಲಿ ಇದ್ದರು ಅವಳು ಮಾತ್ರ ಸ್ವತಂತ್ರವಾಗಿರುವುದಿಲ್ಲ. ಹೆಣ್ಣು ಮಗು ಇಲ್ಲಿ ಸ್ವತಂತ್ರವಾಗಿಲ್ಲ ಎಂಬುದಕ್ಕೆ ಪ್ರತಿದಿನ ಕೇಳುವ ಅತ್ಯಾಚಾರಗಳ ಸುದ್ದಿಗಳೆ ಸಾಕ್ಷಿ. ನಡು ರಸ್ತೆಯಲ್ಲಿ ಅದು ಕೂಡ ಹಗಲು ಹೊತ್ತಿನಲ್ಲಿ ಸಾರ್ವಜನಿಕರ ಎದುರೇ ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡುವ ಸನ್ನಿವೇಶಗಳು ನಾವು ಇಂದು ನೋಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದರೆ ನಿಜವಾದ ಸ್ವತಂತ್ರ ಯಾವುದು? ಒಂದು ಹೆಣ್ಣು ಮಧ್ಯರಾತ್ರಿಯಲ್ಲಿ ಧೈರ್ಯದಿಂದ ಓಡಾಡಿದರೆ ಅದು ನಿಜವಾದ ಸ್ವಾತಂತ್ರ್ಯ ಎಂದು ಹೇಳಿರಬೇಕಾದರೆ ಇಂದು ಒಬ್ಬ ಪುರುಷ ನೆಮ್ಮದಿಯಿಂದ ಮದ್ಯ ರಾತ್ರಿ ಬಿಟ್ಟು ಮಧ್ಯಾಹ್ನವೆ ಓಡಾಡಲು ಭಯಪಡಬೇಕಾಗಿದೆ. ಹಲ್ಲೆ, ಕೊಲೆ, ದರೋಡೆಗಳಂತಹ ಹೀನಾಯ ಕೃತ್ಯಗಳಿಂದಾಗಿ ಜನರಿಂದು ಸಾಕಷ್ಟು ಭಯದ ವಾತವರಣದಲ್ಲಿ ಬಿದ್ದಿದ್ದಾರೆ. ಅಧಿಕಾರಿಗಳೇ ಕಾಮುಕರಾದರೆ ಇನ್ನು ಹೆಣ್ಣೊಬ್ಬಳು ನ್ಯಾಯ ನಿರೀಕ್ಷೆ ಮಾಡಲು ಹೇಗೆ ಸಾಧ್ಯ. ಅಧಿಕಾರದ ಆಸೆಗಾಗಿ ಇಲ್ಲಿ ಬಲಿಪಶು ಆಗುತ್ತಿರುವುದು ಭಾರತೀಯ ಹೆಮ್ಮೆಯ ಪ್ರಜೆಗಳು.
ಜಾತಿ-ಧರ್ಮಗಳ ಹೆಸರಿನಲ್ಲಿ ಕೋಮು ದ್ವೇಷ. ಸಣ್ಣಪುಟ್ಟ ಸಮಸ್ಯೆಗಳನ್ನು ದೇಶದಾದ್ಯಂತ ಪ್ರಸಾರ ಪಡಿಸಿದರು ಇಲ್ಲಿ ಶಿಕ್ಷೆಗೆ ಒಳಗಾಗುವುದು ಸಾಮಾನ್ಯ ಜನರು. ಜೈಲಿನಲ್ಲಿ ಕಠಿಣ ಶಿಕ್ಷೆಗೆ ಗುರಿಯಾದವರಲ್ಲಿ ಹೆಚ್ಚಿನವರು ನಿರಪರಾಧಿಗಳು. ದೇಶ ಕಾಯುವ ಸೈನಿಕನ ಮನೆಯವರಿಗೆ ಸಮಸ್ಯೆಯಾದಾಗ ತುಟಿ ಬಿಚ್ಚಿ ಮಾತನಾಡುವವರು ಇಲ್ಲದಿದ್ದರೆ ಆತ ದೇಶ ಯಾರಿಗಾಗಿ ಕಾಯಬೇಕು? ಕೊಲೆ, ದರೋಡೆ, ಅತ್ಯಾಚಾರಗಳಂತಹ ಹೀನಾಯ ಕೃತ್ಯಗಳಿಂದಾಗಿ ಪ್ರಜೆಗಳೆಲ್ಲ ತಮ್ಮ ಸ್ವತಂತ್ರವನ್ನು ಕಳೆದುಕೊಳ್ಳುತ್ತಿದ್ದಾರೆ. ಅಧಿಕಾರಿಗಳ ಇಷ್ಟದ ಪ್ರಕಾರ ಕಾನೂನುಗಳನ್ನು ಜಾರಿಗೆ ತರುತ್ತಾರೆ. ಆರೋಪಿಗಳೆಲ್ಲ ವಿಐಪಿಗಳಾಗಿ ಸ್ವತಂತ್ರವಾಗಿ ಓಡಾಡಿದರೆ, ಅಮಾಯಕರು ಮಾತ್ರ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಸರಿಯಾದ ನ್ಯಾಯವಿಲ್ಲ. ಆರೋಪಿಗಳಿಗೆ ಕಠಿಣ ಶಿಕ್ಷೆ ಇಲ್ಲ. ಒಂದೇ ಜಾತಿ ಧರ್ಮಕ್ಕೆ ಸೀಮಿತದಂತೆ ಕೆಲವೊಮ್ಮೆ ನ್ಯಾಯಗಳು ಮುಂದುವರಿಯುತ್ತಿದೆ. ಭ್ರಷ್ಟಾಚಾರ, ಕೋಮುವಾದ ಇನ್ನೂ ಕೂಡ ಮುಂದುವರಿಯುತ್ತಿದೆ. ನ್ಯಾಯದ ಪರ ಯಾರಾದರೂ ಧ್ವನಿ ಎತ್ತಿದರೆ ಅವನು ದೇಶ ದ್ರೋಹಿ ಎಂಬ ಆರೋಪ ಹೊರಬೇಕಾಗುತ್ತದೆ. ಇಲ್ಲಿ ಸ್ವತಂತ್ರವಾಗಿ ಪ್ರಜೆಗಳು ಇಲ್ಲ ಎಂಬುದು ಸಾಬೀತಾಗಿದೆ.
ನಮಗೆ ನಿಜಕ್ಕೂ ಸ್ವಾತಂತ್ರ್ಯ ದೊರೆತಿದೆಯೆ? ಭಯೋತ್ಪಾದಕರಿಂದ, ಗಲಭೆಕೋರರಿಂದ ನಮಗಿಂದು ರಸ್ತೆಗಳಲ್ಲಿ ಓಡಾಡಲೂ ಭಯವಾಗುತ್ತಿದೆ. ಎಂಥ ಸ್ವಾತಂತ್ರ್ಯ ನಮ್ಮದು? ಕಳ್ಳ, ಆರೋಪಿ, ಉಗ್ರರನ್ನು ಮಟ್ಟ ಹಾಕಲಾರದ ಸರಕಾರಗಳನ್ನು ಅನುಭವಿಸುತ್ತಿದ್ದೇವೆ ನಾವು. ನಮ್ಮದೆಂಥ ಸರ್ವತಂತ್ರ? ಸ್ವತಂತ್ರ ಪ್ರಜಾಪ್ರಭುತ್ವ? ಕೋಮು ದ್ವೇಷ, ವರ್ಗ ಶೋಷಣೆ, ಹಲವೆಡೆ ಶೋಷಣೆಯ ಮಿಥ್ಯಾಪವಾದ, ಇವುಗಳಿಂದ ಬೆಂದು ಹೋಗುತ್ತಿರುವ ನಮಗೆ ಅಸಹನೀಯವಾಗಿಸಿದ್ದೀರಲ್ಲಾ? ಇದುವೇ ನಮಗೆ ಸಿಕ್ಕಿರುವ ಸ್ವಾತಂತ್ರ್ಯ? ಇಷ್ಟಾಗಿಯೂ ನಾವು ಕುರಿಗಳಂತೆ ಈ ಖೂಳರಿಗೆ ತಲೆ ಕೊಟ್ಟುಕೊಂಡಿದ್ದೇವಲ್ಲಾ ಇದುವ ಸ್ವಾತಂತ್ರ್ಯ?
