ಬಂಟ್ವಾಳ, ಜುಲೈ 03, 2023 (ಕರಾವಳಿ ಟೈಮ್ಸ್) : ತಾಲೂಕಿನ ಕೆದಿಲ ಗ್ರಾಮದ ಗಡಿಯಾರ ಶಾಲಾ ಬಳಿ ಇರುವ ಹೈಟೆನ್ಶನ್ ಟವರಿನ ಅಡಿಪಾಯ ಕುಸಿಯುವ ಭೀತಿ ಎದುರಿಸುತ್ತಿದ್ದು ಪರಿಣಾಮ ಮಕ್ಕಳ ಸುರಕ್ಷತೆ ಹಿನ್ನಲೆಯಲ್ಲಿ ಸೋಮವಾರ ಶಾಲೆಗೆ ರಜೆ ಘೋಷಿಸಲಾಗಿದೆ.
ತಾಲೂಕಿನಲ್ಲಿ ಮುಂಗಾರು ಬಿರುಸು ಪಡೆದುಕೊಂಡಿರುವ ಹಿನ್ನಲೆಯಲ್ಲಿ ಗಡಿಯಾರ ಸರಕಾರಿ ಶಾಲೆಯ ಬಳಿ ಗುಡ್ಡ ಕುಸಿತ ಉಂಟಾಗಿರುವ ಪರಿಣಾಮ ಅಲ್ಲೇ ಇರುವ ವಿದ್ಯುತ್ ಹೈಟೆನ್ಶನ್ ಟವರ್ ಕೂಡಾ ಕುಸಿತದ ಭೀತಿ ಎದುರಿಸುತ್ತಿದೆ.
ರಾಷ್ಟ್ರೀಯ ಹೆದ್ದಾರಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಸರಕಾರಿ ಶಾಲೆ ಪುರಾತನ ಇತಿಹಾಸ ಹೊಂದಿದ್ದು, ಇದೀಗ ಗುಡ್ಡ ಕುಸಿತದ ಪರಿಣಾಮ ಶಾಲಾ ಮಕ್ಕಳ ಸುರಕ್ಷತೆ ಬಗ್ಗೆ ಗ್ರಾಮಸ್ಥರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಬಿಸಿರೋಡು-ಅಡ್ಡಹೊಳೆ ಚತುಷ್ಪತ ಹೆದ್ದಾರಿ ಕಾಮಗಾರಿ ವೇಳೆ ಶಾಲಾ ಕಟ್ಟಡದ ಬದಿವರೆಗೂ ಅಗೆತ ಮಾಡಲಾಗಿದ್ದು ಇದರಿಂದ ಗುಡ್ಡ ಕುಸಿತ ಉಂಟಾಗಿದೆ. ಬಳಿಕ ಶಾಲಾ ಕಟ್ಟಡಕ್ಕೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ತಡೆಗೋಡೆ ನಿರ್ಮಾಣ ಮಾಡದೆ ಇರುವುದರಿಂದ ಇದೀಗ ಶಾಲಾ ಸುರಕ್ಷತೆ ಭೀತಿಯೂ ಉಂಟಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಹೆದ್ದಾರಿ ಇಲಾಖೆ, ಶಿಕ್ಷಣ ಇಲಾಖೆ, ತಾಲೂಕಾಡಳಿತ ಹಾಗೂ ಜಿಲ್ಲಾಡಳಿತಗಳು ತಕ್ಷಣ ಎಚ್ಚೆತ್ತುಕೊಂಡು ಶಾಲೆ ಹಾಗೂ ಮಕ್ಕಳ ಸುರಕ್ಷತೆ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
0 comments:
Post a Comment