ಬಂಟ್ವಾಳ, ಜುಲೈ 24, 2023 (ಕರಾವಳಿ ಟೈಮ್ಸ್) : ತಾಲೂಕಿನ ಪುದು ಗ್ರಾಮ ಪಂಚಾಯತ್ ಕಾಂಗ್ರೆಸ್ ಬೆಂಬಲಿತ ಸದಸ್ಯ ಹುಸೈನ್ ಪಾಡಿ ಅವರ ಹಠಾತ್ ನಿಧನದಿಂದ ತೆರವಾಗಿರುವ 10ನೇ ವಾರ್ಡಿಗೆ ಭಾನುವಾರ (ಜುಲೈ 23) ಉಪಚುನಾವಣೆ ನಡೆದಿದ್ದು, ಶೇ 68.92 ಮಂದಿ ಮತ ಚಲಾಯಿಸಿದ್ದಾರೆ. ತಾಲೂಕಿನಾದ್ಯಂತ ಸುರಿದ ಭಾರೀ ಮಳೆಯ ನಡುವೆ ಈ ಒಂದು ವಾರ್ಡಿಗೆ ಸುಜೀರು ಸರಕಾರಿ ಶಾಲಾ ಮತಗಟ್ಟೆಯಲ್ಲಿ ನಡೆದ ಮತದಾನದಲ್ಲಿ ವಾರ್ಡಿನ ಮತದಾರರು ಮತ ಚಲಾಯಿಸಿದರು. ಜುಲೈ 26 ರಂದು ಬುಧವಾರ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಇಲ್ಲಿನ ಪಂಚಾಯತ್ ಸದಸ್ಯ ಎಂ ಹುಸೈನ್ ಅವರು ಇತ್ತೀಚೆಗೆ ಹಠಾತ್ ಕಾಣಿಸಿಕೊಂಡ ಜ್ವರದಿಂದ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದರು. ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಈ ಉಪಚುನಾವಣೆ ನಡೆದಿದೆ.
ಹಿಂದುಳಿದ ವರ್ಗ ಎ ಮೀಸಲಾತಿ ಹೊಂದಿರುವ ಈ ವಾರ್ಡಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ದಿವಂತ ಹುಸೈನ್ ಅವರ ಪುತ್ರ ಮುಹಮ್ಮದ್ ಇಕ್ಬಾಲ್ ಅವರು ಕಣಕ್ಕಿಳಿದರೆ, ಉಳಿದಂತೆ ಅಬ್ದುಲ್ ಲತೀಫ್ ಬಿನ್ ಆಲಿಯಬ್ಬ ಸುಜೀರು ಬದಿಗುಡ್ಡೆ ಹಾಗೂ ಮುಹಮ್ಮದ್ ಅಶ್ರಫ್ ಬಿನ್ ಹಮೀದ್ ಕೆ ಮಾರಿಪಳ್ಳ ಅವರು ಸ್ಪರ್ಧಿಸಿದ್ದಾರೆ.
ವಾರ್ಡಿನಲ್ಲಿ 414 ಪುರುಷ ಮತದಾರರು ಹಾಗೂ 416 ಮಹಿಳಾ ಮತದಾರರು ಸೇರಿದಂತೆ ಒಟ್ಟು 830 ಮಂದಿ ಮತದಾರರಿದ್ದು, ಈ ಪೈಕಿ 284 ಮಂದಿ ಪುರುಷರು (ಶೇ 68.60) ಹಾಗೂ 288 ಮಂದಿ ಮಹಿಳೆಯರ (ಶೇ 69.23) ಸಹಿತ ಒಟ್ಟು 572 ಮಂದಿ ಮತ ಚಲಾಯಿಸಿದ್ದು, ಒಟ್ಟು 68.92 ಶೇಕಡಾ ಮತದಾನ ದಾಖಲಾಗಿದೆ.
0 comments:
Post a Comment