ಬೆಂಗಳೂರು, ಆಗಸ್ಟ್ 31, 2023 (ಕರಾವಳಿ ಟೈಮ್ಸ್) : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರವೀಂದ್ರ ಕಲಾ ಕ್ಷೇತ್ರದಲ್ಲಿ ಗುರುವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ದೇವರನ್ನು ಮುಂದಿಟ್ಟು ಜಾತಿ-ಧರ್ಮದ ಸಂಘರ್ಷ ಸೃಷ್ಟಿಸುವುದು ದೇವರಿಗೆ ಮಾಡುವ ಅವಮಾನ. ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಜಾತಿ, ಧರ್ಮಗಳ ನಡುವೆ ಸಂಘರ್ಷ ಸೃಷ್ಟಿಸುವ ಶಕ್ತಿಗಳು ನಾರಾಯಣ ಗುರುಗಳ ಅವಧಿಯಲ್ಲೂ ಇದ್ದವು, ಈಗಲೂ ಇವೆ. ನಾರಾಯಣ ಗುರುಗಳು ಸಂಘರ್ಷಕ್ಕೆ ಕಾರಣ ಆಗದಂತೆ ಸಮಾಜದಲ್ಲಿ ವ್ಯಾಪಕ ಬದಲಾವಣೆ ತಂದರು ಎಂದರು.
ದೇವರ ದೃಷ್ಟಿಯಲ್ಲಿ ಎಲ್ಲರೂ ಒಂದೆ. ಬಟ್ಟೆ ಬಿಚ್ಚಿ ದೇವಾಲಯಕ್ಕೆ ಬನ್ನಿ ಎನ್ನುವುದು ದೇವರ ದೃಷ್ಟಿಯಲ್ಲಿ ಅಮಾನವೀಯ. ದೇವರನ್ನು ಮುಂದಿಟ್ಟುಕೊಂಡು ತಾರತಮ್ಯ ಆಚರಿಸುವುದು ದೇವರಿಗೆ ಮಾಡುವ ಅವಮಾನ. ದೇವರನ್ನೇ ಮುಂದಿಟ್ಟುಕೊಂಡು ಜಾತಿ, ಧರ್ಮ ಸಂಘರ್ಷ ಸೃಷ್ಟಿಸುವ ವಿಕೃತಿಯನ್ನು ಈಗಲೂ ಆಚರಿಸಲಾಗುತ್ತಿದೆ. ಈ ತಾರತಮ್ಯಕ್ಕೆ ನಾರಾಯಣ ಗುರುಗಳು ಭಿನ್ನವಾದ ಆಚರಣೆ ಕಂಡುಕೊಂಡರು. ನಿಮಗೆ ಪ್ರವೇಶವಿಲ್ಲದ ದೇವಸ್ಥಾನಗಳಿಗೆ ಹೋಗಲೇಬೇಡಿ. ನೀವೇ ನಿಮ್ಮ ದೇವರುಗಳಿಗೆ ದೇವಸ್ಥಾನ ಕಟ್ಟಿ ಪೂಜೆ ಮಾಡಿ ಎಂದರು. ಈ ಸಮಾಜ ಸುಧಾರಣೆಯ ಕ್ರಾಂತಿಕಾರಕ ಧಾರ್ಮಿಕ ಚಳವಳಿ ಪರಿಣಾಮವಾಗಿ ಕೇರಳದಲ್ಲಿ 60 ದೇವಸ್ಥಾನಗಳನ್ನು ನಿರ್ಮಿಸಿದರು. ಉಳಿದ ದೇವಸ್ಥಾನಗಳಿಗೆ ಪ್ರವೇಶ ಇಲ್ಲದ ಶೂದ್ರ ಮತ್ತು ದಲಿತ ಸಮುದಾಯವನ್ನು ತಾವೇ ಕಟ್ಟಿಸಿದ ದೇವಸ್ಥಾನಗಳಿಗೆ ಪ್ರವೇಶಿಸುವಂತೆ ಕ್ರಾಂತಿ ಮಾಡಿದರು ಎಂದ ಸಿಎಂ ಸಿದ್ದರಾಮಯ್ಯ ವಿದ್ಯೆ ಕಲಿತು ಸ್ವತಂತ್ರರಾಗಿ, ಸಂಘಟಿತರಾಗಿ, ಬಲಯುತರಾಗಿ ಎನ್ನುವುದು ನಾರಾಯಣ ಗುರುಗಳು ಶೂದ್ರ-ದಲಿತ ಸಮುದಾಯಕ್ಕೆ ನೀಡಿದ ಅತ್ಯುನ್ನತ ಧ್ಯೇಯ.
ನಾರಾಯಣಗುರುಗಳು ಒಂದು ಜಾತಿ, ಧರ್ಮಕ್ಕೆ ಸೇರಿದವರಲ್ಲ. ಅವರು ಜಾತಿ-ಧರ್ಮದ ಎಲ್ಲೆ ಮೀರಿದ ವಿಶ್ವಮಾನವ. ಹೀಗಾಗಿ ವಿಶ್ವ ಮಾನವ ನಾರಾಯಣ ಗುರುಗಳ ಜಯಂತಿಯನ್ನು ಸರಕಾರವೇ ಆಚರಿಸಬೇಕು ಎಂದು ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆಗೆ ಆದೇಶ ಮಾಡಿದೆ ಎಂದರು.
ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ವಿಖ್ಯಾತಾನಂದ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಸಚಿವ ಮಧು ಬಂಗಾರಪ್ಪ, ಶಾಸಕರಾದ ಗೋಪಾಲಕೃಷ್ಣ ಬೇಳೂರು, ಎಚ್.ಆರ್. ಗವಿಯಪ್ಪ, ಆರ್ಯ ಈಡಿಗ ಸಮಾಜದ ಅಧ್ಯಕ್ಷ ಡಾ. ಎಂ. ತಿಮ್ಮೇಗೌಡ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment