ಮಣಿಪುರ ಭೀಭತ್ಸ ಘಟನೆಗಳ ವಿರುದ್ದ ಬಂಟ್ವಾಳ ಕಾಂಗ್ರೆಸ್ ಪ್ರತಿಭಟನೆ
ಬಂಟ್ವಾಳ, ಜುಲೈ 24, 2023 (ಕರಾವಳಿ ಟೈಮ್ಸ್) : ಬಂಟ್ವಾಳ ವಿಧಾನಸಭಾ ಕ್ಷೇತ್ರ, ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಆಶ್ರಯದಲ್ಲಿ ಮಣಿಪುರದಲ್ಲಿ ನಡೆದ ದಾರುಣ ಘಟನೆಗೆ ಪ್ರಬಲ ವಿರೋಧ ವ್ಯಕ್ತಪಡಿಸಿ, ಆಡಳಿತರೂಢ ಸರಕಾರದ ವೈಫಲ್ಯ ಖಂಡಿಸಿ, ಮಣಿಪುರ ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಆಗ್ರಹಿಸಿ, ಕೇಂದ್ರದ ಬಿಜೆಪಿ ಸರಕಾರದ ವಿರುದ್ದ ಸೋಮವಾರ ಬಿ ಸಿ ರೋಡು ಜಂಕ್ಷನ್ನಿನಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ, ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೇರಿದ ಬಳಿಕ ದೇಶದ ಜನತಗೆ ನೆಮ್ಮದಿಯೇ ಇಲ್ಲವಾಗಿದೆ. ಜಾತಿ-ಧರ್ಮಗಳ ಆಧಾರದಲ್ಲಿ ಹಿಂಸೆ, ಕೊಲೆ, ಅರಾಜಕತೆಗಳು ನಡೆಯುವುದು ಬಿಟ್ಟರೆ ಜನಪರ ಕಾರ್ಯಕ್ರಮಗಳ ಜಾರಿಯೇ ಇಲ್ಲದಾಗಿದೆ ಎಂದು ಕಿಡಿಕಾರಿದರು.
ಒಂದಿಲ್ಲೊಂದು ಕ್ಷುಲ್ಲಕ ವಿಷಯಗನ್ನು ಮುಂದಿಟ್ಟುಕೊಂಡು ದೇಶದ ಜನರ ಮನಸ್ಸಿನಲ್ಲಿ ವಿಭಜನೆಯ ವಿಷ ಬೀಜ ಬಿತ್ತಿ ವೋಟ್ ಬ್ಯಾಂಕ್ ಗಟ್ಟಿಗೊಳಿಸುವ ಹುನ್ನಾರದ ಬಗ್ಗೆಯಷ್ಟೆ ಬಿಜೆಪಿ ಪಕ್ಷದ ನಾಯಕರು ಸದಾ ಚಿಂತೆ ನಡೆಸುತ್ತಿದ್ದಾರೆಯೇ ಹೊರತು ಅಧಿಕಾರದ ಗದ್ದುಗೆ ನೀಡಿದ ಈ ದೇಶದ ಜನರ ಕಲ್ಯಾಣಕ್ಕಾಗಿ ಕಿಂಚಿತ್ತೂ ಚಿಂತಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ರಮಾನಾಥ ರೈ ಮಣಿಪುರದಲ್ಲಿ ನಡೆಯುತ್ತಿರುವ ಭೀಭತ್ಸ ಘಟನೆಗಳಿಗೆ ಕೇಂದ್ರ ಸರಕಾರ ಹಾಗೂ ನರೇಂದ್ರ ಮೋದಿಯೇ ನೇರ ಕಾರಣಕರ್ತರಾಗಿದ್ದು, ಸುದೀರ್ಘ ಅವಧಿಯಲ್ಲಿ ನಡೆಯುತ್ತಿರುವ ಹಿಂಸೆಯ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕಾದ ಕೇಂದ್ರ ಸರಕಾರ ಕೇವಲ ಮೊಸಳೆ ಕಣ್ಣೀರಿನ ಹೇಳಿಕೆಗಳಿಂದಷ್ಟೆ ಕೈ ತೊಳೆದುಕೊಳ್ಳುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.
ಪ್ರಮುಖರಾದ ಪಿಯೂಸ್ ಎಲ್ ರೋಡ್ರಿಗಸ್, ಎಂ ಅಶ್ವನಿ ಕುಮಾರ್ ರೈ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಬಿ ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಸದಾಶಿವ ಬಂಗೇರ, ಬಿ ಎಂ ಅಬ್ಬಾಸ್ ಅಲಿ, ಸುಭಾಶ್ಚಂದ್ರ ಶೆಟ್ಟಿ, ಮುಹಮ್ಮದ್ ನಂದರಬೆಟ್ಟು, ಅಬೂಬಕ್ಕರ್ ಸಿದ್ದೀಕ್, ಲವೀನಾ ವಿಲ್ಮಾ ಮೊರಾಸ್, ಮಾಯಿಲಪ್ಪ ಸಾಲ್ಯಾನ್, ಮಲ್ಲಿಕಾ ಶೆಟ್ಟಿ, ಜಯಂತಿ ಪೂಜಾರಿ, ಇಬ್ರಾಹಿಂ ನವಾಝ್ ಬಡಕಬೈಲು, ಮಹಮ್ಮದ್ ನಂದಾವರ, ವಿಶ್ವನಾಥ ಗೌಡ ಮಣಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment