ಸುಳ್ಯ, ಆಗಸ್ಟ್ 31, 2023 (ಕರಾವಳಿ ಟೈಮ್ಸ್) : ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಮೋದಿ ಹೆಸರಿನಲ್ಲಿ ಹಣ ಬಂದಿದೆ ಎಂದು ವಂಚಿಸಿದ ಪ್ರತ್ಯೇಕ ಎರಡು ಪ್ರಕರಣಗಳು ವರದಿಯಾಗಿದೆ.
ಮೊದಲನೇ ಪ್ರಕರಣದಲ್ಲಿ ಸುಳ್ಯ ತಾಲೂಕು, ಕೊಡಿಯಾಲ ಗ್ರಾಮದ ನಿವಾಸಿ ರಾಧಾಕೃಷ್ಣ ಗೌಡ (67) ಎಂಬವರ ದೂರಿನಂತೆ ರಾಧಾಕೃಷ್ಣ ಅವರು ಕಳೆದ ಮೇ 20 ರಂದು ಬೆಳ್ಳಾರೆ, ಕೆಳಗಿನ ಪೇಟೆಯಲ್ಲಿರುವ ಪ್ರಯಾಣಿಕರ ತಂಗುದಾಣದಲ್ಲಿದ್ದಾಗ ಅಪರಿಚಿತ ವ್ಯಕ್ತಿಯೋರ್ವ ಬಂದು ತನ್ನನ್ನು ಬ್ಯಾಂಕ್ ಉದ್ಯೋಗಿ ಎಂಬುದಾಗಿ ಹೇಳಿ ಪರಿಚಯಿಸಿಕೊಂಡು, ಕೋವಿಡ್ ಸಾಂಕ್ರಾಮಿಕ ರೋಗದ ಕಾರಣಕ್ಕೆ ಪ್ರಧಾನ ಮಂತ್ರಿಯವರ ಪರಿಹಾರ ನಿಧಿಯಿಂದ ಕೆಲವು ಆಯ್ದ ವ್ಯಕ್ತಿಗಳಿಗೆ 1 ಲಕ್ಷದ 7 ಸಾವಿರ ರೂಪಾಯಿ ಬಂದಿರುತ್ತದೆ. ಈ ಹಣವನ್ನು ಪಡೆಯಲು 7 ಸಾವಿರ ನಗದು ಹಣ ಕೊಡಿ ಎಂಬುದಾಗಿ ಕೇಳಿದ್ದಾರೆ. ಈ ಸಂದರ್ಭ ರಾಧಾಕೃಷ್ಣ ಅವರಲ್ಲಿ ಹಣವಿಲ್ಲದಿದ್ದರಿಂದ ಅವರಲ್ಲಿದ್ದ ಅಂದಾಜು ಸುಮಾರು ಐದೂವರೆ ಗ್ರಾಂ ತೂಕದ ಚಿನ್ನದ ಉಂಗುರವನ್ನು ನೀಡಿರುತ್ತಾರೆ. ಉಂಗುರ ಪಡೆದುಕೊಂಡ ಆರೋಪಿ ವಂಚಿಸಿ ಪರಾರಿಯಾಗಿರುತ್ತಾನೆ ಎಂದು ನೀಡಲಾದ ದೂರಿನಂತೆ ಬೆಳ್ಳಾರೆ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 57/2023 ಕಲಂ 420 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಕಡಬ ತಾಲೂಕು, ಕುದ್ಮಾರು ಗ್ರಾಮದ ನಿವಾಸಿ ಶ್ರೀಮತಿ ಲೀಲಾವತಿ (55) ಅವರ ದೂರಿನಂತೆ ಆಗಸ್ಟ್ 17 ರಂದು ಬೆಳಿಗ್ಗೆ ಲೀಲಾವತಿ ತಮ್ಮ ಮನೆಯಲ್ಲಿದ್ದಾಗ ಅಂದಾಜು 45 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬ ಬಂದು ತಾನು ಬ್ಯಾಂಕ್ ಉದ್ಯೋಗಿಯೆಂದು ತನ್ನನ್ನು ಪರಿಚಯಿಸಿಕೊಂಡು, ಲೀಲಾವತಿ ಅವರ ಬ್ಯಾಂಕ್ ಖಾತೆಗೆ ಪ್ರಧಾನಮಂತ್ರಿಗಳ ಯೋಜನೆಯಿಂದ 1 ಲಕ್ಷ ರೂಪಾಯಿ ಹಣ ಬಂದಿದ್ದು, ಹಣವನ್ನು ಪಡೆಯಲು 31 ಸಾವಿರ ರೂಪಾಯಿ ಡೆಪಾಸಿಟ್ ಮಾಡಬೇಕು ಎಂದು ತಿಳಿಸಿ 31 ಸಾವಿರ ರೂಪಾಯಿ ಪಡೆದು ವಂಚಿಸಿರುತ್ತಾನೆ ಎಂದು ನೀಡಲಾದ ದೂರಿನ ಮೇರೆಗೆ ಬೆಳ್ಳಾರೆ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 58/2023 ಕಲಂ 420 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment