ಪುತ್ತೂರು, ಆಗಸ್ಟ್ 16, 2023 (ಕರಾವಳಿ ಟೈಮ್ಸ್) : ಅಂಚೆ ಇಲಾಖೆಯ ಪುತ್ತೂರು ವಿಭಾಗದ ವತಿಯಿಂದ ದೇಶದ 77ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ನವೀನ್ ಚಂದರ್ ಧ್ವಜಾರೋಹಣ ನೆರವೇರಿಸಿದರು. ಪುತ್ತೂರು ಪ್ರಧಾನ ಅಂಚೆ ಕಛೇರಿಯ, ಕಬಕ, ದರ್ಬೆ, ನೆಹರೂ ನಗರ, ಕೋರ್ಟ್ ಹಿಲ್ ಉಪ ಅಂಚೆ ಕಛೇರಿಗಳ ಸಿಬ್ಬಂದಿಗಳು ಭಾಗವಹಿಸಿದ್ದರು.
ಇದೇ ವೇಳೆ ಪುತ್ತೂರು ವಿಭಾಗದ ಧರ್ಮಸ್ಥಳ ಉಪ ಅಂಚೆ ಕಛೇರಿಯಿಂದ ಮಹಿಳಾ ಸಮ್ಮಾನ್ ಪ್ರಮಾಣ ಪತ್ರವನ್ನು ಪಡೆದ ಐದು ತಲೆಮಾರಿನ ಮಹಿಳೆಯರಾದ ಸೀತು (ಪ್ರಾಯ 93 ವರ್ಷ), ಕಾವೇರಿ (ಪ್ರಾಯ 73 ವರ್ಷ), ನಳಿನಾಕ್ಷಿ (ಪ್ರಾಯ 48 ವರ್ಷ), ದಿವ್ಯ (ಪ್ರಾಯ 26 ವರ್ಷ) ಹಾಗೂ ಮಾನ್ವಿ (ಪ್ರಾಯ 2 ವರ್ಷ) ಅವರನ್ನು ಗೌರವಿಸಲಾಯಿತು. ಪುತ್ತೂರು ಅಂಚೆ ವಿಭಾಗದ ಮತ್ತು ಪುತ್ತೂರು ಪ್ರಧಾನ ಅಂಚೆ ಕಛೇರಿಯ ನೌಕರರಿಂದ ದೇಶ ಭಕ್ತಿಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಕಳೆದ ವರ್ಷದಿಂದ ಕೇಂದ್ರ ಸರಕಾರಿ ಕಛೇರಿಗಳಲ್ಲಿ ಭಾರತ ವಿಭಜನೆಯ ಕರಾಳ ನೆನಪಿನ ದಿನವನ್ನು ಆಗಸ್ಟ್ 14ರಂದು ಆಚರಿಸಲಾಗುತ್ತಿದ್ದು, ಈ ವರ್ಷವೂ ಪುತ್ತೂರು ಪ್ರಧಾನ ಅಂಚೆ ಕಛೇರಿಯಲ್ಲಿ ಆಚರಿಸಲಾಯಿತು. ಆ ಕರಾಳ ದಿನಗಳ ಲಭ್ಯವಿರುವ ಛಾಯಾ ಚಿತ್ರಗಳನ್ನು ಭಿತ್ತಿಯಲ್ಲಿ ಲಗತ್ತಿಸಿ ಪ್ರದರ್ಶಿಸಲಾಯಿತು.
ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಹಮ್ಮಿಕೊಂಡಂತಹ ‘ಹರ್ ಘರ್ ತಿರಂಗ’ ಅಭಿಯಾನವನ್ನು ಈ ವರ್ಷವೂ ಮುಂದುವರಿಸಲಾಯಿತು. ಆ ನಿಟ್ಟಿನಲ್ಲಿ ಭಾನುವಾರವೂ ಸಹಿತ ಪ್ರತಿ ಅಂಚೆ ಕಛೇರಿಯನ್ನು ತೆರೆದಿಟ್ಟು ರಾಷ್ಟ್ರಧ್ವಜವನ್ನು ಗ್ರಾಹಕ ಬಂಧುಗಳಿಗೆ ವಿಕ್ರಯಿಸಲಾಯಿತು. ಅಭಿಯಾನದ ಪ್ರಯುಕ್ತ ಆಗಸ್ಟ್ 14 ರಂದು ಜಾಥಾವನ್ನು ಹಮ್ಮಿಕೊಂಡು, ಆ ಮೂಲಕ ಪುತ್ತೂರು ನಗರದಲ್ಲಿ ಅಭಿಯಾನಕ್ಕೆ ಪ್ರಚಾರ ನೀಡಲಾಯಿತು.
0 comments:
Post a Comment