ಬಂಟ್ವಾಳ ತಾಲೂಕಾಡಳಿತದಿಂದ ಸ್ವಾತಂತ್ರ್ಯೋತ್ಸವ ಆಚರಣೆ
ಬಂಟ್ವಾಳ, ಆಗಸ್ಟ್ 15, 2023 (ಕರಾವಳಿ ಟೈಮ್ಸ್) : ದೇಶದ ಸ್ವಾತಂತ್ರ್ಯಕ್ಕೆ ದೀರ್ಘ ಕಾಲದ ಇತಿಹಾಸವಿದ್ದು, ಸ್ವಾತಂತ್ರ್ಯ ಗಳಿಸಿದುದರ ಹಿಂದೆ ಭಾರೀ ಪ್ರಮಾಣದ ತ್ಯಾಗ-ಬಲಿದಾನಗಳ ಇತಿಹಾಸವೇ ಇದೆ. ಹೀಗಿರುತ್ತಾ ಸರಕಾರದ ವತಿಯಿಂದ ನಡೆಯುವ ಸ್ವಾತಂತ್ರ್ಯೋತ್ಸವದಂತಹ ರಾಷ್ಟ್ರೀಯ ಹಬ್ಬಗಳ ಆಚರಣೆಗಳು ಬರೀ ಕಾಟಾಚಾರಕ್ಕೆ ಸೀಮಿತವಾಗದೆ, ಮಿನಿ ವಿಧಾನಸೌಧದ ಒಳಗೆ ನಾಲ್ಕು ಗೋಡೆಗಳ ಮಧ್ಯೆ ನಡೆಯದೆ ಅದೊಂದು ತೆರೆದ ಪ್ರದೇಶದಲ್ಲಿ ತಾಲೂಕಿನ ಎಲ್ಲ ಗ್ರಾಮಗಳ ಜನ ಸಂಭ್ರಮ-ಸಡಗರದಿಂದ ಭಾಗವಹಿಸಿ ವಿಜ್ರಂಭಣೆಯಿಂದ ಆಚರಿಸುವಂತಾಗಲು ಸಂಬಂಧಪಟ್ಟ ಅಧಿಕಾರಿಗಳು ಮುಂದಿನ ಗಣರಾಜ್ಯೋತ್ಸದಿಂದಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಬಂಟ್ವಾಳ ತಾಲೂಕಾಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಂಗಳವಾರ ಬಿ ಸಿ ರೋಡಿನ ಮಿನಿ ವಿಧಾನಸೌಧ ಸಭಾಂಗಣದ ಮುಂಭಾಗದಲ್ಲಿ ನಡೆದ ಸ್ವಾತಂತ್ರ್ತೋತ್ಸವ ಆಚರಣೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಧ್ವಜವಂದನೆ ಸ್ವೀಕರಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾರತ ದೇಶದ ಸ್ವಾವಲಂಬಿ ದೇಶವಾಗಲು ಹಳ್ಳಿಗಳು ಸ್ವಾವಲಂಬಿಗಳಾಗಬೇಕು ಎಂದರು.
ಸಮಾಜದಲ್ಲಿ ಸಾಕಷ್ಟು ಒಳ್ಳೆಯ ಕಾರ್ಯಗಳು ನಡೆಯುತ್ತಿರುತ್ತವೆ. ಸಾಕಷ್ಟು ಸಂಖ್ಯೆಯಲ್ಲಿ ಜನರೂ ಕೂಡಾ ಒಳ್ಳೆಯವರಾಗಿರುತ್ತಾರೆ. ಇದರಿಂದ ಒಳ್ಳೆಯದರ ಹೈಲೈಟ್ ಆಗಬೇಕೇ ಹೊರತು ಕೆಟ್ಟದು, ಕೆಡುಕಿನ ಬಗ್ಗೆ ವೈಭವೀಕರಣ ನಡೆಯಕೂಡದು. ಒಳ್ಳೆಯದನ್ನು ಪ್ರೋತ್ಸಾಹಿಸುವುದರ ಜೊತೆಗೆ ಒಳ್ಳೆಯ ಜನರನ್ನು ಗುರುತಿಸುವ ಕಾರ್ಯವಾಗಬೇಕು. ಹಾಗಾದಾಗ ಕೆಡುಕುಗಳು ಅದರಷ್ಟಕ್ಕೆ ನಗಣ್ಯವಾಗುತ್ತದೆ ಎಂದರು.
ಧ್ವಜಾರೋಹಣ ನೆರವೇರಿಸಿದ ತಾಲೂಕು ತಹಶೀಲ್ದಾರ್ ಎಸ್ ಬಿ ಕೂಡಲಗಿ ಮಾತನಾಡಿ 140 ಕೋಟಿಯಷ್ಟು ಬೃಹತ್ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಎಲ್ಲ ವರ್ಗದ ಜನರ ಒಗ್ಗಟ್ಟಿನಿಂದಾಗಿ ದೇಶ ಇಂದು ವಿಶ್ವದ ಅಗ್ರ ಪಂಕ್ತಿಯಲ್ಲಿ ಬಂದು ನಿಂತಿದೆ. ಪರಕೀಯರ ದಾಸ್ಯದಿಂದ ಮುಕ್ತಿ ಹೊಂದಿದ ಬಳಿಕ ದೇಶವನ್ನು ಗಡಿಯಲ್ಲಿ ಕಣ್ಣಿಗೆ ಎಣ್ಣೆ ಹಚ್ಚಿದ ರೀತಿಯಲ್ಲಿ ಕಾಯುತ್ತಿರುವ ನಮ್ಮ ಸೈನಿಕರನ್ನು ಸ್ಮರಿಸುವ ದಿನವಾಗಿ ಸ್ವಾತಂತ್ರ್ಯೋತ್ಸವ ದಿನ ಆಗಬೇಕಾಗಿದೆ ಎಂದರು.
