-ಡಿ.ಎಸ್.ಐ.ಬಿ ಪಾಣೆಮಂಗಳೂರು
ಇಂದಿನ ನಾಗರಿಕ ಜೀವನ ಶೈಲಿಯಲ್ಲಿ ಮೋಜು, ಮಸ್ತಿ, ತಡ ರಾತ್ರಿಯ ಪಾರ್ಟಿ ಇತ್ಯಾದಿಗಳು ಮಾಮೂಲಿಯಾಗಿವೆ. ಈ ಹಂತದಲ್ಲಿ ಹದಿ ಹರೆಯದ ಯುವ ಜನತೆ ದಾರಿ ತಪ್ಪುವುದು ಸಾಮಾನ್ಯ. ಈ ದಿಸೆಯಲ್ಲಿ ತಂದೆ-ತಾಯಂದಿರ ಆಸರೆ, ಮಾರ್ಗದರ್ಶನ ಅತೀ ಅಗತ್ಯ. ಹದಿ ಹರೆಯದಲ್ಲಿ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯದಿದ್ದಲ್ಲಿ ಅನಾಹುತವಾಗುವ ಸಾಧ್ಯತೆಯಿದೆ. ಇಂದಿನ ಜೀವನ ಶೈಲಿ, ಅತಿಯಾದ ಕೆಲಸದ ಒತ್ತಡ, ಸಂಬಂಧಗಳಲ್ಲಿನ ಭಾವನಾತ್ಮಕತೆಯ ಕೊರತೆ, ದಿನ ನಿತ್ಯದ ಜೀವನದಲ್ಲಿನ ಜಂಜಾಟಗಳು, ಯಾಂತ್ರೀಕೃತ ಬದುಕಿನ ನೋವು ಮತ್ತು ಸಂಕಟಗಳು, ದಿನನಿತ್ಯದ ವ್ಯವಹಾರದಲ್ಲಿನ ಆರ್ಥಿಕ ಏರು ಪೇರು, ಇವೆಲ್ಲವೂ ಮೇಳೈಸಿ ನಮ್ಮ ಮನಸ್ಸು ಮತ್ತು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ, ಮನುಷ್ಯ ಮಾನಸಿಕ ಖಿನ್ನತೆಗೆ ಬಲಿಯಾಗುತ್ತಾನೆ. ಇತ್ತೀಚಿನ ದಿನಗಳಲ್ಲಿ ಮಾನಸಿಕ ಖಿನ್ನತೆಗೆ ಬಲಿಯಾಗುತ್ತಿರುವವರ ಸಂಖ್ಯೆ ಬಹಳವಾಗಿದ್ದು, ಅದರಲ್ಲೂ ವಿಶೇಷವಾಗಿ ಇಂದು ನಮ್ಮ ಯುವ ಜನತೆ ಹೆಚ್ಚಿನ ಪ್ರಮಾಣದಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ ಮಾದಕ ದ್ರವ್ಯಗಳ ದುಶ್ಚಟಗಳಿಗೆ ಬಲಿಯಾಗುವುದು ನಿಜಕ್ಕೂ ವಿಪರ್ಯಾಸ ಮತ್ತು ನಾಗರಿಕ ಜಗತ್ತಿನ ದುರಂತವೇ ಸರಿ. ಈ ದಿಸೆಯಲ್ಲಿ ಹಿರಿಯರೆಲ್ಲಾ ಸೇರಿ ಹದಿಹರೆಯದ ಚಂಚಲ ಮನಸ್ಸಿನ ಯುವ ಜನತೆಗೆ ಹೆಚ್ಚಿನ ಆತ್ಮವಿಶ್ವಾಸ ತುಂಬಬೇಕು. ಮತ್ತು ಒತ್ತಡ ನಿರ್ವಹಿಸಲು ಸಹಕರಿಸಬೇಕು ಮತ್ತು ಮಾದಕ ವಸ್ತುಗಳ ಮೊರೆ ಹೋಗದಂತೆ ಸರಿಯಾದ ಮಾರ್ಗದರ್ಶನ ನೀಡಬೇಕು. ಹಾಗಾದರೆ ಮಾತ್ರ ಯುವ ಸಮೂಹವನ್ನು ಸರಿ ದಾರಿಗೆ ತರಲು ಸಾಧ್ಯ.
