ಬಂಟ್ವಾಳ, ಜುಲೈ 25, 2023 (ಕರಾವಳಿ ಟೈಮ್ಸ್) : ತಾಲೂಕಿನ ಕಾವಳಪಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೈಲಾರ್ ಎಂಬ ಪ್ರದೇಶದಲ್ಲಿ ಚರಂಡಿ ಇಲ್ಲದೆ ಮಳೆ ನೀರು ಸಂಪೂರ್ಣವಾಗಿ ರಸ್ತೆಯಲ್ಲೇ ಹರಿದು ಬರುತ್ತಿದ್ದು, ಶಾಲಾ-ಮದ್ರಸ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರು ಮಳೆಗಾಲದಲ್ಲಿ ನಿತ್ಯವೂ ನದಿ ದಾಟಿದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಇಲ್ಲಿನ ಮಸೀದಿ ಹಾಗೂ ಮದ್ರಸಾಕ್ಕೂ ಇದೇ ರಸ್ತೆ ಮೂಲಕ ಸಾಗಬೇಕಾಗಿದ್ದು, ಸ್ಥಳೀಯ ವಿದ್ಯಾರ್ಥಿಗಳು ಮದ್ರಸ ಹಾಗೂ ಶಾಲೆಗೆ ತೆರಳಲೂ ಕೂಡಾ ಇದೇ ರಸ್ತೆಯಾಗಿರುತ್ತದೆ. ಇಲ್ಲಿನ ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲೇ ಹರಿದು ಹೋಗುವುದರಿಂದ ರಸ್ತೆಯೇ ನದಿಯಂತಾಗುತ್ತದೆ. ಸಣ್ಣ-ಪುಟ್ಟ ಮಕ್ಕಳಿಗೆ ರಸ್ತೆಯಲ್ಲಿ ಹರಿಯುವ ನೀರು ಅರ್ಧ ಕಾಲು ಮುಳುವಷ್ಟಾಗುತ್ತಿದ್ದು, ಮಕ್ಕಳನ್ನು ಶಾಲೆ-ಮದ್ರಸಗಳಿಗೆ ಕಳುಹಿಸಲು ಮಳೆ ಬರುವ ಸಂದರ್ಭದಲ್ಲಿ ಪೋಷಕರು ಆತಂಕಪಡುವಂತಾಗಿದೆ. ಇದು ಇಲ್ಲಿನ ನಿವಾಸಿಗಳಿಗೆ ಪ್ರತೀ ಬಾರಿಯೂ ಮಳೆಗಾಲದಲ್ಲಿ ಒದಗಿ ಬರುವ ಪರಿಸ್ಥಿತಿಯಾಗಿದೆ. ಜೋರು ಮಳೆ ಬಂದರೆ ರಸ್ತೆಯಲ್ಲಿ ನದಿಯಂತಾಗಿ ಹರಿಯುವ ನೀರು ಪರಿಸರದ ಮನೆಗಳಿಗೂ ನುಗ್ಗಿ ಬರುತ್ತಿದೆ. ಇದರಿಂದ ಮನೆಗಳೂ ಅಪಾಯವನ್ನು ಎದುರಿಸುತ್ತಿದೆ.
ಇಲ್ಲಿನ ರಸ್ತೆ ಹಾಗೂ ಚರಂಡಿ ಅವ್ಯವಸ್ಥೆ ಬಗ್ಗೆ ಈಗಾಗಲೇ ಹಲವು ಬಾರಿ ಸ್ಥಳೀಯ ಪಂಚಾಯತ್ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ದೂರಿಕೊಂಡರು ಇದುವರೆಗೆ ಯಾವುದೇ ಕನಿಷ್ಠ ಸ್ಪಂದನೆಯೂ ದೊರೆತಿಲ್ಲ ಎನ್ನುತ್ತಾರೆ ಸ್ಥಳೀಯರು. ಇಲ್ಲಿನ ಸಮಸ್ಯೆ ಬಗ್ಗೆ, ಇಲ್ಲಿನ ವಿದ್ಯಾರ್ಥಿಗಳು ಎದುರಿಸುತ್ತಿರುವ ಆತಂಕದ ಪರಿಸ್ಥಿತಿ ಬಗ್ಗೆ ಬಂಟ್ವಾಳ ಮುಸ್ಲಿಂ ಒಕ್ಕೂಟದ ಅಧ್ಯಕ್ಷ, ಸ್ಥಳೀಯ ಕಾಂಗ್ರೆಸ್ ಮುಖಂಡ ಇಬ್ರಾಹಿಂ ಕೈಲಾರ್ ಅವರು ಬಂಟ್ವಾಳ ತಹಶೀಲ್ದಾರ್ ಅವರಿಗೆ ಮನವರಿಕೆ ಮಾಡಿ ಲಿಖಿತ ಮನವಿ ಸಲ್ಲಿಸಿದ್ದು, ರಸ್ತೆ ಕಾಂಕ್ರಿಟೀಕರಣ ಹಾಗೂ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಯಿಸಿದ ತಹಶೀಲ್ದಾರ್ ಎಸ್ ಬಿ ಕೂಡಲಗಿ ಅವರು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
0 comments:
Post a Comment