ಮುಖ್ಯ ಭಾಷಣ ಮಾಡಿದ ತುಂಬೆ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಗಂಗಾಧರ ಆಳ್ವ ಮಾತನಾಡಿ, ವಿಶ್ವದಲ್ಲೇ ಅತ್ಯಂತ ಹೆಚ್ಚು ಯುವ ಸಂಪತ್ತು ಹೊಂದಿರುವ ಭಾರತದಲ್ಲಿ ಯುವ ಸಮೂಹವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ದೇಶವನ್ನು ಅಭಿವೃದ್ದಿ ಪಥದಲ್ಲಿ ಕೊಂಡೊಯ್ಯಬೇಕಾಗಿದೆ. ಯುವಕರ ಚಿಂತನೆಗಳು ಒಳ್ಳೆಯ ರೀತಿಯಲ್ಲಿದ್ದು, ದೇಶದ ಅಭಿವೃದ್ದಿಗೆ ಪೂರಕವಾಗಿರುತ್ತದೆ. ಅದನ್ನು ಬಳಸಿಕೊಳ್ಳುವ ರೀತಿಯಲ್ಲಿ ಬಳಸಿಕೊಂಡರೆ ಖಂಡಿತಾ ದೇಶದ ಅಭಿವೃದ್ದಿಗೆ ಕೊಡುಗೆ ಸಲ್ಲಿಕೆ ಆಗಲಿದೆ. ದೇಶದ ಪ್ರತಿಯೊಬ್ಬರಿಗೂ ಹೊಣೆಗಾರಿಕೆ ಇದೆ. ಹೊಣೆಗಾರಿಕೆ ಅರ್ಥ ಮಾಡಿಕೊಂಡು ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಬದ್ದತೆ ಪ್ರದರ್ಶಿಸಿದಾಗ ತಮ್ಮ ಉತ್ತಮ ನಡವಳಿಕೆ ಮೂಲಕ ದೇಶ ಪ್ರೇಮ, ದೇಶಾಭಿಮಾನ ಬೆಳೆಸಿಕೊಂಡಾಗ ದೇಶದ ತನ್ನಿಂತಾನೆ ಅಭಿವೃದ್ದಿ ಪಥದಲ್ಲಿ ಸಾಗಲಿದೆ ಎಂದರು.
ಇದೇ ವೇಳೆ ತೋಟಗಾರಿಕೆ ಇಲಾಖೆ ವತಿಯಿಂದ ರಾಷ್ಟ್ರೀಯ ಖಾದ್ಯ ತೈಲ-ತಾಳೆ ಬೆಳೆ ಯೋಜನೆಯಡಿ ಬೃಹತ್ ತಾಳೆ ಬೆಳೆ ನಾಟಿ ಆಂದೋಲನಕ್ಕೆ ಚಾಲನೆ ನೀಡಲಾಯಿತು.
ತಾಲೂಕು ಪಂಚಾಯತ್ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ದಿನೇಶ್, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ನೋಣಯ್ಯ, ಉಪತಹಸೀಲ್ದಾರ್ ಗಳಾದ ರಾಜೇಶ್ ನಾಯ್ಕ್, ನವೀನ್ ಬೆಂಜನಪದವು, ದಿವಾಕರ್ ಮುಗುಳಿಯ, ವಿಜಯ ವಿಕ್ರಮ್, ಕಂದಾಯ ನಿರೀಕ್ಷಕರಾದ ವಿಜಯ್ ಆರ್, ಪ್ರಶಾಂತ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಬಂಟ್ವಾಳ ಉಪನೋಂದಣಾಧಿಕಾರಿ ಕವಿತಾ, ಹಿಂದುಳಿದ ವರ್ಗಗಳ ಇಲಾಖಾಧಿಕಾರಿ ಶ್ರೀಮತಿ ಬಿಂದ್ಯಾ, ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಪೊಲೀಸ್ ಇನ್ಸ್‍ಪೆಕ್ಟರ್ ನಾಗರಾಜ್ ಎಚ್, ಎಸ್ಸೈಗಳಾದ ರಾಮಕೃಷ್ಣ, ಸಂಜೀವ, ಕಲೈಮಾರ್, ಹರೀಶ್, ಸುತೇಶ್ ಮೊದಲಾದವರು ಭಾಗವಹಿಸಿದ್ದರು. ಇದಕ್ಕೂ ಮೊದಲು ಪೊಲೀಸ್, ಗೃಹರಕ್ಷಕ ದಳ, ವಿವಿಧ ಶಾಲೆಗಳ ಎನ್ ಸಿ ಸಿ ಮೊದಲಾದ ತುಕಡಿಗಳಿಂದ ಪಥ ಸಂಚಲನ ಹಾಗೂ ಧ್ವಜ ವಂದನೆ ಸ್ವೀಕಾರ ನಡೆಯಿತು.
0 comments:
Post a Comment