ಮಾದಕ ದ್ರವ್ಯ ಬಳಕೆಯ ವಿರುದ್ಧ ಹೋರಾಡುವುದು ಊರಿನ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಅಮಲು ಪದಾರ್ಥ ಸೇವನೆ ಎಲ್ಲಾ ಕೆಡುಕುಗಳಿಗೂ ಪ್ರೇರೇಪಿಸುತ್ತದೆ. ಇಂದು ನಾವು ನಮ್ಮ ದೇಶದಲ್ಲಿ ಕಾಣುತ್ತಿರುವ ಮುಖ್ಯವಾಗಿ ನಮ್ಮ ಸುತ್ತ ಮುತ್ತಲಿನಲ್ಲಿ, ಗಲ್ಲಿ ಗಲ್ಲಿಯಲ್ಲೂ ಹೆಚ್ಚುತ್ತಿರುವ ಅಪರಾಧಗಳಿಗೆ ಮುಖ್ಯ ಕಾರಣವೂ ಇದಾಗಿದೆ. ಪಾಥಮಿಕ ಶಾಲೆಯಿಂದ ಆರಂಭಗೊಂಡು, ಪದವಿ ತನಕದ ಶಾಲಾ-ಕಾಲೇಜು ಕ್ಯಾಂಪಸ್‍ಗಳಲ್ಲಿ, ಊರಿನ ಹಳ್ಳಿ-ಗಲ್ಲಿಗಳಲ್ಲಿ ಮಾದಕ ವಸ್ತುಗಳಾದ ಗಾಂಜಾ, ಡ್ರಗ್ಸ್ ರಹಸ್ಯವಾಗಿ ಮಾರಾಟವಾಗುತ್ತಿರುವುದು ಸಾಕಷ್ಟು ಪ್ರಕರಣಗಳು ಕೇಳಿ ಬರುತ್ತಿವೆ. ಸಾಕಷ್ಟು ಹದಿಹರಿಯದ ಮಕ್ಕಳು ಇದರ ಛಟಕ್ಕೆ ಬಿದ್ದಿದ್ದಾರೆ ಎಂಬ ಕಹಿ ಸತ್ಯ. ನಮ್ಮ ಮಕ್ಕಳು, ಯುವಕರು ಆಮೂಲ್ಯವಾದ ಬುದ್ಧಿ, ಆರೋಗ್ಯ, ಸಾಮರ್ಥ್ಯ ಶಕ್ತಿಯನ್ನು ಈ ಮೂಲಕ ಕಳೆದುಕೊಳ್ಳುತ್ತಿದ್ದಾರೆ. ಇದರ ಬಗ್ಗೆ ರಕ್ಷಕರಾದ ತಂದೆ-ತಾಯಿಗಳು ಎಚ್ಚರಿಕೆ ವಹಿಸಬೇಕು.
ಇಂದು ನಡೆಯುವ ಹೆಚ್ಚಿನ ಕುಟುಂಬ ಕಲಹ, ವೈಯಕ್ತಿಕ ಕಲಹ ದಾಂಪತ್ಯ ಜೀವನದೆಡೆಯಲ್ಲಿ ಬಿಕ್ಕಟ್ಟಿನ ಸಮಸ್ಯೆ, ಕಳ್ಳತನ, ವಂಚನೆ ಘರ್ಷಣೆ, ಇದೆಲ್ಲದರ ಮೂಲ ಅಮಲು ಪದಾರ್ಥಗಳ ಸೇವನೆಯಾಗಿದೆ. ಅಮಲು ಪದಾರ್ಥದಿಂದ ಉಂಟಾಗುವ ಪರಿಣಾಮಗಳನ್ನು ನೀವು ಈಗ ದಿನನಿತ್ಯ ಕಾಣುತ್ತಿರಬಹುದು. ಅಮಲಿಗಾಗಿ ಅಥವಾ ಅಮಲಾಗಿ ತನ್ನನ್ನು ಸಾಕಿ ಸಲಹಿದ ವೃದ್ಧ ಮಾತಾಪಿತರನ್ನು ಕೊಲ್ಲುವುದನ್ನು, ತನ್ನವರೆಂದು ಅವರಲ್ಲಿ ಆಶಯ ಹಾಗೂ ರಕ್ಷಣೆ ಬಯಸುವ ಆತ್ಮ ಬಂಧುಗಳನ್ನು ಅತ್ಯಾಚಾರವೆಸಗುವುದನ್ನು ನಾವು ಮಾಧ್ಯಮಗಳಲ್ಲಿ ಕಾಣುತ್ತಿದ್ದೇವೆ. ರಕ್ಷಕರು ಭಿಕ್ಷಕರಾಗಲು, ಅಪ್ಪಿಕೊಳ್ಳಬೇಕಿದ್ದವರನ್ನು ಕೊಂದು ತಪ್ಪಿಸಿಕೊಳ್ಳಬೇಕಿದ್ದರೆ ಅದರ ಪರಿಣಾಮವೇನೆಂದು ನೀವೇ ತಿಳಿಯಿರಿ, ಅಮಲು ಪದಾರ್ಥ ಒಂದು ನಿಧಾನ ವಿಷ. ಇದು ಮೆಲ್ಲಗೇ ನಮ್ಮ ನರ, ಹೃದಯ, ಶ್ವಾಸಕೋಶ ಹಾಗೂ ಲಿವರ್ ಗಳನ್ನು ವಿಫಲಗೊಳಿಸುತ್ತದೆ. ನಂತರ ನಾವು ದುಡಿದು ಸಾಕಬೇಕಾದ ನಮ್ಮ ತಂದೆ-ತಾಯಿಗೆ ನಾವೇ ಹೊರೆಯಾಗಬೇಕಾಗುತ್ತದೆ. ಇದರಿಂದ ಕೇವಲ ಒಬ್ಬ ಅಮಲು ಪದಾರ್ಥ ಸೇವನೆ ಮಾಡುವವನ ಜೀವನ ಮಾತ್ರವಲ್ಲ ಆತನ ಕುಟುಂಬ, ಸ್ನೇಹಿತರೆಲ್ಲ ನಾಶವಾಗುತ್ತಾರೆ.
ಮೊಟ್ಟ ಮೊದಲಿಗೆ ತಂದೆಯಾದವನು ಮೊದಲು ಧೂಮಪಾನ ಸೇದುವುದು, ಗುಟ್ಕಾ ಪಾನ್-ಮಸಾಲೆಗಳನ್ನು ತಿನ್ನುವುದು ಕಡ್ಡಾಯವಾಗಿ ನಿಲ್ಲಿಸಬೇಕು. ಧೂಮಪಾನಗಳು ಸಾಮಾನ್ಯವಾಗಿದ್ದರು ಇದನ್ನು ಕಂಡ ಮಕ್ಕಳು ಸ್ವಲ್ಪ ಮಟ್ಟಿಗೆ ಪ್ರಯತ್ನಿಸುತ್ತಾರೆ. ಸಣ್ಣಪುಟ್ಟದಿಂದ ಆರಂಭಗೊಂಡು ಕೊನೆಗೆ ಮಧ್ಯಪಾನ, ಅಮಲು ಪಧಾರ್ಥಗಳ ದಾಸನಾಗಿ ಜೀವಕ್ಕೆ ಕೊನೆ ದಿನ ನೀಡುತ್ತಾರೆ. ಇಂತಹವರಿಂದ ಆತನ ಮನೆಯ ಅಥವಾ ಊರಿನ ಹೆಣ್ಣು ಮಕ್ಕಳಿಗೆ ವರನ್ವೇಷಣೆ ನಡೆಸುವಾಗ ಇಂತಹವರಿಂದ ಅದೆಷ್ಟೊ ಮಂದಿಯ ಜೀವನ ನಾಶವಾಗುತ್ತಿದೆ. ಹೆಣ್ಣಿಗೆ ಅಥವಾ ಗಂಡಿಗೆ ವರ-ವಧು ಅನ್ವೇಷಣೆ ನಡೆಸುವಾಗ ಊರಿನ ಪರಿಸ್ಥಿತಿ, ಕುಟುಂಬ ಹಿನ್ನಲೆ, ಮನೆಯ ವಾತಾವರಣ ಎಲ್ಲವೂ ಕೇಳಿ ತಿಳಿಯುತ್ತಿದ್ದಾರೆ. ಯಾವುದೇ ಕಾರಣಕ್ಕೂ ಯಾವ ಹೆಣ್ಣು ಮಕ್ಕಳಿಗೆ ಕಂಟಕವಾಗಬಾರದು. ಇಂದಿನ ಮಕ್ಕಳೇ ಮುಂದಿನ ಜನಾಂಗ - ಅಮೂಲ್ಯವಾದ ಬುದ್ದಿಯನ್ನು ನಾಶಪಡಿಸಿ ನಶೆ ಏರಿಸಿಕೊಂಡರೆ ಮನುಷ್ಯನು ಪ್ರಾಣಿಗಿಂತಲೂ ಕೀಳಾಗುತ್ತಾನೆ. ಸ್ವತಃ ಬುದ್ದಿ ಉಪಯೋಗಿಸಿ ಇಂತಹ ನೀಚತನಗಳಿಂದ ಹೊರಬಂದು ಎಲ್ಲರೊಂದಿಗೆ ಉತ್ತಮ ವ್ಯಕ್ತಿಯಾಗಿ ಜೀವಿಸಲು ಪ್ರತಿಯೊಂದು ದಾರಿ ತಪ್ಪಿದ ಮಕ್ಕಳು ಬದಲಾಗಬೇಕು. ನಮ್ಮ ಯುವಕರ ಬಗ್ಗೆ, ಮಕ್ಕಳ ಬಗ್ಗೆ ಸದಾ ಸಮಯ ನಿಗಾ ವಹಿಸಬೇಕು. ಕೈ ತಪ್ಪಿಹೋದರೆ ಚಿಂತಿಸಿ ಫಲವಿಲ್ಲ. ಜೀವನದಲ್ಲಿ ಸಾಕಷ್ಟು ಸಮಸ್ಯೆಗಳಿದ್ದಾಗ ಇಂತಹ ನೀಚ ಕೃತ್ಯಗಳಿಗೆ ಕೈ ಹಾಕುವುದು ಸಹಜ. ಸಮಸ್ಯೆಗಳು ಎದುರಾದಾಗ ಮನೆಯಲ್ಲಿ ಅಥವಾ ಊರಿನ ನಾಗರೀಕರಾಗಲಿ ತಿಳಿಸಿದಾಗ ಖಂಡಿತ ಒಂದು ಉತ್ತಮ ದಾರಿಯಲ್ಲಿ ನಡೆಯಲು ಸಹಾಯ ಮಾಡುತ್ತಾರೆ.
ಮಾದಕ ವಸ್ತು ಚಟಕ್ಕೆ ಬೀಳದಂತೆ ತಡೆಗಟ್ಟುವುದು ಹೇಗೆ?
ಹದಿಹರೆಯದಲ್ಲಿ ಬೆಳೆಯುವ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಅತಿಯಾದ ಒತ್ತಡ ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳನ್ನು ಅತಿಯಾದ ಮುದ್ದಿನಿಂದ ಬೆಳೆಸಬಾರದು. ನಮ್ಮ ನಿರೀಕ್ಷೆಗಳಿಗೆ ಕಡಿವಾಣ ಹಾಕಿ ಮಕ್ಕಳ ಮೇಲೆ ವಿಪರೀತ ಒತ್ತಡ ಬೀಳದಂತೆ ನೋಡಿಕೊಳ್ಳಬೇಕು.
ಹದಿಹರೆಯದ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು. ಅನಗತ್ಯವಾಗಿ ಅವರಿಗೆ ಬೈದು, ಹೊಡೆದು, ಬುದ್ಧಿ ಹೇಳುವುದನ್ನು ಬಿಟ್ಟು, ಆಪ್ತ ಮಿತ್ರರಂತೆ ಅವರ ಕಷ್ಟ-ಸುಖಗಳನ್ನು ವಿಚಾರಿಸುತ್ತಾ ಅವರಿಗೆ ಸೂಕ್ತ ಸಾಂತ್ವನ ಕೊಡಬೇಕು. ಇದು ತಂದೆ ತಾಯಿಂದಿರ ಆದ್ಯ ಧರ್ಮ. ಮಕ್ಕಳನ್ನು ಅತಿಯಾಗಿ ಮುದ್ದುಮಾಡಿ, ಕೈತುಂಬಾ ಹಣ ನೀಡಿ, ಕೇಳಿದ್ದೆಲ್ಲಾ ನೀಡಿದ್ದಲ್ಲಿ ದಾರಿ ತಪ್ಪುವ ಎಲ್ಲಾ ಸಾಧ್ಯತೆ ಇರುತ್ತದೆ. ಮಾಹಿತಿ ತಂತ್ರಜ್ಞಾನ, ಅಂತರ್ಜಾಲದ ದುರ್ಬಳಕೆಯಿಂದ, ಹದಿಹರೆಯದ ಮಕ್ಕಳು ಬಹುಬೇಗ ದಾರಿ ತಪ್ಪುವ ಸಾಧ್ಯತೆ ಇರುತ್ತದೆ. ಮಕ್ಕಳ ಮೇಲೆ ಅತಿಯಾದ ನಿರೀಕ್ಷೆಗಳನ್ನು ಹೇರಿ, ಒತ್ತಡದ ಸನ್ನಿವೇಶಗಳನ್ನು ಮಾಡಿಕೊಡಬಾರದು. ತಮ್ಮ ಮಕ್ಕಳ ಸಾಮರ್ಥ್ಯ ಮತ್ತು ಬುದ್ಧಿವಂತಿಕೆಗಳ ಅರಿವು ಹೆತ್ತವರಿಗೆ ಇರಬೇಕು. ಅವರ ಸಾಮರ್ಥ್ಯ ಮತ್ತು ಬುದ್ಧಿಶಕ್ತಿಗೆ ಮೀರಿದ ಗುರಿಗಳನ್ನು ಸಾಧಿಸುವಂತೆ ಇವರಿಗೆ ಒತ್ತಡ ತಂದಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. ತಾವು ಸಾಧಿಸಲಾಗದ ಗುರಿಗಳನ್ನು ತಮ್ಮ ಮಕ್ಕಳಾದರೂ ಸಾಧಿಸಲಿ ಎಂಬ ಹುಂಬತನಕ್ಕೆ ಪ್ರಯತ್ನಿಸಲೇಬಾರದು.
ಮಕ್ಕಳನ್ನು ಪ್ರೀತಿಸಿ ಆದರೆ ಅತಿಯಾಗಿ ಪ್ರೀತಿಸಿ ನಿಮ್ಮ ಕೊನೆಯುಸಿರೆಳೆಯಲು ಅವರು ಕಾರಣವಾಗದಂತೆ ಎಚ್ಚರವಹಿಸಿ. ಇಂದು ಇಂತಹ ಸನ್ನೀವೇಶಗಳಿಂದ ಸರಿದಾರಿಗೆ ತರಲು ಸಾಕಷ್ಟು ಸಂಘ-ಸಂಸ್ಥೆಗಳು ಪ್ರಯತ್ನಿಸುತ್ತಿದೆ. ಜೊತೆಗೆ ಮಸೀದಿ, ದೇವಸ್ಥಾನ, ಚರ್ಚ್ ಗಳಲ್ಲಿ ಕಡ್ಡಾಯವಾಗಿ ಎಚ್ಚರಿಕೆಯ ಸಂದೇಶಗಳನ್ನು ಕೊಟ್ಟು ದಾರಿ ತಪ್ಪುತ್ತಿರುವವರು ಸರಿದಾರಿಗೆ ತರುವ ಪ್ರಯತ್ನ ಎಲ್ಲಾ ಮೂಲೆ ಮೂಲೆಗಳಿಂದ ಶುರುವಾಗಲಿ, ಪ್ರತಿಯೊಂದು ನಾಡು ಸುಂದರವಾಗಿ ಸರ್ವ ಜನಾಂಗದವರು ಉತ್ತಮ ಉಸಿರಿನೊಂದಿಗೆ ಜೀವಿಸುವಂತಾಗಲಿ..
0 comments:
Post a Comment