ನಮ್ಮ ಧರ್ಮಾಚರಣೆಗಾದರೂ ನಮಗಿಲ್ಲಿ ಸ್ವಾತಂತ್ರ್ಯವಿದೆಯೇ ಎಂದು ಕೇಳಿದರೆ ಅದೂ ಇಲ್ಲದಂತಾಗಿದೆ. ‘ಮೂಲಭೂತವಾದ’ ಮತ್ತು ‘ಕೋಮುವಾದ’ಗಳಿಗೆ ಕಾರಣವೇನೇ ಇರಲಿ, ಹಿನ್ನೆಲೆ ಏನೇ ಇರಲಿ, ಈ ಎರಡು ತಥಾಕಥಿತ ವಾದಗಳಿಂದಾಗಿ ನಮಗಿಂದು ಈ ದೇಶದಲ್ಲಿ ಸ್ವಧರ್ಮಾಚರಣೆಗೂ ಅನೇಕ ಅಡ್ಡಿ-ಆತಂಕಗಳು ಎದುರಾಗುತ್ತಿಲ್ಲವೆ? ನಮ್ಮ ಪಾಡಿಗೆ ನಾವು ಧರ್ಮಾಚರಣೆ ಮಾಡಿಕೊಂಡಿದ್ದುದೂ ಎಷ್ಟೋ ಸಲ ಕೋಮುವಾದವೆಂಬ ಆರೋಪಕ್ಕೆ ಗುರಿಯಾಗಲಿಲ್ಲವೆ? ಧರ್ಮಾಚರಣೆಯ ಸ್ವಾತಂತ್ರ್ಯವೂ ಇಲ್ಲದ ನಮ್ಮದು ಅದೆಂಥ ಸ್ವಾತಂತ್ರ್ಯ? ‘ಸತ್ಯಂ ವದ, ಧರ್ಮಂ ಚರ’ ಎಂಬ ಸೂಕ್ತಿಯಿದೆ. ಆದರೆ ನಮಗಿಂದು ಸತ್ಯ ಹೇಳಲು ಭಯ! ಧರ್ಮಾಚರಣೆ ಮಾಡಲು ಹಿಂದೆ ಮುಂದೆ ನೋಡಬೇಕಾದ ಪರಿಸ್ಥಿತಿ! ನಮಗಿಂದಿಲ್ಲಿ ಯಾವ ಸ್ವಾತಂತ್ರ್ಯವೂ ಇಲ್ಲ. ಸ್ವಾತಂತ್ರ್ಯವನ್ನು ಮೀರಿದ ಸ್ವೇಚ್ಛಾಚಾರ ಹೊಂದಿರುವ ಮುಷ್ಠಿ ಭರ್ತಿ ರಾಜಕಾರಣಿಗಳು, ಉನ್ನತಾಧಿಕಾರಿಗಳು ಮತ್ತು ಬಂಡವಾಳಶಾಹಿಗಳ ಮುಷ್ಠಿಯೊಳಗೆ ಸಿಕ್ಕಿ ಈ ದೇಶದ ಕೋಟ್ಯಂತರ ಶ್ರೀಸಾಮಾನ್ಯರಾದ ನಾವಿಂದು ನರಳುತ್ತಿದ್ದೇವೆ!
ಅವನು ಬಾವುಟ ಹಾರಿಸುತ್ತಾನೆಂದು ಇವನು ಕೂಡ ಒಂದು ಖರೀದಿಸಿ ಹಾರಿಸುತ್ತಿದ್ದಾನೆ ಅಷ್ಟೇ. ಅದು ಬಿಟ್ಟರೆ ಸ್ವತಂತ್ರವಾಗಿ ಹಾರಿಸುತ್ತಿಲ್ಲ. ಪ್ರತಿಯೊಬ್ಬ ಪ್ರಜೆಯು ಒಂದಲ್ಲ ಒಂದು ಕಷ್ಟ ನಷ್ಟದಲ್ಲಿ ಜೀವಿಸುತ್ತಿದ್ದಾನೆ. ಸ್ವತಂತ್ರವಾಗಿ ಇರಲು ಭಯಪಡುತ್ತಾನೆ. ದುಡಿದು ಬಂದರು ನೆಮ್ಮದಿಲ್ಲ. ಸಿಗುವ ಸಾವಿರಾರು ಸಂಬಳದಲ್ಲಿ ಹೇಗೆ ಜೀವಿಸಲಿ ಎಂಬುದು ಚಿಂತೆ. ಹೆಂಡತಿ ಮಕ್ಕಳೊಂದಿಗೆ ಪ್ರೀತಿಯಿಂದ ಜೀವಿಸಲು ಹಣದ ಕೊರತೆ ದುಬಾರಿಯಾದ ದಿನ ಬಳಕೆಯ ಬೆಲೆಗಳು. ಮಗು ತಿನ್ನುವ ಚಾಕೊಲೇಟಿಗೂ ತೆರಿಗೆ, ತಿಂದ ಆಹಾರದಿಂದ ಆರೋಗ್ಯ ಕೆಟ್ಟು ಆಸ್ಪತ್ರೆಗೆ ಹೋದರೆ ಅಲ್ಲಿಯೂ ತೆರಿಗೆ. ನೆಮ್ಮದಿಯಾಗಿ ಸ್ವತಂತ್ರವಾಗಿ ಓಡಾಡಲು ಕೂಡ ಭಯ. ಇಂತಹ ಕಷ್ಟ-ನೋವುಗಳಿಂದ ಭವ್ಯ ಭಾರತದ ಪ್ರೀತಿಯಿಂದ ಸ್ವತಂತ್ರ ದಿನವನ್ನು ಆಚರಿಸುತ್ತಾರೆ ವಿನಃ ಸ್ವತಂತ್ರವಾಗಿ ಆಚರಿಸುತ್ತಿಲ್ಲ ಎಂಬುದು ಕಹಿ ಸತ್ಯ. ದೇಶದಿಂದ ಬ್ರಿಟಿಷರು ಹೋಗಿದ್ದಾರೆ ಎಂಬ ಕಾರಣಕ್ಕೆ ಇಲ್ಲಿರುವವರಿಗೆ ಸ್ವತಂತ್ರ ಸಿಕ್ಕಿದೆ ಎಂಬುದನ್ನು ಸಾಕಷ್ಟು ಜನರು ತಿಳಿದಿದ್ದಾರೆ. ನಿಜವಾದ ಅರ್ಥದಲ್ಲಿ ಹೇಳುವುದಾದರೆ ಇಲ್ಲಿ ಬ್ರಿಟಿಷರು ಹೋಗಿದ್ದಾರೆ ಅಷ್ಟೇ. ಆದರೆ ಸರಿಯಾದ ಸ್ವತಂತ್ರ ಇನ್ನೂ ಸಿಕ್ಕಿಲ್ಲ. ಸರಿಯಾಗಿ ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವಾಗದಿದ್ದರೆ ಹೇಗೆ ಸ್ವತಂತ್ರ ಇದೆ ಎನ್ನಲು ಸಾಧ್ಯ? ಎಲ್ಲಿ ತನಕ ಅಧಿಕಾರಿಗಳ ಗುಲಾಮರಂತೆ ಪ್ರಜೆಗಳು ಜೀವಿಸುತ್ತಾರೋ, ಅಲ್ಲಿವರೆಗೆ ನಿಜವಾದ ಸ್ವತಂತ್ರ ಕನಸು ಅಷ್ಟೇ. ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಪ್ರೀತಿ, ವಿಶ್ವಾಸ, ವಾತ್ಸಲ್ಯ, ಉತ್ತಮ ಭಾಂದವ್ಯ, ಕರುಣೆ, ಮನುಷ್ಯತ್ವಗಳು ನಿರ್ಮಾಣವಾದರೆ ನಾವು ಭಾರತದಲ್ಲಿ ಸ್ವತಂತ್ರವಾಗಿ ಜೀವಿಸುವುದರಲ್ಲಿ ಸಂಶಯವಿಲ್ಲ.
ದ್ವೇಷ, ಅಸೂಯೆ, ಜಾತಿ ಭೇದ, ಕೋಮುವಾದ ಎಲ್ಲವೂ ಕೊನೆಗೊಳ್ಳಲಿ. ಇದು ಸ್ವತಂತ್ರ ಭೂಮಿ, ಸರ್ವ ಜನಾಂಗದವರ ಶಾಂತಿಯ ತೋಟವಾಗಿದೆ. ಇಲ್ಲಿ ಭ್ರಷ್ಟಾಚಾರ, ಅತ್ಯಾಚಾರ, ಕೋಮು ಗಲಭೆ, ಕೊಲೆ, ದರೋಡೆಗಳನ್ನು ಮಾಡುವವರಿಗೆ ಕಠಿಣ ಶಿಕ್ಷೆಯಾಗಲಿ. ಎಲ್ಲರಿಗೂ ಒಂದೇ ನ್ಯಾಯ, ಕಾನೂನು ಜಾರಿಯಾಗಲಿ. ಭಾರತೀಯರು ಎಲ್ಲ ಒಂದೇ ತಾಯಿ ಮಕ್ಕಳು. ನಮ್ಮ ದೇಶಕ್ಕೆ ಇರುವ ಬೆಲೆ, ಗೌರವ, ಆಚಾರ ವಿಚಾರಗಳಿಗೆ ಇರುವಷ್ಟು ಬೇರೆ ದೇಶಕ್ಕೆ ಇಲ್ಲ. ಕೆಲವೊಂದು ರಾಜಕಾರಣಿ, ಅಧಿಕಾರಿಗಳ ದುರಾಡಳಿತಕ್ಕೆ ಪ್ರಜೆಗಳು ಸ್ವತಂತ್ರ ಕಳೆದುಕೊಳ್ಳುತ್ತಿದ್ದಾರೆ. ಎಲ್ಲವೂ ಕೊನೆಗೊಳ್ಳಲಿ.. ದೇಶದ ಬಾವುಟ ಹಾರುವುದರೊಂದಿಗೆ ನಮ್ಮಲ್ಲಿ ಅಡಗಿರುವ ನಿಷ್ಕಳಂಕ ಮನೋಭಾವಗಳು ಹಾರಿ ಹೋಗಲಿ.. ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ಇಲ್ಲಿ ಜೀವಿಸುವ. ಭಾರತಕ್ಕೆ ಅನ್ಯಾಯ ಮಾಡುವವರನ್ನು ಬ್ರಿಟಿಷರನ್ನು ಓಡಿಸಿದಂತೆ ಓಡಿಸುವ.
0 comments:
Post a Comment