ಪುದು ಪಂಚಾಯತ್ 10ನೇ ವಾರ್ಡ್ ಉಪಚುನಾವಣೆ ಫಲಿತಾಂಶ ಘೋಷಣೆ
ಬಂಟ್ವಾಳ, ಜುಲೈ 26, 2023 (ಕರಾವಳಿ ಟೈಮ್ಸ್) : ತಾಲೂಕಿನ ಪುದು ಗ್ರಾಮ ಪಂಚಾಯತ್ ಕಾಂಗ್ರೆಸ್ ಬೆಂಬಲಿತ ಸದಸ್ಯ ಹುಸೈನ್ ಪಾಡಿ ಅವರ ಹಠಾತ್ ನಿಧನದಿಂದ ತೆರವಾಗಿರುವ 10ನೇ ವಾರ್ಡಿಗೆ ಜುಲೈ 23 ರಂದು ನಡೆದ ಉಪಚುನಾವಣೆಯ ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ಮೃತ ಹುಸೈನ್ ಅವರ ಪುತ್ರ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮುಹಮ್ಮದ್ ಇಕ್ಬಾಲ್ ಪಾಡಿ ಅವರು 385 ಮತಗಳನ್ನು ಪಡೆದು ಭರ್ಜರಿ ಜಯಭೇರಿ ಭಾರಿಸಿದ್ದಾರೆ.
ಇಲ್ಲಿನ ಪಂಚಾಯತ್ ಸದಸ್ಯ ಎಂ ಹುಸೈನ್ ಅವರು ಇತ್ತೀಚೆಗೆ ಹಠಾತ್ ಕಾಣಿಸಿಕೊಂಡ ಜ್ವರದಿಂದ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದರು. ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಈ ಉಪಚುನಾವಣೆ ನಡೆದಿದೆ.
ಹಿಂದುಳಿದ ವರ್ಗ ಎ ಮೀಸಲಾತಿ ಹೊಂದಿರುವ ಈ ವಾರ್ಡಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ದಿವಂತ ಹುಸೈನ್ ಅವರ ಪುತ್ರ ಮುಹಮ್ಮದ್ ಇಕ್ಬಾಲ್ ಅವರು ಕಣಕ್ಕಿಳಿದಿದ್ದು, ಉಳಿದಂತೆ ಎಸ್ ಡಿ ಪಿ ಐ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಬ್ದುಲ್ ಲತೀಫ್ ಬಿನ್ ಆಲಿಯಬ್ಬ ಸುಜೀರು ಬದಿಗುಡ್ಡೆ ಅವರಿಗೆ ಕೇವಲ 39 ಮತಗಳು ಲಭಿಸಿದರೆ, ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ಮುಹಮ್ಮದ್ ಅಶ್ರಫ್ ಬಿನ್ ಹಮೀದ್ ಕೆ ಮಾರಿಪಳ್ಳ ಅವರಿಗೆ 140 ಮತಗಳು ಲಭಿಸಿದೆ.
ವಾರ್ಡಿನಲ್ಲಿ 414 ಪುರುಷ ಮತದಾರರು ಹಾಗೂ 416 ಮಹಿಳಾ ಮತದಾರರು ಸೇರಿದಂತೆ ಒಟ್ಟು 830 ಮಂದಿ ಮತದಾರರಿದ್ದು, ಈ ಪೈಕಿ 284 ಮಂದಿ ಪುರುಷರು (ಶೇ 68.60) ಹಾಗೂ 288 ಮಂದಿ ಮಹಿಳೆಯರ (ಶೇ 69.23) ಸಹಿತ ಒಟ್ಟು 572 ಮಂದಿ ಮತ ಚಲಾಯಿಸಿದ್ದು, ಒಟ್ಟು 68.92 ಶೇಕಡಾ ಮತದಾನ ದಾಖಲಾಗಿತ್ತು. ಈ ಪೈಕಿ 8 ಮತಗಳು ತಿರಸ್ಕøತಗೊಂಡಿದೆ.
ಬಂಟ್ವಾಳ ತಹಶೀಲ್ದಾರ್ ಎಸ್ ಬಿ ಕೂಡಲಗಿ ನೇತೃತ್ವದಲ್ಲಿ ಬಿ ಸಿ ರೋಡು ಮಿನಿ ವಿಧಾನಸಭಾ ಕೊಠಡಿಯಲ್ಲಿ ನಡೆದ ಮತ ಎಣಿಕೆ ಕಾರ್ಯದಲ್ಲಿ ಚುನಾವಣೆ ಅಧಿಕಾರಿ ಬಂಟ್ವಾಳ ತಾ ಪಂ ಇಒ ರಾಜಣ್ಣ, ಸಹಾಯಕ ಚುನಾವಣಾಧಿಕಾರಿ ಪುದು ಪಂಚಾಯತ್ ಪಿಡಿಒ ಹರೀಶ್ ಕೆ ಎ, ಎಣಿಕೆ ಮೇಲ್ವಿಚಾರಕ ಉಪತಹಶೀಲ್ದಾರ್ ನವೀನ್ ಬೆಂಜನಪದವು, ಎಣಿಕೆ ಸಹಾಯಕರು ಕಂದಾಯ ನಿರೀಕ್ಷಕರಾದ ಸೀತಾರಾಮ ಕಮ್ಮಾಜೆ, ಜೆ ಜನಾರ್ದನ, ಸಿಬ್ಬಂದಿಗಳಾದ ಶ್ರೀಕಲಾ, ಸುಂದರ, ಕಿರಣ್, ಚಂದು ಅವರು ಎಣಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
0 comments:
Post a Comment