ಬಂಟ್ವಾಳ, ಆಗಸ್ಟ್ 21, 2023 (ಕರಾವಳಿ ಟೈಮ್ಸ್) : ತಾಯಂದಿರು ಗರ್ಭಾವಸ್ಥೆಯಲ್ಲಿಯೇ ಸೂಕ್ತ ಆಧ್ಯಾತ್ಮಿಕ ಸಾಧನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಜನಿಸಲಿರುವ ತಮ್ಮ ಮಕ್ಕಳಿಗೆ ಶ್ರೇಷ್ಠ ಸಂಸ್ಕಾರಗಳ ಬೀಜವನ್ನು ಬಿತ್ತಲು ಸಾಧ್ಯ ಹಾಗೂ ಸುಖ ಪ್ರಸವವೂ ಕೂಡ ಸುಲಭ ಸಾಧ್ಯ. ತನ್ಮೂಲಕ ಹುಟ್ಟುವ ಮಕ್ಕಳು ಆರೋಗ್ಯವಂತರೂ, ದೃಢ ಮನಸ್ಕರೂ ಆಗಿ ಕುಟುಂಬಕ್ಕೆ, ಸಮಾಜಕ್ಕೆ, ದೇಶಕ್ಕೇ ಕೊಡುಗೆಯಾಗಬಲ್ಲರು ಎಂದು ಸರ್ವ ಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನದ ಮುಖ್ಯಸ್ಥ ಡಾ ಎ ವಿವೇಕ ಉಡುಪ ಹೇಳಿದರು.
ಬಿ ಸಿ ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಭಾನುವಾರ ನಡೆದ ಡಿವೈನ್ ಪಾರ್ಕ್ ಸಾಲಿಗ್ರಾಮದ ಅಂಗ ಸಂಸ್ಥೆಗಳಾದ ಬಂಟ್ವಾಳ, ಮೂಡಬಿದ್ರೆ, ಬೆಳ್ತಂಗಡಿ ವಿವೇಕ ಜಾಗೃತ ಬಳಗಗಳ ವತಿಯಿಂದ ನಡೆದ ಯೋಗ ಪರ್ಯಟನ ಕಾರ್ಯಕ್ರಮ ಉದ್ಘಾಟಿಸಿದ ಅವರು, ಸ್ವಾಮಿ ವಿವೇಕಾನಂದರ ಮಾತೃ ಭಕ್ತಿ, ಗುರು ಭಕ್ತಿ ಮತ್ತು ದೇಶಭಕ್ತಿಗಳು ಅವರನ್ನು ಶ್ರೇಷ್ಠ ವ್ಯಕ್ತಿಯಾಗಿ ರೂಪಿಸಿದವು ಎಂದರು. ಪರಿಪೂರ್ಣ ಆರೋಗ್ಯಕ್ಕಾಗಿ ಯೋಗ ಚಿಕಿತ್ಸೆ ಪ್ರಕೃತಿ ಚಿಕಿತ್ಸೆ ಮತ್ತು ಆಧ್ಯಾತ್ಮಿಕ ಚಿಕಿತ್ಸೆಗಳು ಅತ್ಯಂತ ಮಹತ್ವದ ಕೊಡುಗೆಗಳನ್ನು ನೀಡುತ್ತವೆ ಎಂದವರು ತಿಳಿಸಿದರು.
ಡಿವೈನ್ ಪಾರ್ಕ್ ಅಧಿಕಾರಿ ಪ್ರೇಮ ಪ್ರಭಾಕರ್, ಬಂಟ್ವಾಳ ವಿವೇಕ ಜಾಗೃತ ಬಳಗದ ಅಧ್ಯಕ್ಷೆ ವಸಂತಿ ಕೆ, ಮೂಡಬಿದ್ರೆ ವಿವೇಕ ಜಾಗೃತ ಬಳಗದ ಅಧ್ಯಕ್ಷ ರತ್ನಾಕರ ಅಂಚನ್, ಬೆಳ್ತಂಗಡಿ ವಿವೇಕ ಜಾಗೃತ ಬಳಗದ ಅಧ್ಯಕ್ಷ ರಘು ನಾಯ್ಕ, ಹಿರಿಯ ಕಾರ್ಯಕರ್ತರಾದ ಉಷಾಕಿರಣ್ ಶೆಟ್ಟಿ, ಸೀತಾರಾಮ ಶೆಟ್ಟಿ ಕುಕ್ಕಿಲ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರದೀಪ ಮೂಡಬಿದ್ರೆ ಸ್ವಾಗತಿಸಿ, ಮಧುಸೂದನ್ ಶಂಭೂರು ಪ್ರಸ್ತಾವನೆಗೈದರು. ಶಿವರಾಜ್ ಅಂತರ ವಂದಿಸಿ, ಗಿರೀಶ ಹೆಗಡೆ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment