ಬಂಟ್ವಾಳ, ಜುಲೈ 06, 2023 (ಕರಾವಳಿ ಟೈಮ್ಸ್) : ತಾಲೂಕಿನ ತುಂಬೆ ಗ್ರಾಮದ ರಾಮಲ್ ಕಟ್ಟೆ ಬಳಿ ಗುರುವಾರ (ಜುಲೈ 6) ಕಾರೊಂದು ಚಾಲಕನ ನಿಯಂತ್ರಣ ಮೀರಿ ರಸ್ತೆಗೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ವಿದ್ಯಾರ್ಥಿನಿ, ಪುತ್ತೂರು ಕೂರ್ನಡ್ಕ ನಿವಾಸಿ ಅಬ್ದುಲ್ ಮಜೀದ್ ಅವರ ಪುತ್ರಿ ಖತೀಜಾ ಹನಾ (19) ಅವರು ಮೃತಪಟ್ಟಿದ್ದು, ಆಕೆಯ ತಾಯಿ ಶಮೀಮಾ ಹಾಗೂ ಕಾರು ಚಾಲಕ, ಸಂಬಂಧಿ ಯುವಕ ಶಾನ್ ಅವರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಇವರು ಪುತ್ತೂರಿನಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ವೈದ್ಯರನ್ನು ಭೇಟಿಯಾಗಲು ತೆರಳುತ್ತಿದ್ದ ವೇಳೆ ತುಂಬೆ ಸಮೀಪದ ರಾಮಲ್ ಕಟ್ಟೆ ಬಳಿ ತೀವ್ರ ಮಳೆ ಬರುತ್ತಿದ್ದ ಕಾರಣ ಕಾರು ಚಾಲಕನ ನಿಯಂತ್ರಣ ಮೀರಿ ರಸ್ತೆ ಬದಿಯ ಧರೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಅಪಘಾತದ ತೀವ್ರತೆಗೆ ಕಾರಿನ ಬಾಗಿಲು ತೆರೆದ ಪರಿಣಾಮ ಯುವತಿ ಹನಾ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
0 comments:
Post a Comment