ಬಂಟ್ವಾಳ, ಜುಲೈ 24, 2023 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಮಳೆಯೂ ಬಿರುಸಾಗಿದ್ದು, ಹಲವೆಡೆ ಮಳೆಹಾನಿ ಪ್ರಕರಣಗಳೂ ಮುಂದುವರಿದಿದೆ. ಸಾಲೆತ್ತೂರು ಗ್ರಾಮದ ಬೊಳ್ಮಾರ್ ನಿವಾಸಿ ಕಮಲ ಅವರ ಮನೆ ಭಾಗಶ: ಹಾನಿಯಾಗಿದೆ. ಅಳಿಕೆ ನಿವಾಸಿ ರಾಮ ಬೆಳ್ಚಡ ಅವರ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಬಾಳ್ತಿಲ ಗ್ರಾಮದ ಅರಿಮಜಲು ನಿವಾಸಿ ಸುಂದರಿ ಅವರ ಮನೆಯ ಪಕ್ಕದ ಬರೆ ಜರಿದು ಮನೆಗೆ ಆಂಶಿಕ ಹಾನಿಯಾಗಿದೆ. ಅಳಿಕೆ ಗ್ರಾಮದ ವದ್ವ ನಿವಾಸಿ ಗೋಪಾಲ ಕೃಷ್ಣ ನಾವುಡ ಅವರ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ.
ವಿಟ್ಲ ಕಸಬಾ ಗ್ರಾಮದ ಅವೆತ್ತಿ ಕಲ್ಲು ನಿವಾಸಿ ಚಂದ್ರಶೇಖರ ಬಿನ್ ಸೇಸು ಗೌಡ ಅವರ ಮನೆ ಮೇಲೆ ಅಡಿಕೆ ಮರ ಬಿದ್ದು ಭಾಗಶಃ ಹಾನಿ ಸಂಭವಿಸಿದೆ. ದೇವಸ್ಯಪಡೂರು ಗ್ರಾಮದ ಮಾಲಬೆ ನಿವಾಸಿ ಪುಷ್ಪ ಕೋಂ ರಾಜೇಶ್ ಅವರ ಮನೆಗೆ ಮರ ಬಿದ್ದು ಮೇಲ್ಛಾವಣಿ ಭಾಗಶಃ ಹಾನಿಯಾಗಿದೆ. ಕಡೇಶ್ವಾಲ್ಯ ನಿವಾಸಿ ವೆಂಕಪ್ಪ ಬಿನ್ ಮೋಹನ ಮೂಲ್ಯ ಅವರ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಬಿ ಮೂಡ ಗ್ರಾಮದ ನಿವಾಸಿ ಬೀಪಾತುಮ್ಮ ಅವರ ವಾಸ್ತವ್ಯ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿ ಸಂಭವಿಸಿದೆ.
ಮೂಡುಪಡಕೊಡಿ ಗ್ರಾಮದ ಸೇವಾ ನಿವಾಸಿ ವಿನುತಾ ಕೋಂ ರವೀಂದ್ರ ಪೂಜಾರಿ ಅವರ ವಾಸ್ತವ್ಯದ ಮನೆಗೆ ಗುಡ್ಡಜರಿದು ಮನೆಗೆ ಭಾಗಶಃ ಹಾನಿಯಾಗಿದೆ. ಇರ್ವತ್ತುರು ಗ್ರಾಮದ ವಿಶ್ವನಾಥ ಬಿನ್ ಜಿನ್ನಪ್ಪ ಪೂಜಾರಿ ಅವರ ವಾಸ್ತವ್ಯದ ಮನೆಯ ಹತ್ತಿರ ಗುಡ್ಡ ಕುಸಿದಿದ್ದು ಯಾವುದೇ ಹಾನಿ ಸಂಭವಿಸಿರುವುದಿಲ್ಲ. ಕರೋಪಾಡಿ ಗ್ರಾಮದ ಒಡಿಯೂರು ಅಂಗನವಾಡಿ ಕೇಂದ್ರದ ಕಾಂಪೌಂಡಿಗೆ ಮರ ಬಿದ್ದು ಕಾಂಪೌಂಡ್ ಹಾನಿಯಾಗಿದೆ. ಉಳಿ ಗ್ರಾಮದ ಲಿಂಗೊಟ್ಟು ಎಂಬಲ್ಲಿ ಮಳೆ ನೀರಿನ ರಭಸಕ್ಕೆ ಕಿಂಡಿ ಅಣೆಕಟ್ಟಿನ ಒಂದು ಭಾಗ ಸಂಪೂರ್ಣ ಕೊಚ್ಚಿ ಹೋಗಿದ್ದು ಇಕ್ಕೆಲಗಳ ಸಂಪರ್ಕ ಕಡಿದುಹೋಗಿರುತ್ತದೆ. ಹತ್ತಿರದ ಅಡಕೆ ತೋಟದ ಮಣ್ಣು ಕೊರೆದು ಸುಮಾರು 75ಕ್ಕೂ ಮಿಕ್ಕಿ ಅಡಕೆ ಗಿಡಗಳು ನೀರಿನಲ್ಲಿ ಕೊಚ್ಚಿಹೋಗಿರುತ್ತದೆ. ನೀರಿನ ಸೆಳೆತ ಹೆಚ್ಚುತ್ತಿದ್ದು ಮಣ್ಣು ಕೊಚ್ಚಿ ಹೋಗುತ್ತಿರುವುದು ಮುಂದುವರಿದಿದ್ದು, ಅಪಾಯಕಾರಿಯಾಗಿರುವುದರಿಂದ ತೋಡಿನ ಸಮೀಪ ತೆರಳದಂತೆ ಹತ್ತಿರದ ನಿವಾಸಿಗಳಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ವೀರಕಂಭ ಗ್ರಾಮದ ನಡುವಳಚ್ಚಿಲ್ ನಿವಾಸಿ ಆರತಿ ಕೋಂ ಸಂಜೀವ ಭಂಟ ಅವರ ಕಚ್ಚಾ ಮನೆ ತೀವ್ರ ಹಾನಿಯಾಗಿದ್ದು ಮನೆಮಂದಿಯನ್ನು ಹತ್ತಿರದ ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ ಎಂದು ತಾಲೂಕು ಕಚೇರಿ ಮಾಹಿತಿ ತಿಳಿಸಿದೆ.
0 comments:
Post a Comment