ಬಂಟ್ವಾಳ, ಜುಲೈ 06, 2023 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕಿನಲ್ಲಿ ಗುರುವಾರವೂ ಭಾರೀ ಮಳೆಯಾಗುತ್ತಿದ್ದು, ಅಲ್ಲಲ್ಲಿ ಮಳೆ ಹಾನಿ ಪ್ರಕರಣಗಳು ವರದಿಯಾಗಿವೆ. ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಮಂಗಳವಾರದಿಂದ ನಿರಂತರ ರಜೆ ಘೋಷಿಸಲಾಗುತ್ತಿದೆ.
ಕೊಳ್ನಾಡು ಗ್ರಾಮದ ಪಂಜರಕೋಡಿ ನಿವಾಸಿ ಜೈನಾಭ ಅವರ ಮನೆ ಪಕ್ಕದಲ್ಲಿನ ತಡೆಗೋಡೆ ಕುಸಿದು ಪಕ್ಕದ ಅಲಿಮರವರ ಮನೆ ಗೋಡೆ ಮೇಲೆ ಬಿದ್ದು ಎರಡೂ ಮನೆಗಳು ತೀವ್ರ ಹಾನಿಯಾಗಿದೆ. ಎರಡೂ ಮನೆಯವರು ಸುರಕ್ಷತೆ ದೃಷ್ಟಿಯಿಂದ ಪಕ್ಕದ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದಾರೆ.
ಅರಳ ಗ್ರಾಮದ ನಿವಾಸಿ ಬೇಬಿ ಅವರ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಹಸನಬ್ಬ ಅವರ ಮನೆಯ ತಡೆಗೋಡೆ ಕುಸಿದು ಬಿದ್ದಿದೆ. ಬಾಳ್ತಿಲ ಗ್ರಾಮದ ಬೆರ್ಕಳ ನಿವಾಸಿ ಧರ್ಣಪ್ಪ ಪೂಜಾರಿ ಅವರ ಮನೆಯ ಬದಿಯ ಬರೆ ಜರಿದು ಬಿದ್ದಿದೆ. ವಿಟ್ಲ ಕಸಬಾ ಗ್ರಾಮದ ನೆಕ್ಕರೆ ಎಂಬಲ್ಲಿ ಮನೆಯ ಕಾಂಪೌಂಡ್ ಕುಸಿದು ಬಿದ್ದಿದೆ. ನೀರಪಾದೆ ನಿವಾಸಿ ಶೀನಪ್ಪ ಮೂಲ್ಯ ಬಿನ್ ತ್ಯಾಂಪ ಮೂಲ್ಯ ಅವರ ಮನೆಗೆ ತೀವ್ರ ಹಾನಿಯಾಗಿದೆ. ಮನೆಮಂದಿಯನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.
ಕರಿಯಂಗಳ ಗ್ರಾಮದ ನಿವಾಸಿ ಸಲಾಂ ಅವರ ಮನೆಯ ಹಿಂಬದಿಯ ಮಣ್ಣು ಕುಸಿದು ಮನೆಗೆ ಬಾಗಶಃ ಹಾನಿಯಾಗಿದೆ. ಕೊಳ್ನಾಡು ಗ್ರಾಮದ ತಾಮರಾಜೆ ನಿವಾಸಿ ಉಮಾವತಿ ಅವರ ಮನೆಗೋಡೆಗೆ ಕಂಪೌಂಡ್ ಕುಸಿದು ತೀವ್ರ ಹಾನಿಯಾಗಿದೆ. ಬಡಗಕಜೆಕಾರು ಗ್ರಾಮದ ಕೋಮಿನಡ್ಕ ನಿವಾಸಿ ಇಸುಬ ಬ್ಯಾರಿ ಅವರ ಮನೆಗೆ ಆವರಣ ಗೋಡೆ ಕುಸಿದು ಬಿದ್ದಿರುವುದರಿಂದ ಮನೆಗೆ ಹಾನಿಯಾಗಿದೆ.
ನಾವೂರು ಗ್ರಾಮದ ಪೂಪಾಡಿಕಟ್ಟೆ ಎಂಬಲ್ಲಿ ಪಿಡ್ಲ್ಯುಡಿ ರಸ್ತೆ ಬದಿ ಧರೆ ಕುಸಿದಿದ್ದು, ಲೋಕೋಪಯೋಗಿ ಇಲಾಖೆಯೊಂದಿಗೆ ಸ್ಥಳ ತನಿಖೆ ನಡೆಸಿ ಅಪಾಯದ ಸ್ಥಿತಿಯಲ್ಲಿರುವ ಮನೆಗೆ ಸ್ಥಳಾಂತರದ ಬಗ್ಗೆ ತಿಳುವಳಿಕೆ ಪತ್ರ ನೀಡಲಾಗಿದೆ. ಬಾಳ್ತಿಲ ಗ್ರಾಮದ ಕಲ್ಲಡ್ಕ ನಿವಾಸಿ ವಸಂತ ಆಚಾರ್ಯ ಅವರ ಮನೆಯ ಕಂಪೌಂಡ್ ಶ್ರೀರಾಮ ಶಾಲೆಯ ಆಟದ ಮೈದಾನದ ಆವರಣಕ್ಕೆ ಬಿದ್ದಿರುತ್ತದೆ.
ಸಂಗಬೆಟ್ಟು ಗ್ರಾಮದ ಕುಮಾರೊಟ್ಟು ನಿವಾಸಿ ದೇಜಪ್ಪ ಮೂಲ್ಯ ಬಿನ್ ವೆಂಕಪ್ಪ ಮೂಲ್ಯ ಅವರ ಮನೆ ತೀವ್ರ ಹಾನಿಯಾಗಿದ್ದು, ಮನೆ ಮಂದಿಯನ್ನು ಸಮೀಪದ ಮನೆಗೆ ಸ್ಥಳಾಂತರಿಸಲಾಗಿದೆ. ಪುದು ಗ್ರಾಮದ ಕಬೇಲಾ ನಿವಾಸಿ ಶರ್ಮಿಳಾ ಕೋಂ ಗೋಪಾಲಕೃಷ್ಣ ಅವರ ಮನೆಗೆ ತಾಗಿದ ಗೋಡೆ ಕುಸಿದಿದ್ದು, ಮನೆ ತಳ ಕುಸಿಯುವ ಆತಂಕ ಎದುರಾಗಿದೆ. ಮನೆ ಮಂದಿ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದಾರೆ ಎಂದು ತಾಲೂಕು ಕಚೇರಿಯ ಮಾಹಿತಿ ತಿಳಿಸಿದೆ. ಗುರುವಾರ ಬಂಟ್ವಾಳ ನೇತ್ರಾವತಿ ನದಿ 3.6 ಮೀಟರ್ ಅಂತರದಲ್ಲಿ ಹರಿಯುತ್ತಿದೆ.
0 comments:
Post a Comment