ಬಂಟ್ವಾಳ, ಜುಲೈ 24, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯ ಮಳೆ ಬಾಧಿತ ಪ್ರದೇಶಗಳಿಗೆ ಹೊಂದಿಕೊಂಡು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳು ಆಯಾ ತಾಲೂಕಿನ ತಹಶೀಲ್ದಾರ್ ಗಳಿಗೆ ನೀಡಿದ್ದಾರೆ. ಮಕ್ಕಳನ್ನು ಬಾಧಿಸುವ ನದೀ ಪಾತ್ರದ ಶಾಲೆಗಳಿಗೆ ಅನಿವಾರ್ಯ ಕಂಡುಬಂದರೆ ರಜೆ ಘೋಷಿಸಿ ಮಕ್ಕಳ ಸುರಕ್ಷತೆ ಕಾಪಾಡಿಕೊಳ್ಳುವಂತೆ ಸೂಚಿಸಿದ ಹಿನ್ನಲೆಯಲ್ಲಿ ಬಂಟ್ವಾಳ ತಾಲೂಕಿನಾದ್ಯಂತ ಭಾರೀ ಮಳೆ ಮುಂದುವರಿದಿದ್ದು, ನೇತ್ರಾವತಿ ನದಿ ನೀರಿನ ಮಟ್ಟದಲ್ಲೂ ಏರಿಕೆ ಕಂಡುಬರುತ್ತಿರುವ ಹಿನ್ನಲೆಯಲ್ಲಿ ಬಂಟ್ವಾಳ ತಾಲೂಕಿನ ಕೆಲವು ಶಾಲೆಗಳಿಗೆ ಸೋಮವಾರ (ಜುಲೈ 24) ರಜೆ ಘೋಷಿಸಿ ತಾಲೂಕು ತಹಶೀಲ್ದಾರ್ ಎಸ್ ಬಿ ಕೂಡಲಗಿ ಅವರು ಆದೇಶಿಸಿದ್ದಾರೆ.
ತಾಲೂಕಿನ ಗೂಡಿನಬಳಿ ಹಯಾತುಲ್ ಇಸ್ಲಾಂ ಶಾಲೆ, ವಳವೂರು ಕಿರಿಯ ಪ್ರಾಥಮಿಕ ಶಾಲೆ, ಪಾಣೆಮಂಗಳೂರು ಶ್ರೀ ಶಾರದ ಹಾಗೂ ಎಸ್ ಎಲ್ ಎನ್ ಪಿ ವಿದ್ಯಾಲಯ, ಕಕ್ಕೆಪದವು ಎಲ್ ಸಿ ಆರ್ ಶಾಲೆ, ಮೊಂಟೆಪದವು ಕೆಪಿಎಸ್ ಶಾಲೆ, ತುಂಬೆ ಕುನಿಲ್ ಶಾಲೆ, ಬಿ ಎ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆ, ಪೆರ್ಲ-ಬಿಯಪಾದೆ ಶಾಲೆ, ಸರಪಾಡಿ ಪ್ರಾಥಮಿಕ ಶಾಲೆ, ಪೂಪಾಡಿಕಟ್ಟೆ ಹೆಗಡೆ ಶಾಲೆ, ದಡ್ಡಲಕಾಡು, ಎರ್ಮಾಳ್ ಪದವು ಮಜ್ಲಿಸ್ ಶಾಲೆಗಳಿಗೆ ರಜೆ ಘೋಷಿಸಿ ತಹಶೀಲ್ದಾರ್ ಸೋಮವಾರ ಬೆಳಿಗ್ಗೆ ಆದೇಶಿಸಿದ್ದಾರೆ. ಇನ್ನುಳಿದ ಶಾಲೆಗಳು ಎಂದಿನಂತೆ ಕಾರ್ಯಾಚರಣೆ ನಡೆಸಲಿದೆ ಎಂದವರು ತಿಳಿಸಿದ್ದಾರೆ.
ತಾಲೂಕಿನಲ್ಲಿ ಮಳೆ ಬಿರುಸು ಇರುವವರೆಗೆ ಪ್ರತಿದಿನ ಬೆಳಗ್ಗೆ 5-45ಕ್ಕೆ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿ ಆರ್ ಸಿ ಮತ್ತು ಸಿ ಆರ್ ಸಿ ಹಾಗೂ ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರೊಂದಿಗೆ ಮುಖಾಂತರ ಚರ್ಚೆ ನಡೆಸಿದ ಬಳಿಕ ರಜೆ ಘೋಷಣೆ ಮಾಡಲು ನಿರ್ಧರಿಸಿರುವುದಾಗಿ ತಹಶೀಲ್ದಾರ್ ಎಸ್ ಬಿ ಕೂಡಲಗಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬಂಟ್ವಾಳ ನೇತ್ರಾವತಿ ಭಾನುವಾರ ರಾತ್ರಿ 8 ಮೀಟರ್ ಅಂತರದಲ್ಲಿ ಹರಿಯುತ್ತಿದ್ದು, ಸೋಮವಾರ ಬೆಳಿಗ್ಗೆ ಕೊಂಚ ಇಳಿಮುಖವಾಗಿ 7.9 ಮೀಟರ್ ಅಂತರದಲ್ಲಿ ಹರಿಯುತ್ತಿದೆ. ಮಳೆ ಬಿರುಸಿ ಇರುವುದರಿಂದ ಇನ್ನೂ ನೆರೆ ಆತಂಕ ಮನೆ ಮಾಡಿದೆ.
0 comments:
Post a Comment