ಬಂಟ್ವಾಳ, ಜುಲೈ 04, 2023 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಸೋಮವಾರದಿಂದ ನಿರಂತರ ಹಾಗೂ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಹಲವೆಡೆ ಮನೆ ಹಾನಿ ಪ್ರಕರಣಗಳು ಸಂಭವಿಸಿದ ಬಗ್ಗೆ ವರದಿಯಾಗಿದೆ. ಸಜಿಪಮೂಡ ಗ್ರಾಮದ ಬೊಳ್ಳಾಯಿ-ಪಟ್ಟುಗುಡ್ಡೆ ನಿವಾಸಿ ಸೈನಾಝ್ ಅವರ ಮನೆ ಶೌಚಾಲಯದ ಶೀಟಿನ ಮೇಲೆ ಮರ ಬಿದ್ದು ಹಾನಿಯಾಗಿದೆ.
ತುಂಬೆ ಗ್ರಾಮದ ಪದ್ಮನಾಭ ಅವರ ತಡೆಗೋಡೆ ಕುಸಿದು ದನದ ಕೊಟ್ಟಿಗೆಗೆ ಹಾನಿಯಾಗಿದೆ. ಕೇಪು ಗ್ರಾಮದ ಕೋಡಂದೂರು ಜಯರಾಮ ನಾಯ್ಕ ಅವರ ತೋಟದಲ್ಲಿ ಮರ ಬಿದ್ದು ಅಡಿಕೆ ಮರಗಳಿಗೆ ಹಾನಿಯಾಗಿದೆ.
ಮಾಣಿಲ ಗ್ರಾಮದ ಓಟೆಪಡ್ಪು ನಿವಾಸಿ ನಾರಾಯಣ ನಾಯ್ಕ ಅವರ ಕೊಟ್ಟಿಗೆಗೆ ಗುಡ್ಡ ಕುಸಿದು ಹಾನಿಯಾಗಿರುತ್ತದೆ. ಅನಂತಾಡಿ ಗ್ರಾಮದ ಬಾಕಿಲ ನಿವಾಸಿ ಶಕುಂತಲಾ ಕೋಂ ದಿವಂಗತ ಸೀತಾರಾಮ ಆಚಾರ್ಯ ಅವರ ಮನೆಗೆ ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿದೆ.
ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಕಾರಣದಿಂದಾಗಿ ತಾಲೂಕಿನ ಶಾಲಾ-ಕಾಲೇಜುಗಳಿಗೆ ಸೋಮವಾರ ಜಿಲ್ಲಾಧಿಕಾರಿಯವರ ಸೂಚನೆ ಮೇರೆಗೆ ರಜೆ ಘೋಷಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ ಪಿ ಅವರು ಆದೇಶಿಸಿದ್ದಾರೆ. ಮಳೆ ಪ್ರಮಾಣ ಹೆಚ್ಚಾಗಿರುವುದರಿಂದ ವರ್ಷದಲ್ಲಿ ಇದೇ ಮೊದಲ ಬಾರಿಗೆ ತಾಲೂಕಿನ ಜೀವನದಿ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಸೋಮವಾರ ನದಿ ನೀರಿನ ಮಟ್ಟ 3.2 ಮೀಟರ್ ಆಗಿತ್ತು.
0 comments:
Post a Comment